ಮನುಭಾರತದೆಡೆಗೆ ದಲಿತರು

Update: 2019-05-13 04:45 GMT

ಕಳೆದ ಒಂದು ವಾರದಲ್ಲಿ ದಲಿತರ ಮೇಲೆ ನಡೆದ ಮೂರು ದೌರ್ಜನ್ಯ ಪ್ರಕರಣಗಳು ಕೆಲವೇ ಕೆಲವು ಮಾಧ್ಯಮಗಳಲ್ಲಿ ಮುಖಪುಟ ಸುದ್ದಿಯಾಯಿತು. ಈ ಹತ್ಯೆ ಮತ್ತು ಹಲ್ಲೆಗಳು ಈ ದೇಶ ದಲಿತರ ಕುರಿತಂತೆ ಇನ್ನೂ ಎಂತಹ ಮನಸ್ಥಿತಿಯನ್ನು ಹೊಂದಿದೆ ಮತ್ತು ದೇಶದ ಮೇಲ್ಜಾತಿಯ ಜನರು ದಲಿತರ ಮೀಸಲಾತಿಯನ್ನು ಯಾಕೆ ವಿರೋಧಿಸುತ್ತಿದ್ದಾರೆ ಎನ್ನುವುದನ್ನು ನಮಗೆ ಹೇಳಿಕೊಡುತ್ತದೆ. ಮೊದಲನೆಯದು ಉತ್ತರ ಪ್ರದೇಶದ ಡೆಹ್ರಾಡೂನ್‌ನಲ್ಲಿ ನಡೆದ ಬರ್ಬರ ಘಟನೆ. ಮದುವೆ ಸಮಾರಂಭವೊಂದರಲ್ಲಿ ಮೇಲ್ಜಾತಿಯ ಜನರ ಮುಂದೆ ಕುರ್ಚಿಯಲ್ಲಿ ಕುಳಿತು ಊಟ ಮಾಡಿದ ಎನ್ನುವ ಒಂದೇ ಕಾರಣಕ್ಕಾಗಿ ದಲಿತ ಯುವಕನೊಬ್ಬನಿಗೆ ಬರ್ಬರವಾಗಿ ಹಲ್ಲೆ ನಡೆಸಿ ಆತನನ್ನು ಕೊಂದು ಹಾಕಲಾಯಿತು. ರಸ್ತೆಯುದ್ದಕ್ಕೂ ಆತನಿಗೆ ಚಿತ್ರಹಿಂಸೆ ನೀಡಿ ಥಳಿಸಿದ ಗುಂಪು, ಬಳಿಕ ಆತನನ್ನು ರಸ್ತೆಯಲ್ಲಿ ಎಸೆದು ಹೋಗಿದೆ. ಈ ಘಟನೆ ಸಾರ್ವಜನಿಕ ಮದುವೆಯಲ್ಲಿ ನಡೆದಿರುವುದು. ಇಲ್ಲಿ ದಲಿತ ಯುವಕ ಮಾಡಿದ ತಪ್ಪು ಏನು? ಆತನನ್ನು ಥಳಿಸಿ ಕೊಂದ ಜನರು ಈ ದೇಶದ ದಲಿತ ಸಮುದಾಯಕ್ಕೆ ಯಾವ ಸಂದೇಶ ನೀಡಿದ್ದಾರೆ? ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನು ಅಲ್ಲ.

ಮೇಲ್ಜಾತಿಯವರ ಸರಿಸಮಾನವಾಗಿ ದಲಿತರು ಬದುಕುವುದೇ ತಪ್ಪು ಎನ್ನುವುದನ್ನು ಈ ಘಟನೆ ಹೇಳಿದೆ. ಸ್ವಾತಂತ್ರ ಬಂದು 70 ವರ್ಷವಾದ ಬಳಿಕವೂ ನಮ್ಮ ದೇಶ ದಲಿತರನ್ನು ಇಷ್ಟು ಕೀಳಾಗಿ ನೋಡುತ್ತಿದೆ ಎಂದ ಮೇಲೆ, ‘ಜಾತ್ಯತೀತ ಭಾರತ’ಕ್ಕೆ ಅರ್ಥವೇನು ಬಂತು? ವಿಪರ್ಯಾಸವೆಂದರೆ ಈ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸುವುದಕ್ಕೆ ಪೊಲೀಸರು ಆರಂಭದಲ್ಲಿ ಹಿಂದೇಟು ಹಾಕಿದರು. ಯಾಕೆಂದರೆ ಪೊಲೀಸ್ ಇಲಾಖೆಗಳಲ್ಲಿ ಇರುವವರೂ ಮೇಲ್ಜಾತಿಯ ಜನರೇ ತಾನೇ? ಮೇಲ್ಜಾತಿಯ ಜನರೆದುರು ಒಬ್ಬ ದಲಿತ ಯುವಕ ಸರಿಸಮಾನವಾಗಿ ಕುಳಿತು ಊಟ ಮಾಡುವುದನ್ನು ಅವರಾದರೂ ಹೇಗೆ ಒಪ್ಪಿಕೊಳ್ಳಬಲ್ಲರು?

ಇನ್ನೊಂದು ಘಟನೆ ತಮಿಳುನಾಡಿನ ಮಧುರೈಯಲ್ಲಿ ನಡೆದಿದೆ. ದ್ರಾವಿಡ ಚಳವಳಿಯ ನೇತಾರ ಪೆರಿಯಾರ್ ಬದುಕಿ ಬಾಳಿದ ತಮಿಳುನಾಡಿನಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎನ್ನುವುದು ನಿಜಕ್ಕೂ ಆತಂಕಕಾರಿ ಘಟನೆ. ದೇವಸ್ಥಾನದ ಘರ್ಷಣೆಗೆ ಸಂಬಂಧಿಸಿ ಒಬ್ಬ ದಲಿತ ಯುವಕನನ್ನು ಗುಂಪೊಂದು ತಡೆದು ಆತನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದು ಮಾತ್ರವಲ್ಲ, ಬಲವಂತವಾಗಿ ಮಲವನ್ನೂ ತಿನ್ನಿಸಿದೆ. ಜೊತೆಗೆ ಆತನ ಮೈಮೇಲೆ ಮೂತ್ರ ವಿಸರ್ಜನೆಯನ್ನು ಮಾಡಿದೆ. ಇಲ್ಲಿ ದಲಿತ ಯುವಕನ ಕುರಿತಂತೆ ತಂಡಕ್ಕಿರುವುದು ದ್ವೇಷ ಮಾತ್ರವಲ್ಲ, ಅಸಹ್ಯ ಕೂಡ ಎನ್ನುವುದನ್ನು ಗಮನಿಸಬೇಕು. ಈ ದಾಳಿ ದಲಿತ ಯುವಕನ ದೇಹದ ಮೇಲೆ ಮಾತ್ರ ಅಲ್ಲ, ವ್ಯಕ್ತಿತ್ವದ ಮೇಲೆ ನಡೆದಿದೆ. ಈ ದೇಶದಲ್ಲಿ ಮಲದ ಗುಂಡಿಗಿಳಿದು ಸಾಯುವವರು ದಲಿತರೇ ಆಗಿರುವುದು ಯಾಕೆ? ಎನ್ನುವ ಪ್ರಶ್ನೆಗೆ ಮೇಲಿನ ಘಟನೆಗಳಿಂದ ಉತ್ತರಗಳನ್ನು ಹುಡುಕಬೇಕಾಗಿದೆ.

ಮಂಗಳಗ್ರಹಕ್ಕೆ ಧಾವಿಸಲು ಬೇಕಾದ ಉಪಹಗರಣಗಳು ನಮ್ಮಲ್ಲಿವೆ. ಆದರೆ ಮಲದ ಗುಂಡಿಗೆ ಇಳಿಯುವ ಯಂತ್ರಗಳನ್ನು ನಾವು ಕಂಡು ಹಿಡಿದಿಲ್ಲ್ಲ. ಯಾಕೆಂದರೆ, ಅದಕ್ಕಾಗಿಯೇ ನಾವು ಒಂದು ಜಾತಿಯನ್ನು ನಿರ್ಮಿಸಿ ಬಿಟ್ಟಿದ್ದೇವೆ. ಮಲದ ಗುಂಡಿಗೆ ಇಳಿಯದೇ ಅವರು ಶಾಲೆ ಕಾಲೇಜುಗಳನ್ನು ಕಲಿತು ಉನ್ನತ ಹುದ್ದೆಗಳನ್ನು ಪಡೆದರೆ ಅವರ ಮುಂದೆ ಮೇಲ್ಜಾತಿಯ ಮಂದಿ ಕೈಕಟ್ಟಿ ನಿಲ್ಲಬೇಕಾಗುತ್ತದೆ. ಆದುದರಿಂದಲೇ, ಮಲದ ಗುಂಡಿಗೆ ಇಳಿಯುವುದು ದಲಿತರ ಹಕ್ಕು ಎಂಬ ಮನಸ್ಥಿತಿ ಇನ್ನೂ ಜೀವಂತವಾಗಿದೆ.

ಗುಜರಾತಿನ ಅಹ್ಮದಾಬಾದ್‌ನಲ್ಲಿ ಇನ್ನೊಂದು ಘಟನೆ ನಡೆದಿದೆ. ಮದುವೆ ದಿಬ್ಬಣದ ಮೆರವಣಿಗೆಯಲ್ಲಿ ಮದುಮಗ ಕುದುರೆಯೇರಿ ಬಂದುದಕ್ಕಾಗಿ ಗ್ರಾಮದಲ್ಲಿರುವ ಎಲ್ಲ ದಲಿತರಿಗೂ ಮೇಲ್ಜಾತಿಯವರು ಬಹಿಷ್ಕಾರವನ್ನು ಹಾಕಿದ್ದಾರೆ. ಬಹಿಷ್ಕಾರ ದಲಿತರಿಗೆ ಹೊಸತೇನಲ್ಲದಿದ್ದರೂ, ಪಟ್ಟಣದಲ್ಲಿ ಮೂಲಭೂತ ಅಗತ್ಯವಿರುವ ವಸ್ತುಗಳನ್ನು ಇವರಿಗೆ ನೀಡದಂತೆ ತಡೆಯಲಾಗಿದೆ. ಆಟೊ ಚಾಲಕರು ವಾಹನದಲ್ಲೂ ಹತ್ತಿಸಿಕೊಳ್ಳುತ್ತಿಲ್ಲ. ಕುದುರೆಯಲ್ಲಿ ದಲಿತನೊಬ್ಬ ಕುಳಿತುದರಿಂದ ಮೇಲ್ಜಾತಿಗೆ ಆದ ನಷ್ಟವೇನು? ಇಷ್ಟಕ್ಕೂ ಕುದುರೆಯ ಜಾತಿ ಯಾವುದು? ಅಂದರೆ ಕುದುರೆಯೇರುವ ಮೂಲಕ ದಲಿತರು ತಮಗೆ ಸರಿಸಾಟಿಯಾಗಲು ಹೊರಟಿದ್ದಾರೆ ಎನ್ನುವ ಕೀಳರಿಮೆಯೇ ಈ ಬಹಿಷ್ಕಾರಕ್ಕೆ ಕಾರಣ. ದಲಿತರು ಸರಿಸಮಾನವಾಗಿ ಕುದುರೆಯ ಮೇಲೆ ಕೂರುವುದನ್ನೇ ಒಪ್ಪಲು ಸಿದ್ಧರಿಲ್ಲದ ಜನರು, ದಲಿತರು ಸರಕಾರದ ಅತ್ಯುತ್ತಮ ಹುದ್ದೆಗಳಲ್ಲಿ ಕೂರುವುದನ್ನು ಸಹಿಸುತ್ತಾರೆಯೇ? ದೇಶದಲ್ಲಿ ಮೀಸಲಾತಿ ಜಾರಿಯಲ್ಲಿದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೇ ಇರುವುದಕ್ಕೆ ಮುಖ್ಯ ಕಾರಣ, ಅದನ್ನು ಜಾರಿಗೊಳಿಸುವ ಜನರು ಮೇಲ್ಜಾತಿಯವರೇ ಆಗಿರುವುದು. ಈ ಕಾರಣದಿಂದಲೇ ಸಾವಿರಾರು ಮೀಸಲಾತಿ ಹುದ್ದೆಗಳ್ನು ತುಂಬಲಾಗಿಲ್ಲ. ಅವುಗಳನ್ನು ಖಾಲಿ ಉಳಿಸಲಾಗಿದೆ.

ಇತ್ತೀಚೆಗೆ ‘ಮೀಟು’ ಚಳವಳಿ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಇಲ್ಲಿ ಹಲವು ಮಹಿಳೆಯರು ಕಚೇರಿಗಳಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ಹಿಂಸೆಯನ್ನು ಹೇಳಿಕೊಂಡರು. ಯಾವತ್ತೋ ನಡೆದ ಘಟನೆಯನ್ನು ಅವರು ಬಹಿರಂಗಪಡಿಸಿದರು. ಇಲ್ಲಿ ಸಂತ್ರಸ್ತರೆಲ್ಲರೂ ಮೇಲ್ಜಾತಿಯ ಮತ್ತು ಮೇಲ್ವರ್ಗದ ಮಹಿಳೆಯರಾಗಿರುವುದರಿಂದ ಅವುಗಳು ಮಾಧ್ಯಮಗಳಲ್ಲಿ ಭಾರೀ ಮಹತ್ವವನ್ನು ಪಡೆದುಕೊಂಡವು. ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಗಳೂ ನಡೆದವು. ಇದೇ ಸಂದರ್ಭದಲ್ಲಿ, ದಲಿತ ಮಹಿಳೆಯೊಬ್ಬಳು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ವಿರುದ್ಧ ಮಾಡಿದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಲಾಯಿತು. ನ್ಯಾಯಾಧೀಶರಿಗೆ ಕ್ಲೀನ್ ಚಿಟ್ ನೀಡಲಾಯಿತು ಮಾತ್ರವಲ್ಲ, ಸಂತ್ರಸ್ತ ಮಹಿಳೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಆಕೆಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡಲಾಯಿತು. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದರೆ ಯಾರೂ ಬೀದಿಯಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸುವುದಿಲ್ಲ.

ಪ್ರತಿಭಟನೆ ಪಕ್ಕಕ್ಕಿರಲಿ, ಪೊಲೀಸರು ದೂರು ದಾಖಲಿಸುವುದಕ್ಕೇ ಹಿಂದೇಟು ಹಾಕುತ್ತಾರೆ. ದಲಿತರ ಮೇಲೆ ವರ್ಷದಿಂದ ವರ್ಷಕ್ಕೆ ದೌರ್ಜನ್ಯಗಳು ಹೆಚ್ಚುತ್ತಿರುವಾಗಲೇ ದಲಿತರ ದೌರ್ಜನ್ಯ ತಡೆ ಕಾಯ್ದೆಯನ್ನು ಸಡಿಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ಪ್ರತಿಭಟಿಸಿದ ದಲಿತರ ಮೇಲೆಯೇ ಮೊಕದ್ದಮೆಗಳನ್ನು ದಾಖಲಿಸಿ ಅವರನ್ನು ಜೈಲಿಗೆ ತಳ್ಳುವ ಘಟನೆಗಳು ಹೆಚ್ಚುತ್ತಿವೆ. ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವುದನ್ನು ವಿರೋಧಿಸಿ ದಲಿತರು ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದಾಗ ಅವರ ಮೇಲೆ ಗುಂಡು ಹಾರಿಸಲಾಯಿತು. ಗುಂಡು ಹಾರಿಸಿದವರು ಕೇವಲ ಪೊಲೀಸರು ಮಾತ್ರ ಅಲ್ಲ, ಮೇಲ್ಜಾತಿಯ ನಾಯಕರೂ ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವು ದಲಿತ ಯುವಕರು ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮರಾಠಾ ಅರಸರ ವಿರುದ್ಧ ದಲಿತರ ಕೋರೆಗಾಂವ್ ವಿಜಯವನ್ನು ಸ್ಮರಿಸಿದ ಕಾರಣವನ್ನು ಮುಂದೊಡ್ಡಿ ನೂರಾರು ದಲಿತರನ್ನು ಬಂಧಿಸಲಾಗಿದೆ.

ಸಾರ್ವಜನಿಕ ಶಾಂತಿಯನ್ನು ಕೆಡಿಸಿದ ಆರೋಪ ಅವರ ಮೇಲೆ ಹೊರಿಸಲಾಗಿದೆ. ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಮಾತ್ರವಲ್ಲ, ಅದರ ವಿರುದ್ಧ ಸಂಘಟಿತರಾಗುತ್ತಿರುವ ದಲಿತರನ್ನು ವ್ಯವಸ್ಥಿತವಾಗಿ ಮಟ್ಟಹಾಕುವ ಘಟನೆಗಳೂ ಹೆಚ್ಚುತ್ತಿವೆ. ಇಂದು ಮೇಲ್ಜಾತಿಯ ಜನರೇ ಸಂಘಟಿತರಾಗಿ ಬೀದಿಗಿಳಿದಿದ್ದಾರೆ. ಪರಿಣಾಮವಾಗಿ ಮರಾಠರು, ಜಾಟರು, ಪಟೇಲರು ಮೀಸಲಾತಿಯನ್ನು ತಮ್ಮದಾಗಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಆರ್ಥಿಕ ಆಧಾರದಲ್ಲಿ ಮೇಲ್ಜಾತಿಯ ಜನರು ಮೀಸಲಾತಿಯನ್ನು ಪಡೆಯುವಲ್ಲೂ ಯಶಸ್ವಿಯಾಗಿದ್ದಾರೆ. ಇದು ಮೇಲ್ಜಾತಿಯನ್ನು ಇನ್ನಷ್ಟು ಸಬಲಗೊಳಿಸುತ್ತಾ, ದಲಿತರನ್ನು ಮನುವಾದಿ ಭಾರತದ ಕಡೆಗೆ ದೂಡುತ್ತಿದೆ. ಭವಿಷ್ಯದಲ್ಲಿ ದಲಿತರು ಇನ್ನಷ್ಟು ದೌರ್ಜನ್ಯಗಳನ್ನು ಎದುರಿಸಬಹುದಾದ ಸಾಧ್ಯತೆಗಳನ್ನು ಇದು ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News