ಕುರುಬ ಜನಾಂಗ ಪರಿಶಿಷ್ಟ ಪಂಗಡದ ಪಟ್ಟಿಗೆ ?: ಕುಲಶಾಸ್ತ್ರೀಯ ಅಧ್ಯಯನಕ್ಕೆ ಸರಕಾರದ ಸೂಚನೆ

Update: 2019-05-07 16:37 GMT

ಬೆಂಗಳೂರು, ಮೇ 7: ರಾಜ್ಯದಲ್ಲಿನ ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಜ್ಜೆಯನ್ನಿಟ್ಟಿದ್ದು, ಈ ಸಂಬಂಧ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮುಂದಾಗಿದೆ.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಸಂಬಂಧ ಜನಾಂಗದ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಆ ಹಿನ್ನೆಲೆಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ಕಾರ್ಯ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು ಎನ್ನಲಾಗಿದೆ.

ಇದೀಗ ಅಧ್ಯಯನ ನಡೆಸಲು ರಾಜ್ಯ ಬುಡಕಟ್ಟು ಸಂಶೊಧನಾ ಸಂಸ್ಥೆಗೆ ಸಮಾಜ ಕಲ್ಯಾಣ ಇಲಾಖೆ ಕಾರ್ಯಾದೇಶ ನೀಡಿದೆ. ಕುರುಬ ಸಮಾಜದ ಆಚಾರ-ವಿಚಾರ, ಭಾಷೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಭೌಗೊಳಿಕ ಅಂಶಗಳ ಕುರಿತಂತೆ ಕಲಬುರಗಿ, ಬೀದರ್, ಯಾದಗಿರಿ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ 40 ಲಕ್ಷ ರೂ. ಮಂಜೂರಾತಿ ನೀಡಲಾಗಿದೆ. ಪ್ರಸ್ತುತ ಕುರುಬ ಜನಾಂಗ ಈಗ ಹಿಂದುಳಿದ ವರ್ಗಗಳ (2ಎ) ಅಡಿಯಲ್ಲಿ ಬರುತ್ತಿದ್ದು, ಶೇ.15 ಮೀಸಲಾತಿ ಕಲ್ಪಿಸಲಾಗಿದೆ. ಎಸ್ಟಿ ಪಟ್ಟಿಗೆ ಸೇರಿಸುವುದರಿಂದ ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News