ರಾಜ್ಯ ರಾಜಧಾನಿಯ ಜನತೆಗೆ ಮಳೆಯೆಂದರೆ ಆತಂಕ: ಕಾರಣವೇನು ಗೊತ್ತೇ ?

Update: 2019-05-07 17:24 GMT

ಬೆಂಗಳೂರು, ಮೇ 7: ರಾಜಧಾನಿಯಲ್ಲಿ ಪ್ರತಿ ವರ್ಷದ ಮಳೆಗಾಲದಲ್ಲಿಯೂ ಸಾವು- ನೋವು ಸಂಭವಿಸುತ್ತಿದ್ದು, ಹಲವು ಬಡಾವಣೆಗಳು ಅಕ್ಷರಶಃ ಕೆರೆಗಳಂತಾಗುತ್ತಿವೆ. ಮಳೆಗೆ ನೂರಾರು ಮರಗಳು ಧರೆಗುರುಳಿದರೆ, ಪ್ರಮುಖ ರಸ್ತೆಗಳ ಗುಂಡಿಗಳು ಬಾಯ್ತೆರೆಯುತ್ತಿವೆ. ಇದರಿಂದ ಮಳೆಯೆಂದರೆ ನಗರದ ಜನತೆಗೆ ಆತಂಕವೇ ಹೆಚ್ಚು.

ಪ್ರತಿವರ್ಷ ಮಳೆಗಾಲಕ್ಕೆ ಬಿಬಿಎಂಪಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ಮಳೆ ಬಂದಾಗಲೇ ಸಮಸ್ಯೆಯ ಅಸಲಿಯತ್ತು ತೆರೆದುಕೊಳ್ಳುತ್ತದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ ಮಳೆಗೆ ಮೂವರು ಅಮಾಯಕರು ಬಲಿಯಾಗಿದ್ದು, ಬಿಬಿಎಂಪಿ ಎಷ್ಟರ ಮಟ್ಟಿಗೆ ಮಳೆಗಾಲಕ್ಕೆ ಸಿದ್ಧತೆಯಾಗಿದೆ ಎಂಬುದು ಬಯಲಾಗಿದೆ. ಹೀಗಾಗಿ ನಗರದ ಜನತೆಯ ಪಾಲಿಗೆ ಮಳೆ ಖುಷಿಗಿಂತಲೂ ಹೆಚ್ಚು ಭಯ ಮೂಡಿಸುತ್ತಿದೆ.

ಮಳೆಯಿಂದ ಅನಾಹುತಕ್ಕೆ ಈಡಾದ ಪ್ರದೇಶಗಳಲ್ಲಿ ಮಾತ್ರ ಸುರಕ್ಷತಾ ಕಾಮಗಾರಿಗಳಿಗೆ ಪಾಲಿಕೆ ಪ್ರತಿ ವರ್ಷ ಆದ್ಯತೆ ನೀಡುತ್ತಿದ್ದು, ಮತ್ತೆ ಮಳೆಗಾಲ ಬಂದಾಗಲೇ ಅನಾಹುತ ಸಂಭವಿಸುವ ಸ್ಥಳಗಳ ಬಗ್ಗೆ ಯೋಚಿಸುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡಲಷ್ಟೇ ಮುಂದಾಗುತ್ತಿದೆ. ಇದರಿಂದ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ಪ್ರತಿವರ್ಷ ಹೊಸ ಬಡಾವಣೆಗಳು ಸೇರ್ಪಡೆಗೊಳ್ಳುತ್ತಲೇ ಇವೆ.

ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಸುರಿದ ದಾಖಲೆಯ ಮಳೆಗೆ ಅಪಾರ ಸಾವು- ನೋವು ಸಂಭವಿಸಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹಾನಿಗೀಡಾಗಿದೆ. ಆದರೂ, ಈ ಬಾರಿಯ ಮಳೆಗಾಲಕ್ಕೆ ಬಿಬಿಎಂಪಿ ಇನ್ನೂ ಸಂಪೂರ್ಣವಾಗಿ ಸಜ್ಜಾಗಿಲ್ಲ. ಪರಿಣಾಮ ಮಳೆಗಾಲಕ್ಕೆ ಮೊದಲೇ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಹಿಂಸೆ ಅನುಭವಿಸಿದ್ದಾರೆ.

ಮೂರು ವರ್ಷಗಳಲ್ಲಿ 400ಕ್ಕೂ ಹೆಚ್ಚಿನ ಪ್ರದೇಶಗಳು ಮಳೆಯಿಂದ ಅನಾಹುತಕ್ಕೆ ಒಳಗಾಗಿದ್ದು, ಅನಾಹುತ ಸಂಭವಿಸಿದ ಪ್ರದೇಶದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ಹಾಗೆಯೇ ಉಳಿದಿದೆ. ಪ್ರತಿವರ್ಷ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡುವ ಪಾಲಿಕೆಯು ಆ ಪ್ರದೇಶಗಳಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂಬುದು ಟೀಕೆಗೆ ಕಾರಣವಾಗಿದೆ.

ರಾಜಕಾಲುವೆ ಹೂಳು: ಮಳೆಗಾಲಕ್ಕೆ ಮೊದಲು ರಾಜಕಾಲುವೆಗಳಲ್ಲಿನ ಹೂಳು ತೆಗೆಯುವ ಪರಿಪಾಠ ಪಾಲಿಕೆಯಿಂದ ನಡೆಯುತ್ತಿದ್ದರೂ, ರಾಜಕಾಲುವೆಗಳು ಮಾತ್ರ ಪ್ರತಿವರ್ಷ ಉಕ್ಕಿಹರಿಯುತ್ತಲೇ ಇವೆ. ಕಳೆದ ಎರಡು ವರ್ಷಗಳಲ್ಲಿ 200 ಕಿ.ಮೀ.ಗೂ ಉದ್ದ ಕಾಲುವೆಗಳಲ್ಲಿ ಹೂಳು ತೆರವುಗೊಳಿಸಿದ್ದು, ಇನ್ನೂ 600 ಕಿ.ಮೀ. ಉದ್ದದ ಕಾಲುವೆಗಳಲ್ಲಿ ಹೂಳು ತೆಗೆಯಬೇಕಿದೆ. ಜತೆಗೆ ರಸ್ತೆ ಬದಿಯ ಕಿರು ಚರಂಡಿಗಳ ಸ್ವಚ್ಛತೆಗೆ ಪಾಲಿಕೆಯಿಂದ 70ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಿ, ಪ್ರತಿ ತಂಡಕ್ಕೆ ಮಾಸಿಕ 1 ಲಕ್ಷ ರೂ. ಪಾವತಿಸಿದರೂ ಮಳೆನೀರು ಮಾತ್ರ ರಸ್ತೆಗಳಲ್ಲಿಯೇ ಹರಿಯುತ್ತಿರುವುದು ವಿಪರ್ಯಾಸದ ಸಂಗತಿ.

ಸಮಸ್ಯೆಗೆ ಕಾರಣವೇನು?: ವಿವಿಧ ಉದ್ದೇಶಗಳಿಗಾಗಿ ನಗರದ ಸಾವಿರಾರು ಭಾಗಗಳಲ್ಲಿ ರಾಜಕಾಲುವೆ ಪಥ ಬದಲಾವಣೆ ಮಾಡಲಾಗಿದೆ. ಪರಿಣಾಮ ಮಳೆ ನೀರು ದಿಕ್ಕಾಪಾಲಾಗಿ ಹರಿಯುತ್ತಿದ್ದು, ವೇಗ ಹೆಚ್ಚಿದಾಗ ಅನಾಹುತ ಸೃಷ್ಟಿಯಾಗುತ್ತಿದೆ. 2016ರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಕೈಗೊಂಡ ಆರಂಭದಲ್ಲಿ ಶೂರತ್ವ ಮೆರೆದಿದ್ದ ಪಾಲಿಕೆಯು, ಪ್ರಭಾವಿಗಳ ಕಟ್ಟಡಗಳು ಒತ್ತುವರಿ ಸ್ಥಳದಲ್ಲಿರುವುದು ಬೆಳಕಿಗೆ ಬಂದ ಕೂಡಲೇ ತೆರವು ಕಾರ್ಯಾಚರಣೆ ಕೈಬಿಟ್ಟಿದೆ. ಇನ್ನೂ 2 ಸಾವಿರಕ್ಕೂ ಹೆಚ್ಚಿನ ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕಿರುವುದರಿಂದ ಸಮಸ್ಯೆ ಜೀವಂತವಾಗಿದೆ.

ರಾಜಕಾಲುವೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ತಡೆಗೋಡೆಗಳನ್ನು ಎತ್ತರಿಸಬೇಕು. ತಗ್ಗು ಪ್ರದೇಶ ಮತ್ತು ಕೆರೆಗಳಲ್ಲಿ ಹೂಳು ತೆಗೆಯಬೇಕು. ಒಳಚರಂಡಿ ನೀರು ಹರಿಯದಂತೆ ತ್ಯಾಜ್ಯನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಬೇಕಿದೆ.

-ರವಿಚಂದರ್, ನಗರ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News