ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ: ರಾಜ್ಯ ರಾಜಧಾನಿಯಲ್ಲಿ ಶಂಕಿತ ಸುಳ್ಳು ಸುದ್ದಿಗಳದ್ದೇ ಸದ್ದು

Update: 2019-05-07 16:10 GMT

ಬೆಂಗಳೂರು, ಮೇ 7: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಹಿನ್ನೆಲೆ ರಾಜಧಾನಿ ಬೆಂಗಳೂರು ವ್ಯಾಪ್ತಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ.

ಇತ್ತೀಚಿಗೆ ನಗರದ ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕರೊಬ್ಬರು, ಬೆಂಗಳೂರಿಗೆ ನಾಲ್ವರು ಉಗ್ರರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ನಗರ ಪೊಲೀಸರು, ಇದೊಂದು ಸುಳ್ಳು ವದಂತಿ, ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಸೋಮವಾರ ರಾತ್ರಿ ನಗರದ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾನೆ. ಆತನ ಬಳಿ, ಪಿಸ್ತೂಲು ಇತ್ತು ಎಂದೆಲ್ಲಾ ಸುದ್ದಿ ಹಬ್ಬಿಸಲಾಗಿದೆ. ಆತನನ್ನು ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ, ಗೇಟ್ ಹಾರಿ ಪರಾರಿಯಾದ ಎಂದೆಲ್ಲಾ ಹೇಳಲಾಗುತ್ತಿದೆ.

ಆದರೆ, ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಸ್ಪಷ್ಟನೆ ನೀಡಿದ್ದು, ಸೋಮವಾರ ಸಂಜೆ ವ್ಯಕ್ತಿಯೋರ್ವನನ್ನು ಮೆಟ್ರೋ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಆದರೆ, ಆ ವ್ಯಕ್ತಿಯ ಬಳಿ ಪಿಸ್ತೂಲು ಆಗಲಿ, ಇತರೆ ಅನುಮಾನಾಸ್ಪದ ವಸ್ತುಗಳಾಗಲಿ ಪತ್ತೆಯಾಗಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆಂದು ಮಾಹಿತಿ ನೀಡಿದರು.

ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರು ಇದರ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಅಲ್ಲದೆ, ಯಾವುದೇ ರೀತಿಯ ವ್ಯಕ್ತಿಗಳ ಬಗ್ಗೆ ಅನುಮಾನ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಅವರು ಹೇಳಿದರು.

ಬಂದೋಬಸ್ತ್: ಮುಂಜಾಗೃತ ಕ್ರಮವಾಗಿ ಮೆಟ್ರೋ ನಿಲ್ದಾಣದಲ್ಲಿ ಭದ್ರತೆ ಬಿಗಿ ಮಾಡಲಾಗಿದೆ. ಜೊತೆಗೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ ಎಂದು ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ವಿಡಿಯೋ?

ಶಂಕಿತ ವ್ಯಕ್ತಿಯೊಬ್ಬ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದ್ದು, ಆತ ನಿಲ್ದಾಣದ ಮೆಟಲ್ ಡಿಟೆಕ್ಟರ್ ದಾಟಿ ಬರುವಾಗ ಅದು ಶಬ್ದ ಮಾಡಿದೆ. ಈ ಶಬ್ದ ಬರುತ್ತಿದ್ದಂತೆಯೇ ಶಂಕಿತ ಅಲ್ಲಿಂದ ಹೊರಟು ಹೋಗಿದ್ದಾನೆ.

ಸೋಮವಾರ ರಾತ್ರಿ 8:30 ಕ್ಕೆ ಈ ಘಟನೆ ನಡೆದಿದ್ದು, ಈ ಬಗ್ಗೆ ಮೆಟ್ರೋ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್, ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನ ದಳ ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಮೆಟ್ರೋ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News