ಬಸವಣ್ಣರ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಲು ಸಿಎಂ ಜತೆ ಚರ್ಚಿಸುತ್ತೇನೆ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-05-07 17:00 GMT

ಬೆಂಗಳೂರು, ಮೇ 7: ಹನ್ನೆರಡನೆಯ ಶತಮಾನದಲ್ಲಿ ಜನ್ಮತಾಳಿದ ಮಹಾಪುರುಷ ಬಸವಣ್ಣನವರು ಈ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ರಚಿಸಿದ ವಚನಗಳು ಹಾಗೂ ಬಸವಣ್ಣನವರ ಕುರಿತ ಜೀವನಚರಿತ್ರೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಹೇಳಿದ್ದಾರೆ.

ಮಂಗಳವಾರ ನಗರದ ವೀರಶೈವ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೇಲು-ಕೀಳು ಎಂಬ ಜಾತಿಯೇ ಉಸಿರಾಡುತ್ತಿದ್ದ ಕಾಲದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸ್ಥಾನವನ್ನು ನೀಡಿ, ಸಮ ಸಮಾಜವನ್ನು ಕಟ್ಟಲು ಹೋರಾಡಿದರು. ಇಂತಹ ಮಹನೀಯರ ಕುರಿತ ಜೀವನಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸಲು ಎಚ್‌ಡಿಕೆ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ಇಂದಿನ ಮಕ್ಕಳು ಮೊಬೈಲ್ ಲೋಕದಲ್ಲಿ ಮುಳುಗಿದ್ದು, ಯಾವುದೇ ಆಟ, ಪಾಠದ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಿಲ್ಲ. ಈ ಕಾರಣದಿಂದಲೇ ಬಸವಣ್ಣ ಸೇರಿ ಇತರೆ ಮಹನೀಯರ ಬಗ್ಗೆ ಅವರಿಗೆ ಅರಿಯಲು ಆಗುತ್ತಿಲ್ಲ. ಆದರೆ, ನಾನು ಮೊದಲಿನಿಂದಲೂ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿಯೆ ನಡೆದಿದ್ದು, ಕಾಯಕವೇ ಕೈಲಾಸ ಎಂಬ ನುಡಿಗೆ ಈಗಲೂ ಬದ್ಧಳಾಗಿದ್ದೇನೆ ಎಂದು ಹೇಳಿದರು.

ವೈದ್ಯೆ ಡಾ.ಶಾಲಿನಿ ಮಾತನಾಡಿ, ಬಸವಣ್ಣನವರು ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವುದಕ್ಕಾಗಿ ತಮ್ಮ ಮನೆಯನ್ನೆ ತೊರೆದು ಹೊರ ಬಂದರು. ಬಸವಣ್ಣನವರ ಸಮಕಾಲೀನವರಾದ ಅಲ್ಲಮಪ್ರಭು, ಅಕ್ಕಮಹಾದೇವಿ ಅವರು 12ನೆ ಶತಮಾನದಲ್ಲಿ ಬಸವಣ್ಣನವರನ್ನು ಗುರುಗಳೆಂದು ಒಪ್ಪಿಕೊಂಡಿದ್ದರು. ಆದರೆ, ಈ ಗುರುವಿನ ಸ್ಥಾನ ಇವತ್ತಿಗೂ ಲಭಿಸಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿ.ಎಸ್.ಸಚ್ಚಿದಾನಂದಮೂರ್ತಿ, ಭಾವನ ಆರ್.ಗೌಡ, ಎಚ್.ಎಂ.ರೇಣುಾ ಪ್ರಸನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News