ಏಳು ಮೀನುಗಾರರ ಸಾವಿಗೆ ಯಾರು ಹೊಣೆ?

Update: 2019-05-09 05:49 GMT

ಇಂದು ಕಡಲಲ್ಲೂ ಗಡಿ ತಿಕ್ಕಾಟಗಳು ಆರಂಭವಾಗಿವೆ. ಮೀನುಗಾರರು ಇಂದು ಕಡಲ ತೆರೆಗಳಿಗಿಂತ, ಮನುಷ್ಯ ನಿರ್ಮಿತ ಈ ಗಡಿಗಳೇ ದೊಡ್ಡ ಸಮಸ್ಯೆಯಾಗಿದೆ. ಶ್ರೀಲಂಕಾ ಸೇನೆಯ ಗುಂಡಿಗೆ ಭಾರತದ ನೂರಾರು ಮೀನುಗಾರರು ಬಲಿಯಾಗಿದ್ದಾರೆ. ಎರಡೂ ದೇಶಗಳ ನಡುವೆ ಈ ಕಾರಣಕ್ಕಾಗಿಯೇ ಸಂಬಂಧಗಳು ಹಲವು ಬಾರಿ ಬಿಗಡಾಯಿಸಿವೆ. ಹಾಗೆಯೇ ಪಾಕಿಸ್ತಾನದ ಮೀನುಗಾರರು ಭಾರತದ ಜೈಲುಗಳಲ್ಲಿ, ಭಾರತದ ಮೀನುಗಾರರು ಪಾಕಿಸ್ತಾನದ ಜೈಲುಗಳಲ್ಲಿ ಗಡಿದಾಟಿದ ಕಾರಣಕ್ಕಾಗಿ ಕೊಳೆಯುತ್ತಿದ್ದಾರೆ. ಇಟಲಿಯ ಹಡಗೊಂದರ ನಾವಿಕರು ಕೇರಳ ಕರಾವಳಿಯಲ್ಲಿ ಇಬ್ಬರು ಮೀನುಗಾರರನ್ನು ಕೊಂದು ಹಾಕಿರುವುದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಸ್ತುವಾಯಿತು. ವಿವಿಧ ಪತ್ರಿಕೆಗಳ ಮುಖಪುಟಗಳಲ್ಲಿ ವರದಿಗಳು ಪ್ರಕಟವಾದವು. ಇಬ್ಬರು ಇಟಲಿ ನಾವಿಕರು ಕೊನೆಗೂ ಶಿಕ್ಷೆಯಿಂದ ಪಾರಾದರು. ಇದೇ ಸಂದರ್ಭದಲ್ಲಿ ಐದು ತಿಂಗಳಿಂದ ನಮ್ಮದೇ ಕರ್ನಾಟಕದ ಕರಾವಳಿಯಲ್ಲಿ ಏಳು ಮೀನುಗಾರರಿದ್ದ ಬೋಟೊಂದು ಕಾಣೆಯಾಗಿರುವುದು ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. 137 ದಿನಗಳ ಬಳಿಕ ಆ ದೋಣಿಯ ಅವಶೇಷಗಳು ನಾಟಕೀಯವಾಗಿ ಪತ್ತೆಯಾಯಿತಾದರೂ, ದುರಂತದ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.

 ಮಲ್ಪೆ ಬಡಾನಿಡಿಯೂರು ಚಂದ್ರಶೇಖರ್ ಕೋಟ್ಯಾನ್ ಎಂಬವರ ಮಾಲಕತ್ವದ ಸುವರ್ಣ ತ್ರಿಭುಜ ಬೋಟಿನಲ್ಲಿ ಕಳೆದ ಡಿಸೆಂಬರ್ 13ರಂದು ಏಳು ಮಂದಿ ಮೀನುಗಾರರು ಮೀನು ಗಾರಿಕೆಗೆ ತೆರಳಿದ್ದರು. ಬಳಿಕ ದೋಣಿ ನಿಗೂಢವಾಗಿ ಕಾಣೆಯಾಯಿತು. ಮೀನುಗಾರಿಕೆಯ ದೋಣಿ ಆಗಾಗ ಕಾಣೆಯಾಗುತ್ತಾ ಸುದ್ದಿಯಾಗುತ್ತಿರುತ್ತವೆ. ಆದರೆ ಈ ಬಾರಿಯ ನಾಪತ್ತೆ ರಾಜಕಾರಣಿಗಳ ಭಾಗೀದಾರಿಕೆಯಿಂದಾಗಿ ವಿಚಿತ್ರ ತಿರುವೊಂದನ್ನು ಪಡೆಯಿತು. ಕರಾವಳಿಯಲ್ಲಿ ಕೋಮುಉದ್ವಿಗ್ನ ಸ್ಥಿತಿಯೊಂದನ್ನು ನಿರ್ಮಾಣ ಮಾಡಿತು. ಈ ಹಿಂದೆಲ್ಲ ಸಂಘಪರಿವಾರ ಮಲ್ಪೆ ಪರಿಸರದ ಮೊಗವೀರ ಯುವಕರನ್ನು ಬಳಸಿಕೊಂಡು ಕೋಮುಗಲಭೆಗಳನ್ನು ಹುಟ್ಟಿಸಿ ಹಾಕುತ್ತಿತ್ತು. ಮೊಗವೀರರು ಮತ್ತು ಸ್ಥಳೀಯ ಮುಸ್ಲಿಮರ ನಡುವೆ ಇರುವ ವ್ಯವಹಾರ ಸಂಬಂಧಕ್ಕೆ ಹುಳಿ ಹಿಂಡಿ ಸಂಘಪರಿವಾರ ತನ್ನ ಗುರಿ ಸಾಧಿಸಿಕೊಳ್ಳುತ್ತಿತ್ತು. ಆದರೆ ನಿಧಾನಕ್ಕೆ ಮೊಗವೀರ ಸಮುದಾಯದ ನಾಯಕರು ಎಚ್ಚೆತ್ತುಕೊಂಡರು. ಕೋಮುಗಲಭೆಯಲ್ಲಿ ಭಾಗಿಯಾಗಿ ಸಮುದಾಯದ ಯುವಕರು ಜೈಲು ಪಾಲಾಗುತ್ತಿರುವುದು ಮತ್ತು ಅದರ ಲಾಭವನ್ನು ಮೇಲ್ಜಾತಿಯ ರಾಜಕಾರಣಿಗಳು ತಮ್ಮದಾಗಿಸಿಕೊಳ್ಳುತ್ತಿರುವುದನ್ನು ಮನಗಂಡರು. ಈ ಕುರಿತಂತೆ ಹಿರಿಯರು ಸಮುದಾಯದೊಳಗೆ ಜಾಗೃತಿಯನ್ನು ಸೃಷ್ಟಿಸಿದರು. ಪರಿಣಾಮವಾಗಿ ಇಂದು ಉಡುಪಿ, ಮಲ್ಪೆ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಮೊಗವೀರ ತರುಣರು ಕೋಮುಗಲಭೆಗಳಲ್ಲಿ ಭಾಗಿಯಾಗುವುದು ಗಣನೀಯವಾಗಿ ಇಳಿಕೆಯಾಗಿದೆ. ಜೊತೆಗೆ ಮುಸ್ಲಿಮರು ಮತ್ತು ಮೊಗವೀರರ ನಡುವೆ ಸೌಹಾರ್ದ ನೆಲೆಗೊಂಡಿದೆ. ಸದ್ಯಕ್ಕೆ ಸಂಘಪರಿವಾರ ಮೊಗವೀರ ಯುವಕರ ಬದಲಿಗೆ ಬಿಲ್ಲವ ಯುವಕರನ್ನು ಹಿಂಸಾಚಾರಕ್ಕೆ ಬಳಸಿಕೊಳ್ಳುತ್ತಿದೆ.

ಮೀನುಗಾರರು ನಾಪತ್ತೆಯಾದ ಘಟನೆ ಬಹಿರಂಗವಾದ ಬೆನ್ನಿಗೇ ಉಡುಪಿಯಲ್ಲಿ ಸಂಘಪರಿವಾರ ವದಂತಿಗಳನ್ನು ತೇಲಿ ಬಿಡತೊಡಗಿತು. ಪಾಕಿಸ್ತಾನದ ಭಯೋತ್ಪಾದಕರು ಮೀನುಗಾರರನ್ನು ಬಂಧಿಸಿದ್ದಾರೆ, ರತ್ನಗಿರಿಯ ಮುಸ್ಲಿಮರು ಮೀನುಗಾರರನ್ನು ಒತ್ತೆಯಾಗಿಟ್ಟಿದ್ದಾರೆ ಇತ್ಯಾದಿ ಉದ್ವಿಗ್ನಕಾರಿ ಹೇಳಿಕೆಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡತೊಡಗಿದವು. ಎಲ್ಲಕ್ಕಿಂತ ಮುಖ್ಯವಾಗಿ ‘ಕಡಲು ಜಿಹಾದ್’ ಎಂಬ ಹೆಸರನ್ನೂ ನಾಪತ್ತೆ ಪ್ರಕರಣಕ್ಕೆ ಕೊಡಲಾಯಿತು. ಬಿಜೆಪಿ ಮತ್ತು ಸಂಘಪರಿವಾರ ಜಂಟಿಯಾಗಿ ಮೀನುಗಾರರ ನಾಪತ್ತೆಯ ಹಿಂದೆ ಮೂಲಭೂತವಾದಿ, ಉಗ್ರವಾದಿ ಮುಸ್ಲಿಮರಿದ್ದಾರೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡತೊಡಗಿದವು. ಇದೇ ಸಂದರ್ಭದಲ್ಲಿ ಉಡುಪಿಯ ಮುಸ್ಲಿಮ್ ಮುಖಂಡರು ಮೀನುಗಾರರನ್ನು ಪತ್ತೆ ಮಾಡಿಕೊಡಬೇಕು ಎಂದು ಬಹಿರಂಗವಾಗಿ ಧರಣಿ ನಡೆಸಿದರು. ಮೀನುಗಾರರ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು. ಮೀನುಗಾರರ ಪತ್ತೆಗಾಗಿ ಉಡುಪಿಯಲ್ಲಿ ಬೃಹತ್ ಪಾದಯಾತ್ರೆಯೊಂದು ನಡೆಯಿತು. ಈ ಪಾದಯಾತ್ರೆಯನ್ನು ತಮ್ಮ ದುರುದ್ದೇಶ ಸಾಧಿಸಿಕೊಳ್ಳಲು ಬಿಜೆಪಿ ನಾಯಕರು ಪ್ರಯತ್ನಿಸಿದರಾದರೂ, ಮೊಗವೀರ ಮುಖಂಡರು ಅದನ್ನು ಯಶಸ್ವಿಯಾಗಲು ಬಿಡಲಿಲ್ಲ. ಸಂಸದೆ ಶೋಭಾ ಕರಂದ್ಲಾಜೆಯನ್ನೇ ಪಾದಯಾತ್ರೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಯಿತು. ಕೇಂದ್ರ ಸರಕಾರದ ನಿಷ್ಕ್ರಿಯತೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಮೊಗವೀರರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಕರಂದ್ಲಾಜೆಯ ಪ್ರಯತ್ನ ವಿಫಲವಾಯಿತು.

ಇಡೀ ಪ್ರಕರಣಕ್ಕೆ ತಿರುವು ಕೊಟ್ಟವರು ಉಡುಪಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್. ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ ಪ್ರಮೋದ್, ‘‘ಮೀನುಗಾರರ ಬೋಟನ್ನು ಯಾರೂ ಅಪಹರಿಸಿಲ್ಲ. ಕೇಂದ್ರ ನೌಕಾಪಡೆಯ ಹಡಗು ಈ ದೋಣಿಗೆ ಢಿಕ್ಕಿ ಹೊಡೆದಿದ್ದು ಮೀನುಗಾರರು ಸಮುದ್ರ ಪಾಲಾಗಿದ್ದಾರೆ. ಚುನಾವಣೆ ಮುಗಿಯುವವರೆಗೆ ಇದನ್ನು ಮುಚ್ಚಿಡಲು ಸರಕಾರ ನಿರ್ಧರಿಸಿದೆ. ಚುನಾವಣೆ ಕಳೆದ ಬಳಿಕ ಬಹಿರಂಗಪಡಿಸಲು ಮುಂದಾಗಿದೆ’’ ಎನ್ನುವ ಸ್ಫೋಟಕ ಅಂಶವನ್ನು ಬಹಿರಂಗಪಡಿಸಿದರು. ಇದೀಗ ಅವರು ಹೇಳಿದ ಭವಿಷ್ಯ ನಿಜವಾಗಿದೆ.

ಈವರೆಗೆ ಹುಡುಕಿ ಸಿಗದ ಬೋಟನ್ನು ನಾಟಕೀಯವಾಗಿ ಪತ್ತೆಹಚ್ಚಲಾಗಿದೆ. ಶಾಸಕ ರಘುಪತಿ ಭಟ್ ನೇತೃತ್ವದ ತಂಡ ಮೂರು ದಿನಗಳ ಹಿಂದೆ, ಅವಶೇಷ ಪತ್ತೆಯಾಗಿರುವುದನ್ನು ಘೋಷಿಸಿತು. ಮಹಾರಾಷ್ಟ್ರ ರಾಜ್ಯದ ಮಾಳವಣ್‌ನ ಕರಾವಳಿ ತೀರದಿಂದ 33 ಕಿ. ಮೀ. ದೂರದಲ್ಲಿ ಸಮುದ್ರದ 60 ಅಡಿ ಆಳದಲ್ಲಿ ಅವಶೇಷ ಪತ್ತೆಯಾಗಿದೆ ಎಂದು ಬಿಜೆಪಿ ಮುಖಂಡ, ಶಾಸಕ ರಘುಪತಿ ಭಟ್ ಪತ್ರಿಕೆಗಳಿಗೆ ತಿಳಿಸಿದ್ದಾರೆ. ವದಂತಿಗಳನ್ನು ಹಬ್ಬಿಸಿದವರು ಮೆಲ್ಲಗೆ ತಮ್ಮ ತಮ್ಮ ಬಿಲಗಳನ್ನು ಸೇರಿಕೊಂಡಿದ್ದಾರೆ. ಹಾಗಾದರೆ, ಬೋಟ್ ಸಮುದ್ರಪಾಲಾಗಲು ಕಾರಣವೇನು? ಈ ಪ್ರಶ್ನೆಗೆ ಮಾತ್ರ ಉತ್ತರ ದೊರಕಿಲ್ಲ.

ಒಂದು ಮೂಲದ ಪ್ರಕಾರ, ಐಎನ್‌ಎಸ್ ಕೊಚ್ಚಿನ್ ಹಡಗು ಮೀನುಗಾರರ ಬೋಟಿಗೆ ಢಿಕ್ಕಿ ಹೊಡೆದು ಮುಂದೆ ಸಾಗಿದೆ. ಎಲ್ಲ ಮೀನುಗಾರರು ಕ್ಷಣ ಮಾತ್ರದಲ್ಲಿ ಸಾವಿಗೀಡಾಗಿದ್ದಾರೆ. ವಿವಾದವಾಗಬಾರದು ಎಂದು ಸೇನಾ ನಾವಿಕರು ಚುನಾವಣೆಯವರೆಗೆ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ, ಈ ದುರಂತದಲ್ಲಿ ಸೇನಾ ಹಡಗು ಮತ್ತು ಅದರಲ್ಲಿರುವ ಅಧಿಕಾರಿಗಳು ನೇರ ಭಾಗಿಯಾಗಿದ್ದಾರೆ ಎಂದಾಯಿತು. ಮೀನುಗಾರರ ಕಗ್ಗೊಲೆ ಮಾಡಿ ಅದನ್ನು ಮುಚ್ಚಿಡುವುದು ಸಣ್ಣ ಅಪರಾಧ ಅಲ್ಲ. ದುರಂತ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಉದ್ವಿಗ್ನವಾತಾವರಣವನ್ನು ಸೃಷ್ಟಿಸಿತ್ತು. ನಿಧಾನಕ್ಕೆ ರಾಜಕೀಯ ಬಣ್ಣ ಪಡೆಯುತ್ತಿತ್ತು. ಕನಿಷ್ಠ ಆ ಸಂದರ್ಭದಲ್ಲಾದರೂ ಸಂಬಂಧಪಟ್ಟವರು ಸತ್ಯವನ್ನು ಬಹಿರಂಗಪಡಿಸಬೇಕಾಗಿತ್ತು. ಆದರೆ ಈವರೆಗೆ ಕೇಂದ್ರ ನೌಕಾಪಡೆ ಯಾವ ಹೇಳಿಕೆಯನ್ನೂ ನೀಡಿಲ್ಲ. ನಿಜಕ್ಕೂ ನೌಕಾ ಪಡೆಯ ಉದ್ದೇಶವೇನಿತ್ತು? ಚುನಾವಣೆಗಾಗಿಯೇ ಈ ದುರಂತವನ್ನು ಸೃಷ್ಟಿಸಲಾಯಿತೇ? ಅಥವಾ ಕೇಂದ್ರ ನೌಕಾಪಡೆ ಸತ್ಯವನ್ನು ಹೇಳದಂತೆ ರಾಜಕೀಯ ಶಕ್ತಿಗಳು ತಡೆದವೇ? ಇವೆಲ್ಲವೂ ಅತ್ಯಗತ್ಯವಾಗಿ ಬಹಿರಂಗವಾಗಬೇಕಾಗಿದೆ.

ಇಟಲಿಯ ನೌಕೆ ಕೇರಳದಲ್ಲಿ ಇಬ್ಬರು ಮೀನುಗಾರರನ್ನು ಕೊಂದಾಗ ಇಡೀ ದೇಶ ಒಂದಾಗಿ ಮಾತನಾಡಿತು. ಆದರೆ ನಮ್ಮದೇ ನೆಲದ ಏಳು ಮೀನುಗಾರರನ್ನು ನಮ್ಮದೇ ನೌಕಾಪಡೆ ಕೊಂದು, ಅಲ್ಲಿಂದ ಪರಾರಿಯಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ದೇಶ ವೌನವಾಗಿವೆ. ನಮ್ಮ ನೆಲದ ಮೀನುಗಾರರ ಬದುಕಿಗೆ ನಾವು ಕೊಡುವ ಬೆಲೆ ಇಷ್ಟೆಯೇ? ಕಡಲಾಳದಿಂದ ಸತ್ಯವನ್ನು ಹೊರತೆಗೆಯಬೇಕಾದರೆ ಈ ಬಗ್ಗೆ ಗಂಭೀರ ತನಿಖೆಯೊಂದು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ,ಕೇಂದ್ರಕ್ಕೆ ತೀವ್ರ ಒತ್ತಡವನ್ನು ಹೇರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News