ನೀರಿನ ಸಂಪ್‌ನಲ್ಲಿ ಮುಳುಗಿ ಬಾಲಕಿ ಮೃತ್ಯು: ಕೊಲೆ ಶಂಕೆ

Update: 2019-05-07 16:58 GMT

ಬೆಂಗಳೂರು, ಮೇ 7: ಬಾಲಕಿಯೊಬ್ಬಾಕೆ ಸಂಪ್‌ನಲ್ಲಿ ಮುಳುಗಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಚೂರು ಮೂಲದ ಪಾರ್ವತಮ್ಮ ಮತ್ತು ಬುಗ್ಗಪ್ಪದಂಪತಿ ಪುತ್ರಿ ಜ್ಯೋತಿ(12) ಎಂಬಾಕೆ ಮೃತ ಬಾಲಕಿ ಎಂದು ಗುರುತಿಸಲಾಗಿದ್ದು, ಮಂಗಳವಾರ ಇಲ್ಲಿನ ರಾಜಗೋಪಾಲನಗರದ ಅಲ್ಪನಾಥ್ ಎಂಬುವರ ನಿವಾಸದ ನೀರಿನ ಸಂಪ್‌ನಲ್ಲಿ ಜ್ಯೋತಿಯ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕೊಲೆ ಆರೋಪ?: ಬಾಲಕಿ ಜ್ಯೋತಿಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಜ್ಯೋತಿ ಸಂಪ್‌ನಲ್ಲಿ ಬಿದ್ದಿರುವುದನ್ನು ಕಂಡ ಆಕೆಯ ಆರು ವರ್ಷದ ಸಹೋದರಿ ಮನೆ ಮಾಲಕನನ್ನು ಸಂಪ್‌ನ ಬಾಗಿಲು ತೆರೆಯುವಂತೆ ಕೂಗಿ ಕರೆದಿದ್ದಾಳೆ. ಆದರೆ, ಮಾಲಕ ಅಲ್ಪನಾಥ್, ಬಾಗಿಲು ತೆರೆಯಲು ನಿರಾಕರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಬಳಿಕ, ಜ್ಯೋತಿ ಅವರ ಪೋಷಕರು, ಸ್ಥಳಕ್ಕಾಗಮಿಸಿ ಮಾಲಕನನ್ನು ನೂಕಿ ಸಂಪ್‌ನ ಬಾಗಿಲು ತೆರೆದು ಶವವನ್ನು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಲ್ಪನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ತಾನು ಕೊಲೆ ಮಾಡಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಸಂಪ್‌ನಲ್ಲಿ ಕೇವಲ 6 ರಿಂದ 7 ಅಡಿ ನೀರಿದ್ದು, ಅದರಲ್ಲಿ ಬಾಲಕಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಇದು ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ರಾಜಗೋಪಾಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News