ಬೆಂಗಳೂರಿನ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಇರೋಮ್ ಶರ್ಮಿಳಾ

Update: 2019-05-15 08:30 GMT

ಬೆಂಗಳೂರು: ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ, ಹದಿನಾರು ವರ್ಷಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಉಕ್ಕಿನ ಮಹಿಳೆ, ಇರೋಮ್ ಶರ್ಮಿಳಾ ಬೆಂಗಳೂರಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ಕ್ಲೌಡ್‌ಲೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

"ಮಕ್ಕಳು ಮುದ್ದಾಗಿದ್ದು, ಆರೋಗ್ಯವಂತವಾಗಿವೆ" ಎಂದು ವೈದ್ಯ ಶ್ರೀಪಾದ್ ವೇಣಿಕರ್ ಹೇಳಿದ್ದಾರೆ. ಕಳೆದ ಒಂಬತ್ತು ತಿಂಗಳಿಂದ ಇದೇ ಆಸ್ಪತ್ರೆಯಲ್ಲಿ ಶರ್ಮಿಳಾ ವೈದ್ಯರ ಸಲಹೆ ಪಡೆಯುತ್ತಿದ್ದರು.

ಅವಳಿ ಮಕ್ಕಳ ಪೈಕಿ ಮೊದಲ ಮಗು ತಾಯಂದಿರ ದಿನ ಬೆಳಗ್ಗೆ 9.21ಕ್ಕೆ ಹುಟ್ಟಿದ್ದು, ಇದರ ತೂಕ 2.16ಕೆ.ಜಿ ಇತ್ತು. ಎರಡನೇ ಮಗು 9.22ಕ್ಕೆ ಹುಟ್ಟಿದ್ದು, ತೂಕ 2.14 ಕೆ.ಜಿ ಇತ್ತು ಎಂದು ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ನಿತಿನ್ ನಾಗ್ ಹೇಳಿದ್ದಾರೆ.

ಅವಳಿ ಮಕ್ಕಳಿಗೆ ನಿಕ್ಸ್ ಶಖಿ ಮತ್ತು ಔತುಮ್ ತಾರಾ ಎಂದು ಹೆಸರಿಡಲಾಗಿದೆ. 46 ವರ್ಷ ವಯಸ್ಸಿನ ಶರ್ಮಿಳಾ, 2017ರಲ್ಲಿ ತಮಿಳುನಾಡಿನ ಕೊಡೈಕೊನಾಲ್‌ನ ಡೆಸ್ಮಂಡ್ ಆಂತೋನಿ ಬೆಲ್ಲರ್‌ನೈನ್ ಕುಟ್ಹಿನೊ ಅವರನ್ನು ವಿವಾಹವಾಗಿದ್ದರು.

2016ರಲ್ಲಿ ತಮ್ಮ ಉಪವಾಸ ಸತ್ಯಾಗ್ರಹ ನಿಲ್ಲಿಸಿದ್ದ ಶರ್ಮಿಳಾ, 2017ರ ಚುನಾವಣೆಯಲ್ಲಿ ಮಣಿಪುರ ಮುಖ್ಯಮಂತ್ರಿ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News