ಪ್ರಜ್ಞಾ ಜತೆ ನಂಟಿದ್ದ ಮಾಲೆಗಾಂವ್ ಸ್ಫೋಟ ಆರೋಪಿಗಳಿಂದ ದೇಶದ ಹಲವೆಡೆ ಬಾಂಬ್ ತರಬೇತಿ ಶಿಬಿರ

Update: 2019-05-09 08:58 GMT

ಬೆಂಗಳೂರು, ಮೇ 9: ಸನಾತನ ಸಂಸ್ಥಾ ಜತೆ ನಂಟು ಹೊಂದಿರುವ ಶಂಕಿತರಿಗೆ ದೇಶಾದ್ಯಂತ ಹಲವಾರು ರಹಸ್ಯ ತಾಣಗಳಲ್ಲಿ ನಡೆದ ತರಬೇತಿ ಶಿಬಿರಗಳಲ್ಲಿ ಬಾಂಬ್ ತಯಾರಿ ತರಬೇತಿಯನ್ನು 2011-2016ರ ನಡುವೆ ಅಭಿನವ್ ಭಾರತ್ ಎಂಬ ಸಂಘಟನೆಗೆ ಸೇರಿದ ಹಾಗೂ ದೇಶದಲ್ಲಿ 2006-2008ರ ನಡುವೆ ನಡೆದ ಸಂಝೋತ ಎಕ್ಸ್‍ಪ್ರೆಸ್, ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣಗಳಲ್ಲಿ ಬೇಕಾಗಿರುವ ಮತ್ತು ತಲೆಮರೆಸಿಕೊಂಡಿರುವ ನಾಲ್ಕು ಮಂದಿ ಸದಸ್ಯರು  ನೀಡಿದ್ದರೆಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬಹಿರಂಗ ಪಡಿಸಿದೆ ಎಂದು indianexpress.com ವರದಿ ಮಾಡಿದೆ. ಈ ಮಾಹಿತಿಗಳು  ಬೆಂಗಳೂರು ಕೋರ್ಟಿಗೆ ಎಸ್‍ಐಟಿ ಸಲ್ಲಿಸಿದ ದಾಖಲೆಗಳ ಭಾಗವಾಗಿವೆ ಎನ್ನಲಾಗಿದೆ.

2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಭೋಪಾಲದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಜ್ಞಾ ಸಿಂಗ್ ಠಾಕುರ್  ಹೊರತಾಗಿ ಅಭಿನವ್ ಭಾರತ್ ಸಂಘಟನೆಯ ಇಬ್ಬರು ನಾಪತ್ತೆಯಾಗಿರುವ ಸದಸ್ಯರಾದ ರಾಮ್ಜಿ ಕಲ್ಸಂಗ್ರ ಹಾಗೂ ಸಂದೀಪ್ ದಾಂಗೆ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳಿದ್ದಾರೆ

ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಸಲ್ಲಿಸಿರುವ ಮಾಹಿತಿಯಂತೆ ಪ್ರಕರಣದಲ್ಲಿ ಬಂಧಿತರಾದವರ ಪೈಕಿ ಸನಾತನ ಸಂಸ್ಥಾ ಜತೆ ನಂಟು ಹೊಂದಿರುವ ಮೂವರು ವ್ಯಕ್ತಿಗಳು ಹಾಗೂ  ತರಬೇತಿ ಶಿಬಿರಗಳಲ್ಲಿ  ಭಾಗವಹಿಸಿದ್ದ ನಾಲ್ಕು ಮಂದಿ ಸಾಕ್ಷಿಗಳು ಬಾಂಬ್ ತರಬೇತಿ ಶಿಬಿರಗಳಲ್ಲಿ  `ಬಾಬಾಜಿ' ಹಾಗೂ ನಾಲ್ಕು `ಗುರೂಜಿ'ಗಳು ಉಪಸ್ಥಿತರಿದ್ದ ಬಗ್ಗೆ ವಿವರಿಸಿದ್ದರು ಎಂದು indianexpress.com ವರದಿ ಮಾಡಿದೆ.

ಈ `ಬಾಬಾಜಿ'ಯನ್ನು ನಂತರ ಅಭಿನವ್ ಭಾರತ್ ಸದಸ್ಯ ಸುರೇಶ್ ನಾಯರ್ ಎಂದು ಗುರುತಿಸಲಾಗಿತ್ತು. 2007ರ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಈತ ಗುಜರಾತ್ ನಲ್ಲಿ ತಲೆಮರೆಸಿಕೊಂಡ 11 ವರ್ಷಗಳ ನಂತರ ನವೆಂಬರ್ 2018ರಲ್ಲಿ ಬಂಧಿತನಾಗಿದ್ದ.

ಬಾಂಬ್ ತರಬೇತಿ ಶಿಬಿರಗಳಲ್ಲಿನ ಮೂವರು ಬಾಂಬ್ ತಜ್ಞರಾದ ದಾಂಗೆ, ಕಲ್ಸಂಗ್ರ ಹಾಗೂ ಅಶ್ವಿನಿ ಚೌಹಾಣ್ ಸಂಝೋತ ಎಕ್ಸ್ ಪ್ರೆಸ್ ಮತ್ತು ನಾಲ್ಕು ಇತರ ಸ್ಫೋಟ ಪ್ರಕರಣಗಳಲ್ಲಿ  ಬೇಕಾದವರೆಂದು ನಾಯರ್ ಬಂಧನದ ನಂತರ ಬಹಿರಂಗಗೊಂಡಿತ್ತು.

ಐದನೇ ಬಾಂಬ್ ತಯಾರಿ ತರಬೇತುದಾರ ಪ್ರತಾಪ್ ಹಝ್ರಾ ಎಂಬಾತನೆಂದು ಗೌರಿ ಲಂಕೇಶ್ ಪ್ರಕರಣದಲ್ಲಿ ಬಂಧಿತರಾದವರು ಗುರುತಿಸಿದ್ದರು. ಹಝ್ರಾ ಪಶ್ಚಿಮ ಬಂಗಾಳದ ಬಲಪಂಥೀಯ ಸಂಘಟನೆ ಭವಾನಿ ಸೇನಾಗೆ ಸೇರಿದವನಾಗಿದ್ದಾನೆ.

ದೇಶದಲ್ಲಿ 2006-2008ರ ನಡುವೆ 117 ಜನರ ಸಾವಿಗೆ ಕಾರಣವಾದ ಹಾಗೂ ಅಭಿನವ್ ಭಾರತ್ ಸಂಘಟನೆ ಶಾಮೀಲಾಗಿದ್ದ ಸ್ಫೋಟ ಪ್ರಕರಣಗಳಲ್ಲಿ ಬೇಕಾದ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳಿಗೂ ಗೌರಿ ಲಂಕೇಶ್  ಹತ್ಯೆ ಪ್ರಕರಣದ ಆರೋಪಿಗಳಿಗೂ ಎಂದು ಎಸ್‍ಐಟಿ ತನಿಖೆ ಕಂಡು ಕೊಂಡಿದೆ ಎಂದು indianexpress.com ವರದಿ ಹೇಳಿದೆ.

ಎಸ್‍ಐಟಿ ನೀಡಿದ ಮಾಹಿತಿಯಾಧಾರದಲ್ಲಿ ‘ಬಾಬಾಜಿ’ ಎಂದು ಗುರುತಿಸಲಾದ ನಾಯರ್ ನನ್ನು ಗುಜರಾತ್ ಎಟಿಎಸ್ ಭರೂಚ್ ಎಂಬಲ್ಲಿ ನವೆಂಬರ್ 2018ರಲ್ಲಿ ಬಂಧಿಸಿತ್ತು. ಆತನಿಗೆ ಬಾಂಬ್ ತರಬೇತಿ ಶಿಬಿರಗಳ ಇತರ ತರಬೇತುದಾರರ ಭಾವಚಿತ್ರಗಳನ್ನು ತೋರಿಸಿದಾಗ ಅವರನ್ನು ದಾಂಗೆ, ಕಲ್ಸಂಗರ ಹಾಗೂ ಅಮಿತ್ ಹಕ್ಲ ಆಲಿಯಾಸ್ ಅಶ್ವಿನಿ ಚೌಹಾಣ್ ಎಂದು ಗುರುತಿಸಿದ್ದ ಎಂದು ಮೂಲಗಳೂ ತಿಳಿಸಿವೆ.

ಮಾಜಿ ಆರೆಸ್ಸೆಸ್ ಕಾರ್ಯುಕರ್ತನಾಗಿರುವ ದಾಂಗೆ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಇದ್ದು ರಾಷ್ಟ್ರೀಯ ತನಿಖಾ ಏಜನ್ಸಿಯ (ಎನ್ ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಈತ, ಕಲ್ಸಂಗರ ಹಾಗೂ ಹಕ್ಲಾ ಇದ್ದಾರೆ. ದಾಂಗೆ ಹಾಗೂ ಕಲ್ಸಂಗರ ತಲೆ ಮೇಲೆ ರೂ 10 ಲಕ್ಷ ನಗದು ಬಹಿಮಾನ ಘೋಷಿಸಲಾಗಿದ್ದರೆ, ಹಕ್ಲಾ ತಲೆ ಮೇಲೆ ರೂ 5 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ.

ದಾಂಗೆ ಹಾಗೂ ಕಲ್ಸಂಗರ ಈಗಲೂ ಭಾರತದಲ್ಲಿ ಅಡಗಿಕೊಂಡಿದ್ದಾರೆನ್ನಲಾಗಿದ್ದು ಅವರ ಪತ್ತೆಗೆ ಪ್ರಯತ್ನಗಳು ಮುಂದುವರಿದಿವೆ.

ಸನಾತನ ಸಂಸ್ಥಾ ಜತೆ ನಂಟು ಹೊಂದಿದ ಸಂಘಟನೆ ಒಟ್ಟು 19 ತರಬೇತಿ ಶಿಬಿರಗಳನ್ನು 2011 ಹಾಗೂ 2017 ನಡುವೆ ನಡೆಸಿದ್ದು ಈ ಶಿಬಿರಗಳಲ್ಲಿ ಐದು ಮಂದಿ ಐಇಡಿ ತಜ್ಞರು ವಿವಿಧ ಶಸ್ತ್ರಾಸ್ತ್ರ ತಯಾರಿ ಬಗ್ಗೆ ತರಬೇತಿ ನೀಡಿದ್ದರು. ‘ಬಾಬಾಜಿ’ಯಂತಹವರು ಸಂತರ ವೇಷ ಧರಿಸಿ ತಿರುಗಾಡುತ್ತಿದ್ದರು ಹಾಗೂ ಪೆಟ್ರೋಲ್ ಬಾಂಬ್ ನಿಂದ ಹಿಡಿದು ಪೈಪ್ ಬಾಂಬ್ ಸಹಿತ ಮೊಬೈಲ್ ಫೋನ್ ಮೂಲಕ ಸ್ಫೋಟಿಸುವ ಐಇಡಿಯ ಇಲೆಕ್ಟ್ರಿಕಲ್ ಸಕ್ರ್ಯೂಟ್ ನಿರ್ಮಿಸುವ ಜ್ಞಾನ ಹೊಂದಿದರವರಾಗಿದ್ದರೆಂದು ಹೇಳಲಾಗಿದೆ ಎಂದು ವರದಿ ತಿಳಿಸಿದೆ.

ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ ಎಂ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಪ್ರಕರಣದಲ್ಲಿನ ಆರೋಪಿಗಳಾದ ಅಮಿತ್ ದೇಗ್ವೇಕರ್, ಕಲಸ್ಕರ್, ಪಂಗರ್ಕರ್, ಸೂರ್ಯವಂಶಿ, ಗಣೇಶ್ ಮಿಸ್ಕಿನ್, ಅಮಿತ್ ಬಡ್ಡಿ ಹಾಗೂ ಭರತ್ ಕುರ್ನೆ ಹಾಗೂ ಗೌರಿ ಲಂಕೇಶ್ ಪ್ರಕರಣದ ನಾಲ್ಕು ಸಾಕ್ಷಿಗಳು ಈ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ.

ತರಬೇತುದಾರರನ್ನು ಅವರು ಬಾಬಾಜಿ ಸರ್, ಸಕ್ರ್ಯೂಟ್ ಎಕ್ಸ್‍ಪರ್ಟ್ ಸರ್, ಬೆಂಗಾಲಿ, ಲಂಬು ಸರ್ ಎಂದು ಗುರುತಿಸುತ್ತಿದ್ದರೆನ್ನಲಾಗಿದೆ.

ಈ ತರಬೇತಿ ಶಿಬಿರಗಳು ಜಲ್ನಾದಲ್ಲಿ 2011ರಲ್ಲಿ ಹಾಗೂ ಜನವರಿ 2015ರಲ್ಲಿ, ಮಂಗಳೂರಿನಲ್ಲಿ ಆಗಸ್ಟ್ 2015ರಲ್ಲಿ, ಅಹ್ಮದಾಬಾದ್ ನಲ್ಲಿ ನವೆಂಬರ್ 2015ರಲ್ಲಿ ಹಾಗೂ ನಾಸಿಕ್ ನಲ್ಲಿ ಜನವರಿ 2016ರಲ್ಲಿ ನಡೆದಿವೆಯೆನ್ನಲಾಗಿದೆ ಎಂದು indianexpress.com ವರದಿ ಮಾಡಿದೆ.

ವರದಿ ಬಗ್ಗೆ ಎಸ್ ಐಟಿ ಪ್ರತಿಕ್ರಿಯೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ ಐಟಿ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಕೈವಾಡವನ್ನು ನಿರಾಕರಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಕೈವಾಡವಿರುವುದು ತನಿಖೆಯಲ್ಲಿ ಪತ್ತೆಯಾಗಿಲ್ಲ. ಚಾರ್ಜ್ ಶೀಟ್ ನಲ್ಲೂ ಆಕೆಯ ಹೆಸರಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News