ಹಿಂದಿನ ಜಾಗದಲ್ಲಿಯೇ ಸರಸ್ವತಿ ಪ್ರತಿಮೆ ಸ್ಥಾಪನೆ: ಪ್ರೊ.ವೇಣುಗೋಪಾಲ್

Update: 2019-05-07 16:48 GMT

ಬೆಂಗಳೂರು, ಮೇ 7: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸರಸ್ವತಿ ಪ್ರತಿಮೆ ಇದ್ದ ಜಾಗದಲ್ಲಿ ಬುದ್ಧನ ಪ್ರತಿಮೆ ಸ್ಥಾಪನೆಗೊಂಡಿರುವುದು ಹೊಸದೊಂದು ವಿವಾದಕ್ಕೆ ಕಾರಣವಾಗಿದೆ. 

ಬೆಂವಿವಿ ಆಡಳಿತ ಕಚೇರಿಯ ಪ್ರವೇಶ ದ್ವಾರದಲ್ಲಿ ಕಳೆದ 40ವರ್ಷಗಳಿಂದ ಸರಸ್ವತಿ ಪ್ರತಿಮೆ ಇತ್ತು. ಈ ಪ್ರತಿಮೆ ಸ್ವಲ್ಪ ಭಗ್ನಗೊಂಡಿದ್ದರಿಂದ ಆ ಜಾಗದಲ್ಲಿ ಹೊಸದೊಂದು ಸರಸ್ವತಿ ಪ್ರತಿಮೆ ಸ್ಥಾಪಿಸುವುದಕ್ಕಾಗಿ ಕೆಲವು ದಿನಗಳ ಹಿಂದೆ ಹಳೆ ಪ್ರತಿಮೆಯನ್ನು ತೆರವುಗೊಳಿಸಲಾಗಿತ್ತು. ಇದೇ ಜಾಗದಲ್ಲಿ ಕೆಲವು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಬುದ್ಧನ ಪ್ರತಿಮೆ ಸ್ಥಾಪಿಸಿರುವುದು ವಿದ್ಯಾರ್ಥಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಸರಸ್ವತಿ ಪ್ರತಿಮೆ ಇದ್ದ ಜಾಗದಲ್ಲಿಯೆ ಬುದ್ಧನ ಮೂರ್ತಿ ಸ್ಥಾಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲವು ವಿದ್ಯಾರ್ಥಿಗಳು, ಪ್ರವೇಶ ದ್ವಾರದಲ್ಲಿ ಬಳಿ 1973ರಿಂದಲೂ ಸರಸ್ವತಿ ಪ್ರತಿಮೆ ಇದೆ. ಹೊಸ ಪ್ರತಿಮೆಯನ್ನು ಮರು ಸ್ಥಾಪಿಸುವುದಕ್ಕಾಗಿಯೆ ಹಳೆ ಸರಸ್ವತಿ ಪ್ರತಿಮೆಯನ್ನು ತೆಗೆಯಲಾಗಿತ್ತು. ಈ ಮಧ್ಯೆ ಬುದ್ಧ ಮೂರ್ತಿ ಕೂರಿಸಿದ್ದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಲಪತಿಗಳ ಕಚೇರಿವರೆಗೂ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಪ್ರತಿಮೆ ವಿವಾದ ವಿದ್ಯಾರ್ಥಿಗಳ ಗುಂಪುಗಾರಿಕೆಗೆ ಕಾರಣವಾಗಲಿದೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ಬುದ್ಧನ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಯಾವುದೆ ವಿರೋಧವಿಲ್ಲ. ಆದರೆ, ಸರಸ್ವತಿ ಇದ್ದ ಜಾಗದಲ್ಲಿ ಸ್ಥಾಪಿಸುವುದು ಬೇಡ. ವಿವಿಯ ಆವರಣದಲ್ಲಿ ಬೇರೆ ಎಲ್ಲಾದರು ಸ್ಥಾಪಿಸಲಿ ಎಂದು ಪಟ್ಟು ಹಿಡಿದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್ ಸಭೆ ನಡೆಸಿದ ಉಪಕುಲಪತಿ ವೇಣುಗೋಪಾಲ್, ಈ ಹಿಂದಿನ ಜಾಗದಲ್ಲಿಯೆ ಸರಸ್ವತಿ ಪ್ರತಿಮೆಯನ್ನು ಮರು ಸ್ಥಾಪಿಸಲಾಗುವುದು. ಆದರೆ, ವಿವಿಯ ಆವರಣದಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸುವುದಕ್ಕೆ ಯಾರಿಂದಲೂ ವಿರೋಧವಿಲ್ಲ. ಬುದ್ಧನ ಪ್ರತಿಮೆಯನ್ನು ಎಲ್ಲಿ ಸ್ಥಾಪಿಸಬೇಕೆಂಬುದಕ್ಕೆ ಸಿಂಡಿಕೇಟ್‌ನ ಉಪಸಮಿತಿಯನ್ನು ರಚಿಸಲಾಗಿದೆ. ವಿದ್ಯಾರ್ಥಿಗಳು, ಸಿಬ್ಬಂದಿಗಳ ಜತೆ ಚರ್ಚಿಸಿ ಸೂಕ್ತ ಜಾಗದಲ್ಲಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News