ಪಿಬಿಜಿಯಲ್ಲಿ ಜಾತಿಯಾಧಾರಿತ ನೇಮಕಾತಿ ‘ಸೂಕ್ಷ್ಮ ವಿಷಯ’ ಎಂಬ ಸರಕಾರದ ಹೇಳಿಕೆಯಿಂದ ದಿಲ್ಲಿ ಹೈಕೋರ್ಟ್ ಗರಂ

Update: 2019-05-09 17:10 GMT

ಹೊಸದಿಲ್ಲಿ,ಮೇ 9: ರಾಷ್ಟ್ರಪತಿಗಳ ಅಂಗರಕ್ಷಕ ಪಡೆ (ಪಿಬಿಜಿ)ಗೆ ಜಾತಿಯಾಧಾರಿತ ನೇಮಕವನ್ನು ಸರಕಾರವು ಸಮರ್ಥಿಸಿಕೊಂಡಿದ್ದರ ವಿರುದ್ಧ ದಿಲ್ಲಿ ಉಚ್ಚ ನ್ಯಾಯಾಲಯವು ತೀಕ್ಷ್ಣ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಜಾಟ್ ಸಿಖ್,ಜಾಟ್ ಮತ್ತು ರಜಪೂತ ಜಾತಿಗಳಿಗೆ ಸೇರಿದವರು ಮಾತ್ರ ರಾಷ್ಟ್ರಪತಿಗಳ ಅಂಗರಕ್ಷಕರ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಬಹುದು,ಇತರ ಜಾತಿಗಳ ಪುರುಷರಿಗೆ ನೇಮಕಾತಿಗೆ ಅವಕಾಶವಿಲ್ಲ.

  ಇದೊಂದು ‘ಸೂಕ್ಷ್ಮ ವಿಷಯ’ವಾಗಿದೆ ಎಂದು ಕೇಂದ್ರವು ಬಣ್ಣಿಸಿದಾಗ ಆರು ವಾರಗಳಲ್ಲಿ ತನ್ನ ಅಭಿಪ್ರಾಯಗಳನ್ನು ಪ್ರತಿ ಪ್ರಮಾಣಪತ್ರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅದಕ್ಕೆ ಸೂಚಿಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಳ್ಳಿ ಅವರ ಪೀಠವು,ಇಂತಹ ನೇಮಕಾತಿ ನೀತಿಯು ಸಮಾನತೆಯ ಸಾಂವಿಧಾನಿಕ ಖಾತರಿಗೆ ಅನುಗುಣವಾಗಿದೆಯೇ ಎಂಬ ಕುರಿತು ವಿವೇಚನೆಯನ್ನು ಬಳಸದಿರುವುದರಿಂದ ಯಥಾಸ್ಥಿತಿ ಮುಂದುವರಿಯುತ್ತಿರುವದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ ಎಂದು ಹೇಳಿತು.

 1773ರಲ್ಲಿ ಸ್ಥಾಪನೆಯಾದ ಪಿಬಿಜಿ ಭಾರತದ ರಾಷ್ಟ್ರಪತಿಗಳಿಗಾಗಿ ವಿಧ್ಯುಕ್ತ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ. ಪಿಬಿಜಿ ಸಿಬ್ಬಂದಿಗಳು ಅತ್ಯುತ್ತಮ ಅಶ್ವಾರೋಹಿಗಳು, ಸಮರ್ಥ ಟ್ಯಾಂಕ್ ನಿರ್ವಾಹಕರು ಮತ್ತು ಪ್ಯಾರಾಟ್ರೂಪರ್‌ಗಳಾಗಿದ್ದಾರೆ ಎಂದು ರಾಷ್ಟ್ರಪತಿಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಣ್ಣಿಸಲಾಗಿದೆ. ಆದರೆ ಮೂರು ಜಾತಿಗಳಿಗೆ ಸೇರಿದವರು ಮಾತ್ರ ಪಿಬಿಜಿಯಲ್ಲಿ ನೇಮಕಾತಿಗೆ ಅರ್ಜಿಗಳನ್ನು ಸಲ್ಲಿಸಬಹುದು ಎನ್ನುವುದನ್ನು ಅದು ಮುಚ್ಚಿಟ್ಟಿದೆ.

ಸ್ವಾತಂತ್ರಾನಂತರದ ಈ ಎಲ್ಲ ವರ್ಷಗಳಲ್ಲಿ ಈ ತಾರತಮ್ಯದ ಪದ್ಧತಿಯು ಅಧಿಕೃತ ಒಪ್ಪಿಗೆಯನ್ನು ಪಡೆದುಕೊಂಡಿದೆ ಎನ್ನುವುದು ಪ್ರಜಾಪ್ರಭುತ್ವಕ್ಕೇ ಅವಮಾನವಾಗಿದೆ. ಆದರೂ ಸರಕಾರವು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಇದೊಂದು ಸೂಕ್ಷ್ಮ ವಿಷಯ ಎಂದು ಹೇಳಿಕೊಂಡಿರುವುದು ಇದನ್ನು ಸಮರ್ಥಿಸಿಕೊಳ್ಳಲು ಅದರ ಬಳಿ ಸೂಕ್ತ ಕಾರಣಗಳಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಅರ್ಜಿದಾರ ಗೌರವ ಯಾದವ ಅವರು 2017,ಸೆ.4ರಂದು ಪಿಬಿಜಿ ನೇಮಕಾತಿಗಾಗಿ ದಿಲ್ಲಿಯಲ್ಲಿ ನಡೆದಿದ್ದ ಆಯ್ಕೆ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಆದರೆ ಅವರು ಆಹಿರ್ ಜಾತಿಗೆ ಸೇರಿದ್ದರಿಂದ ಅವರನ್ನು ತಿರಸ್ಕರಿಸಲಾಗಿತ್ತು. ಪಿಬಿಜಿ ನೇಮಕಾತಿಯು ಕೇವಲ ಮೂರು ಜಾತಿಗಳಿಗೆ ಸೀಮಿತವಾಗಿರುವುದು ಸಂವಿಧಾನದ 14,15 ಮತ್ತು 16ನೇ ವಿಧಿಗಳಡಿ ಖಾತರಿ ಪಡಿಸಲಾಗಿರುವ ತನ್ನ ಮೂಲಭೂತ ಹಕ್ಕುಗಳನು ಉಲ್ಲಂಘಿಸಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News