ಗಿರಡ್ಡಿ ಗೋವಿಂದರಾಜ ಬಹುಮುಖ ವ್ಯಕ್ತಿತ್ವದ ಸಾಹಿತಿ: ಸಿ.ಎನ್.ರಾಮಚಂದ್ರನ್

Update: 2019-05-11 15:05 GMT

ಬೆಂಗಳೂರು, ಮೇ 11: ಹಿರಿಯ ಸಾಹಿತಿ ಗಿರಡ್ಡಿ ಗೋವಿಂದರಾಜ ಸಾಹಿತ್ಯ ವಿಮರ್ಶಕರಾಗಿ ಮಾತ್ರ ಪ್ರಸಿದ್ಧಿಗೊಂಡಿದ್ದರೂ ಅತ್ಯುತ್ತಮ ಕಾವ್ಯ, ಕತೆಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ ವ್ಯಕ್ತಿತ್ವದ ಸಾಹಿತಿಯಾಗಿ ಗುರುತಿಸಿಕೊಂಡಿದ್ದರು ಎಂದು ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಿಸಿದ್ದಾರೆ.

ಶನಿವಾರ ಕೆಪಿಟಿಎಲ್ ಲೆಕ್ಕಾಧಿಕಾರಿಗಳ ಸಂಘ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಗಿರಡ್ಡಿ ಗೋವಿಂದರಾಜರ ಕೊಡುಗೆ’ ಕುರಿತು ಮಾತನಾಡಿದ ಅವರು, ನವ್ಯ ಪಂಥದ ಮೌಲ್ಯಯುತ ಚಿಂತನೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಖರವಾಗಿ ಬೆಳೆಯಲು ಗಿರಡ್ಡಿ ಗೋವಿಂದರಾಜ ಅವರ ಬರಹಗಳು ಸಾಕಷ್ಟು ಕೊಡುಗೆ ನೀಡಿವೆ ಎಂದು ತಿಳಿಸಿದರು.

ಗಿರಡ್ಡಿ ಗೋವಿಂದರಾಜ ನಾಡಿನಲ್ಲಿ ಪ್ರಸಿದ್ಧ ವಿಮರ್ಶಕರೆಂದು ಗುರುತಿಸಿಕೊಂಡಿದ್ದರೂ ಅವರ ಆರಂಭದ ಬರಹ ಕಾವ್ಯವಾಗಿತ್ತು. ಅವರು ರಸವಂತಿ ಎಂಬ ಕಾವ್ಯ ಸಂಕಲದ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರು. ಇದರಲ್ಲಿ 35 ಕವನಗಳಿದ್ದು, ಇವು ನವೋದಯ, ಪ್ರಗತಿಶೀಲ ಹಾಗೂ ನವ್ಯ ಪ್ರಕಾರಗಳಲ್ಲಿ ಕೂಡಿವೆ. ಸುಮಾರು 60ರ ದಶಕದಲ್ಲಿ ಸಾಹಿತ್ಯ ರಚಿಸಲು ಪ್ರಾರಂಭಿಸಿದ ಬರಹಗಾರರಿಗೆ ನಾವು ಯಾವ ಪ್ರಕಾರದಲ್ಲಿ ಸಾಹಿತ್ಯ ರಚಿಸಬೇಕೆಂಬ ಗೊಂದಲದಲ್ಲಿಯೆ ಬರವಣಿಗೆ ನಡೆಸಿದ್ದರು. ಹೀಗಾಗಿಯೆ ಗಿರಡ್ಡಿ ಅವರ ಪ್ರಾರಂಭಿಕ ಕವನ ಸಂಕಲನ ಎಲ್ಲ ಪ್ರಕಾರಗಳಿಂದ ಕೂಡಿತ್ತು ಎಂದು ಅವರು ಹೇಳಿದರು.

1975ರಲ್ಲಿ ಪ್ರಕಟಗೊಂಡ ಮರ್ಲಿನ್ ಮನ್ರೋ ಎಂಬ ಗಿರಡ್ಡಿ ಅವರ ಎರಡನೆ ಕವನ ಸಂಕಲನ ಸಂಪೂರ್ಣ ನವ್ಯದಿಂದ ಕೂಡಿದ್ದು, ಅದರಲ್ಲಿನ ಪ್ರತಿ ಕವನವು ಉತ್ತಮವಾಗಿವೆ. ಈ ಕವನಗಳನ್ನು ವಿಮರ್ಶೆಗೆ ಒಳಪಡಿಸಿದಾಗ ಗಿರಡ್ಡಿ ಗೋವಿಂದರಾಜ ಅವರು ಅತ್ಯುತ್ತಮ ಕವಿಯಾಗಿ ರೂಪಗೊಳ್ಳಬಹುದಾದ ಎಲ್ಲ ಸಾಧ್ಯತೆಗಳಿದ್ದವು. ಆದರೆ, ಅವರು ವಿಮರ್ಶಾ ಕ್ಷೇತ್ರವನ್ನು ಪ್ರಧಾನವಾಗಿ ಆಯ್ಕೆ ಮಾಡಿಕೊಂಡರು ಎಂದು ಅವರು ಹೇಳಿದರು.

ಗಿರಡ್ಡಿ ಅವರು ‘ಆ ಮುಖ ಈ ಮುಖ’ ಕಥಾ ಸಂಕಲನ, ‘ಮಣ್ಣು ’ ಎಂಬ ನೀಳ್ಗತೆ ಸೇರಿದಂತೆ ಮೂರು ಕಥಾ ಸಂಕಲನವನ್ನು ಪ್ರಕಟಗೊಳಿಸಿದ್ದಾರೆ. ಇದರಲ್ಲಿ ಹಂಗು ಎಂಬ ಕತೆಯು ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಸಿನೆಮಾ ಆಗಿದೆ. ಅವರ ‘ಮಣ್ಣು’ ಕತೆಯಲ್ಲಿ ಮನುಷ್ಯನಿಗೆ ತನ್ನ ಬದುಕಿನಲ್ಲಿ ಎದುರಾಗಬಹುದಾದ ವೈರುಧ್ಯಗಳನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ ಎಂದು ಅವರು ಹೇಳಿದರು.

‘ಸಣ್ಣಕತೆಯ ಹೊಸ ನಿಲುವುಗಳು’ ಎಂಬ ವಿಮರ್ಶಾ ಕೃತಿಯ ಮೂಲಕ ಗಿರಡ್ಡಿ ಗೋವಿಂದರಾಜ ವಿಮರ್ಶಕರಾಗಿ ಹೆಚ್ಚು ಪ್ರಸಿದ್ಧಿಗೊಂಡರು. ಅಲ್ಲಿಂದ ಅವರು ತಮ್ಮ ಮುಂದಿನ ನಾಲ್ಕು ದಶಕಗಳ ಸಾಹಿತ್ಯ ಕೃಷಿಯನ್ನು ಬಹುತೇಕ ವಿಮರ್ಶೆಗೆ ಮೀಸಲಿಟ್ಟರು. ಅವರ ವಿಮರ್ಶಾ ಕೃತಿಗಳು ಅನೇಕ ಒಳನೋಟಗಳಿಂದ ಕೂಡಿದ್ದು ಸಾಹಿತ್ಯ ಚಿಂತಕರಲ್ಲಿ ಚರ್ಚೆಗೆ ಈಡುಮಾಡಿವೆ ಎಂದು ಅವರು ಹೇಳಿದರು.

ವಿಮರ್ಶೆಯೆಂದರೆ ಕೇವಲ ಮೌಲ್ಯಮಾಪನವಲ್ಲ. ಅದೊಂದು ಗಂಭೀರ ಕಾರ್ಯವೆಂದು ಗಿರಡ್ಡಿ ಗೋವಿಂದರಾಜ ಭಾವಿಸಿದ್ದರು. ನವ್ಯ ಬರಹಗಾರರಾಗಿ ಗುರುತಿಸಿಕೊಂಡಿದ್ದ ಅವರು, ಕೃತಿಯಲ್ಲಿ ಮಾನವೀಯ ಮೌಲ್ಯಗಳು ಇಲ್ಲದಿದ್ದರೆ ಆ ಕೃತಿ ಎಷ್ಟೆ ಜನಪ್ರಿಯಗೊಂಡಿದ್ದರು ಶ್ರೇಷ್ಠ ಕೃತಿಯೆಂದು ಪರಿಗಣಿಸಲಾಗದು ಎಂದು ತಮ್ಮ ವಿಮರ್ಶ ಕೃತಿಗಳಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಯಂತಿ ನಾಯಕ ಅವರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು. ಹಾಗೂ ಡಾ.ನಿರಂಜನ ಯೆಲ್ಲೂರು ಅವರಿಂದ ‘ಭಾರತೀಯ ದೃಷ್ಟಿಯಲ್ಲಿ ಆರೋಗ್ಯ’ ವಿಷಯದ ಕುರಿತು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News