ಚುನಾವಣೆಯಲ್ಲಿ ಅಣ್ವಸ್ತ್ರ ಬಳಸಲು ಹೊರಟ ಮೋದಿ

Update: 2019-05-08 05:14 GMT

ಅಣ್ವಸ್ತ್ರ ಜಗತ್ತನ್ನು ಒಂದಲ್ಲ ಒಂದು ದಿನ ವಿನಾಶದ ಹಾದಿಗೆ ತಲುಪಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸದ್ಯಕ್ಕೆ ಯಾವುದೇ ದೇಶದ ಮೇಲೆ ಇನ್ನೊಂದು ದೇಶ ಯುದ್ಧ ಮಾಡದೇ ಇರುವುದಕ್ಕೆ ಅಣ್ವಸ್ತ್ರ ಹೊಂದಿರುವುದು ಒಂದು ಕಾರಣ ಎನ್ನುವುದನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಜಗತ್ತಿನಲ್ಲಿ ಯಾವೆಲ್ಲ ದೇಶಗಳು ಅಣ್ವಸ್ತ್ರಗಳನ್ನು ಹೊಂದಿಲ್ಲವೋ ಅವೆಲ್ಲವೂ ಇನ್ನೊಂದು ಪ್ರಬಲ ದೇಶದಿಂದ ಭೀಕರ ದಾಳಿಗೆ ಒಳಗಾಗಿವೆ. ಮಾರಕ ರಾಸಾಯನಿಕ ಅಸ್ತ್ರ ಹೊಂದಿದೆ ಎಂದು ಅಮೆರಿಕ ಇರಾಕ್‌ನ ಮೇಲೆ ದಾಳಿ ಮಾಡಿತು. ಆದರೆ ಇರಾಕ್‌ನ ಬಳಿ ಯಾವುದೇ ಮಾರಕಾಸ್ತ್ರ ಇದ್ದಿರಲಿಲ್ಲ. ಒಂದು ವೇಳೆ ಇರಾಕ್ ಅಣ್ವಸ್ತ್ರ ಹೊಂದಿದ್ದರೆ ಅಮೆರಿಕ ದಾಳಿ ಮಾಡುತ್ತಿತ್ತೇ? ಇಂದು ಇರಾನ್ ವಿರುದ್ಧವಾಗಲಿ, ಉತ್ತರ ಕೊರಿಯದ ವಿರುದ್ಧವಾಗಲಿ ಅಮೆರಿಕ ದಾಳಿ ನಡೆಸದೇ ಇರುವುದಕ್ಕೆ ಮುಖ್ಯ ಕಾರಣ ಅವರಲ್ಲಿರುವ ಅಣ್ವಸ್ತ್ರ ಕೂಡ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು. ಅಷ್ಟೇ ಏಕೆ, ಪಾಕಿಸ್ತಾನ-ಭಾರತ ಇವುಗಳಲ್ಲಿ ಅಣ್ವಸ್ತ್ರ ಇಲ್ಲದೆ ಇದ್ದಿದ್ದರೆ ಉಭಯ ದೇಶಗಳ ನಡುವೆ ಅವೆಷ್ಟು ಯುದ್ಧಗಳು ನಡೆದು ಬಿಡುತ್ತಿದ್ದವೋ ಏನೋ? ಅಣ್ವಸ್ತ್ರ ಶತ್ರು ದೇಶದ ಜೊತೆಗೆ ಇತರ ದೇಶಗಳನ್ನೂ ನಾಶ ಮಾಡಬಹುದೆಂಬ ಭಯವೇ ಉಪಖಂಡವನ್ನು ಒಂದಿಷ್ಟು ಶಾಂತಿಯಲ್ಲಿಟ್ಟಿದೆ.

 ಆದರೆ ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಣ್ವಸ್ತ್ರ ಪದವನ್ನು ಕೂಡ ಬಳಕೆ ಮಾಡಿಬಿಟ್ಟರು. ಅವರು ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ‘‘ನಮ್ಮ ಬಳಿ ಅಣುಬಾಂಬುಗಳಿರುವುದು ದೀಪಾವಳಿಯಲ್ಲಿ ಬಳಸಲೆಂದಲ್ಲ’’ ಎಂಬ ಹೊಣೆಗೇಡಿ ಹೇಳಿಕೆಯನ್ನು ನೀಡಿದರು. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಅಣ್ವಸ್ತ್ರ ಬಟನ್ ಬಗ್ಗೆ ನೀಡಿರುವ ಹೇಳಿಕೆಯನ್ನು ನೆನಪಿಸುವ ಮೋದಿಯ ಮಾತು, ಒಬ್ಬ ಪ್ರಧಾನಿಯಾಗಿ ಪಾಲಿಸಬೇಕಾದ ಸಂಯಮ ಮುನ್ನೆಚ್ಚರಿಕೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ ಭಾರತವು ಈವರೆಗೆ ಒಂದು ಜವಾಬ್ದಾರಿಯುತ ಮತ್ತು ಪ್ರಬುದ್ಧ ಅಣ್ವಸ್ತ್ರ ರಾಷ್ಟ್ರವಾಗಿ ನಡೆದುಕೊಂಡು ಬಂದಿರುವ ಇತಿಹಾಸಕ್ಕೆ ಅದು ಧಕ್ಕೆ ತಂದಿದೆ.

ಭಾರತವು 1974ರ ವೇಳೆಗಾಗಲೇ ಒಂದು ಕನಿಷ್ಠ ಅಣ್ವಸ್ತ್ರ ಸಾಮರ್ಥ್ಯವನ್ನು ಗಳಿಸಿಕೊಂಡಾಗಿತ್ತು. ಆದರೆ ಕೆಲವು ಕಾನೂನಾತ್ಮಕ, ತಾಂತ್ರಿಕ ಮತ್ತು ಈ ಭೂಪ್ರದೇಶದ ರಾಜಕೀಯ ಕಾರಣಗಳಿಂದಾಗಿ ಆ ಸಾಮರ್ಥ್ಯವನ್ನು ಜಾಹೀರುಗೊಳಿಸಿರಲಿಲ್ಲ. ಆದರೆ 1998ರಲ್ಲಿ ಭಾರತವು ಬಹಿರಂಗವಾಗಿ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಘೋಷಿಸಿ ಅದಕ್ಕೆ ಬೇಕಾದ ಇನ್ನಿತರ ಕ್ರಮಗಳನ್ನು ತೆಗೆದುಕೊಂಡರೂ, ತಾನು ಈ ಅಣ್ವಸ್ತ್ರವನ್ನು ಹೊಂದಿರುವುದು ಶತ್ರು ದಾಳಿಯ ಭೀತಿಯನ್ನು ಎದುರಿಸಲೆಂದೇ ಹೊರತು ಎಂದಿಗೂ ತಾನು ಅವುಗಳನ್ನು ತನ್ನ ಶತ್ರುಗಳ ವಿರುದ್ಧ ಪ್ರಯೋಗಿಸಲು ಮೊದಲು ಮುಂದಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಆದರೆ ಈಗ ಅದಕ್ಕೆ ತದ್ವಿರುದ್ಧವಾಗಿ ಮೋದಿಯವರು ಮಾಡಿರುವ ಭಾಷಣವು ಲಜ್ಜೆಗೇಡಿ ಯುದ್ಧದಾಹಿತನವನ್ನು ತೋರುತ್ತಿದೆಯಲ್ಲದೆ ಈಗಾಗಲೇ ಅಣ್ವಸ್ತ್ರಗಳ ಪೆಟ್ಟಿಗೆಯ ಮೇಲೆ ಕೂತಿರುವ ಈ ಭೂಪ್ರದೇಶದ ಭವಿಷ್ಯದ ಮೇಲೆ ತೀವ್ರವಾದ ಪರಿಣಾಮವನ್ನೂ ಸಹ ಬೀರಲಿದೆ.

ಮೋದಿಯ ಹೇಳಿಕೆ ಪಾಕಿಸ್ತಾನಕ್ಕೆ ಲಾಭದಾಯಕವೂ ಆಗಿದೆ. ಹಿಂದೆ ಪಾಕಿಸ್ತಾನದ ರಾಜಕೀಯ ಹಾಗೂ ಮಿಲಿಟರಿ ನಾಯಕರೂ ತಾವೂ ಸಹ ಅಣ್ವಸ್ತ್ರ ಸ್ಫೋಟದ ಗುಂಡಿಯನ್ನು ಒತ್ತಲು ಹಿಂದೆ ಮುಂದೆ ನೋಡುವುದಿಲ್ಲವೆಂದೂ ಬಡಾಯಿ ಕೊಚ್ಚಿಕೊಂಡಿದ್ದರು. ಅಮೆರಿಕ ಮತ್ತು ರಶ್ಯಾಗಳು ಶೀತಲ ಯುದ್ಧದ ಅವಧಿಯುದ್ದಕ್ಕೂ ಒಬ್ಬರನ್ನೊಬ್ಬರು ಗುರಿಮಾಡಿಕೊಂಡು ಸಾವಿರಾರು ಅಣ್ವಸ್ತ್ರಗಳನ್ನು ಸನ್ನದ್ಧಗೊಳಿಸಿಟ್ಟುಕೊಂಡು ಸರ್ವಾನಾಶದ ಆತಂಕದಲ್ಲೇ ಕಾಲದೂಡಿದ್ದವು. ಆದರೆ ನಂತರದಲ್ಲಿ ಎರಡೂ ದೇಶಗಳೂ ವಿವೇಕಯುತವಾಗಿ ವರ್ತಿಸಲು ಪ್ರಾರಂಭಿಸಿವೆ. ಫ್ರೆಂಚ್ ಮತ್ತು ಬ್ರಿಟಿಷ್ ಸರಕಾರಗಂತೂ ತಮ್ಮ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡುವುದಿಲ್ಲ. ಚೀನಾ ಸಹ ಈ ಬಗ್ಗೆ ತನ್ನ ಹೇಳಿಕೆಗಳನ್ನು ಕೂಡಾ ನಿಗೂಢವಾಗಿಯೂ ಮತ್ತು ಅಳೆದು ಸುರಿದೂ ಕೊಡುತ್ತದೆ. ಈಗ ಜಗತ್ತಿನಲ್ಲಿ ಘೋಷಿತ ಅಣ್ವಸ್ತ್ರ ರಾಷ್ಟ್ರಗಳಾಗಿರುವ ಅಮೆರಿಕ, ರಶ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್‌ಗನ್ನು ಬಿಟ್ಟರೆ ಇಸ್ರೇಲ್ ದೇಶವು 1960ರ ವೇಳೆಗೆ ಅಣ್ವಸ್ತ್ರ ಬಲವನ್ನು ಪಡೆದುಕೊಂಡಿದ್ದರೂ ಮತ್ತು ಮೇಲಿನ ಐದು ದೇಶಗಳನ್ನು ಬಿಟ್ಟರೆ ಜಗತ್ತಿನಲ್ಲೇ ಅತ್ಯಾಧುನಿಕ ಮತ್ತು ಅತ್ಯಂತ ಸುಧಾರಿತ ಅಣ್ವಸ್ತ್ರ ಯೋಜನೆಯನ್ನು ಹೊಂದಿರುವ ದೇಶವಾಗಿದ್ದರೂ ಈವರೆಗೆ ತನ್ನ ಬಳಿ ಅಣ್ವಸ್ತ್ರ ಇದೆಯೆಂದು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ ಮತ್ತು ಈ ವಿಷಯದ ಬಗ್ಗೆ ಅದು ಪಾಲಿಸಿಕೊಂಡಿರುವ ವೌನ ಆ ಭೂಭಾಗದಲ್ಲಿ ಅದರ ಭದ್ರತಾ ಮತ್ತು ವ್ಯೆಹಾತ್ಮಕ ಆಸಕ್ತಿಗಳಿಗೆ ಸಹಾಯವನ್ನೇ ಮಾಡಿದೆ.

ಆದರೆ ಮೋದಿಯವರು ಕೊಚ್ಚಿಕೊಳ್ಳುತ್ತಿರುವ ಬಡಾಯಿಗಳು ಭಾರತವು ಬಹಿರಂಗವಾಗಿ ಘೋಷಿಸಿಕೊಳ್ಳುವ ಅಣ್ವಸ್ತ್ರ ಸಂಯಮದ ನಿಲುವುಗಳಿಗೆ ತದ್ವಿರುದ್ಧವಾಗಿದೆ ಮತ್ತು ಅದರಿಂದಾಗಿ ಜಗತ್ತು ಬೇಜವಾಬ್ದಾರಿ ಪ್ರಭುತ್ವಗಳೆಂದು ಪರಿಗಣಿಸುವ ರಾಷ್ಟ್ರಗಳ ಸಾಲಿಗೆ ಭಾರತವನ್ನೂ ಸೇರಿಸಿಬಿಡುವ ಅಪಾಯವೂ ಇದೆ. ಇದರ ಅರ್ಥ ಭಾರತವು ತನ್ನದೇ ಆದ ಅಣ್ವಸ್ತ್ರ ಯೋಜನೆಯನ್ನು ಹೊಂದಬಾರದೆಂದೇನೂ ಅಲ್ಲ. ಹಾಗೆಯೇ ತಾರತಮ್ಯದಿಂದ ಕೂಡಿದ ಅಣ್ವಸ್ತ್ರ ಪ್ರಸರಣ ವಿರೋಧಿ ಒಪ್ಪಂದಕ್ಕೆ ಸಹಿ ಮಾಡಬೇಕೆಂದೂ ಅಲ್ಲ. ಜಗತ್ತನ್ನು ಅಣ್ವಸ್ತ್ರ ಮುಕ್ತವನ್ನಾಗಿ ಮಾಡುವ ಯಾವುದೇ ವಿಶ್ವಾಸಾರ್ಹ ಮತ್ತು ಕಾಲಬದ್ಧ ಜಾಗತಿಕ ಪ್ರಯತ್ನಗಳು ನಡೆಯುತ್ತಿಲ್ಲದ ಇವತ್ತಿನ ಸಂದರ್ಭದಲ್ಲಿ ಮತ್ತು ವೈರತ್ವದಿಂದ ಕೂಡಿರುವ ಅಣ್ವಸ್ತ್ರ ಶಕ್ತಿಬಲಗಳುಳ್ಳ ನೆರೆಹೊರೆಯಿಂದ ಸುತ್ತುವರಿಯಲ್ಪಟ್ಟಿರುವ ಸನ್ನಿವೇಶದಲ್ಲಿ ತನ್ನ ವ್ಯೆಹಾತ್ಮಕ ಮತ್ತು ರಾಷ್ಟ್ರೀಯ ಭದ್ರತೆಗಳ ದೃಷ್ಟಿಯಿಂದ ಶತ್ರುಗಳನ್ನು ಹಿಮ್ಮೆಟ್ಟಿಸುವಷ್ಟು ಅಣ್ವಸ್ತ್ರ ಸಾಮರ್ಥ್ಯವನ್ನು ಭಾರತವು ಸಾಧಿಸುವ ಅಗತ್ಯವಿದೆ ಎಂದು ಖಂಡಿತಾ ವಾದಿಸಬಹುದು. ಆದರೆ ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ಅದರ ವಿನಿಯೋಜನೆಯಲ್ಲಿ ಮತ್ತು ಅದರ ನಾಯಕರ ಸಾರ್ವಜನಿಕ ವರ್ತನೆಗಳಲ್ಲಿ ಅತ್ಯಂತ ಸಂಯಮವನ್ನೂ ಕಾದುಕೊಳ್ಳುವುದು ಅತ್ಯಂತ ಅಗತ್ಯವಾಗುತ್ತದೆ. ಏಕೆಂದರೆ ಒಂದೇ ಒಂದು ತಪ್ಪುಲೆಕ್ಕಾಚಾರ ಅಥವಾ ಒಂದು ರಾಷ್ಟ್ರದ ನಡೆಗಳ ತಪ್ಪುವ್ಯಾಖ್ಯಾನಗಳು ದೊಡ್ಡ ದೊಡ್ಡ ದುರಂತಕ್ಕೆ ದಾರಿಮಾಡಿಕೊಡುತ್ತವೆೆ.

ದೊಡ್ಡ ಮಟ್ಟದಲ್ಲಿ ನಡೆಯುವ ಒಂದು ಅಣುಯುದ್ಧವು ಪರಿಸರದ ಮೇಲೆ ಊಹಿಸಲಸಾಧ್ಯವಾದ ಪ್ರಾದೇಶಿಕ ಮತ್ತು ಜಾಗತಿಕ ಪರಿಣಾಮವನ್ನು ಬೀರುತ್ತದೆ. ಒಂದು ಅಣ್ವಸ್ತ್ರ ದಾಳಿಯಾದ ನಂತರದಲ್ಲಿ ಆ ನಗರದ ಅಥವಾ ಆ ಪ್ರದೇಶದ ಆರೋಗ್ಯ ವ್ಯವಸ್ಥೆಗಳು ಸಂಪೂರ್ಣವಾಗಿ ಹದಗೆಡುತ್ತವೆಂದೂ ಮತ್ತು ಅದರಿಂದಾಗಿ ಸತ್ತವರಿಗಿಂತ ತೀವ್ರ ನರಕಬಾಧೆ ಅನುಭವಿಸುವ ಗಾಯಾಳುಗಳಿಗೆ ಯಾವುದೇ ವೈದ್ಯಕೀಯ ನೆರವನ್ನೂ ಒದಗಿಸಲಾಗದ ಪರಿಸ್ಥಿತಿ ಉಂಟಾಗುತ್ತದೆಂದೂ ವೈದ್ಯ ಪರಿಣಿತರು ಈಗಾಗಲೇ ಜಗತ್ತಿಗೆ ಎಚ್ಚರಿಸಿದ್ದಾರೆ. ಈ ಬಗೆಯ ಸಂಭಾವ್ಯ ಚಿತ್ರಣಗಳು ಜಗತ್ತಿನಾದ್ಯಂತ ಅಣ್ವಸ್ತ್ರಗಳ ವಿರುದ್ಧ ಪ್ರಬಲವಾದ ಜಾಗತಿಕ ತಿರಸ್ಕಾರವನ್ನು ಹುಟ್ಟುಹಾಕಿದೆ ಹಾಗೂ ಅವು ಈವರೆಗೆ ಅನ್ವೇಷಿಸಲಾದ ಅತ್ಯಂತ ಅಪ್ರಯೋಜಕ ಅಸ್ತ್ರವೆಂಬ ತಲೆಪಟ್ಟಿಯನ್ನೂ ಪಡೆದುಕೊಂಡಿವೆೆ ಹಾಗೂ ಯಾವ ಕಾರಣಕ್ಕೂ ಅಣ್ವಸ್ತ್ರಗಳನ್ನು ಬಳಸಬಾರದೆಂಬ ಕೂಗು 1945ರ ನಂತರದಲ್ಲಿ ಒಂದು ಬಲಿಷ್ಠ ಪರಂಪರೆಯಾಗಿ ಮುಂದುವರಿದುಕೊಂಡು ಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News