ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಹುದ್ದೆ: ಸಂಭಾವ್ಯರ ಪಟ್ಟಿಯಲ್ಲಿ ಆರ್.ಬಿ.ಐ. ಮಾಜಿ ಗವರ್ನರ್

Update: 2019-05-10 09:25 GMT

ಹೊಸದಿಲ್ಲಿ, ಮೇ 10: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ.)ದ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೆಸರು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಪ್ರತಿಷ್ಠಿತ ಗವರ್ನರ್ ಹುದ್ದೆಗೆ ಆಯ್ಕೆಯಾಗಬಹುದಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

ಬ್ಯಾಂಕ್ ಆಫ್ ಇಂಗ್ಲೆಂಡ್ ನ ಪ್ರಸಕ್ತ ಗವರ್ನರ್ ಮಾರ್ಕ್ ಕಾರ್ನೆ ಅವರ ಅವಧಿ ಮುಂದಿನ ವರ್ಷದ ಜನವರಿಯಲ್ಲಿ ಅಂತ್ಯಗೊಳ್ಳಲಿರುವುದರಿಂದ ಇಂಗ್ಲೆಂಡ್ ಚಾನ್ಸಲರ್ ಆಫ್ ಎಕ್ಸ್‌ಚೆಕರ್ ಫಿಲಿಪ್ ಹಾಮ್ಮಂಡ್ ಅವರು ಕಾರ್ನೆ ಅವರಿಗೆ ಉತ್ತರಾಧಿಕಾರಿಯನ್ನು ಹುಡುಕಲು ಎಪ್ರಿಲ್ ನಿಂದಲೇ ಆರಂಭಿಸಿದ್ದರು.

ಮೂರು ಶತಮಾನಗಳಷ್ಟು ಹಳೆಯ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಯಾರಾಗಲಿದ್ದಾರೆಂಬ ಕುತೂಹಲ ಎಲ್ಲೆಡೆ ಮೂಡಿರುವಂತೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದವರೊಬ್ಬರು ಈ ಸ್ಥಾನ ವಹಿಸಬೇಕೆಂದು ತಾವು ಬಯಸುವುದಾಗಿ ಫಿಲಿಪ್ ಹೇಳಿದ್ದಾರೆ.

ಬ್ಯಾಂಕ್ ಆಫ್ ಇಂಗ್ಲೆಂಡ್ ನ ಹಾಲಿ ಗವರ್ನರ್ ಕಾರ್ನೆ ಕೆನಡಾ ಪೌರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಲೂಂಬರ್ಗ್ ಸಮೀಕ್ಷೆಯ ಅರ್ಥಶಾಸ್ತ್ರಜ್ಞರು ರಾಜನ್ ಅವರು ಪ್ರಮುಖ ಆಕಾಂಕ್ಷಿಯೆಂದು ಬಿಂಬಿಸಿದ್ದಾರೆ.

ಸದ್ಯ ಯನಿವರ್ಸಿಟಿ ಆಫ್ ಚಿಕಾಗೋ ಪ್ರೊಫೆಸರ್ ಆಗಿರುವ ರಘುರಾಮ್ ರಾಜನ್ ಸಂಭಾವ್ಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನದಲ್ಲಿ ಫೈನಾನ್ಶಿಯಲ್ ಕಾಂಡಕ್ಟ್ ಅಥಾರಿಟಿ ಮುಖ್ಯಸ್ಥ ಆಂಡ್ರೂ ಬೈಲಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News