ಪಶ್ಚಿಮ ಬಂಗಾಳದ ಅಸ್ಮಿತೆಯ ಮೇಲೆ ನಡೆದ ದಾಳಿ

Update: 2019-05-17 04:49 GMT

ಕೋಲ್ಕತಾದಲ್ಲಿ ಬಿಜೆಪಿಯ ಕಾರ್ಯಕರ್ತರೆಂದು ಕರೆಸಿಕೊಂಡಿರುವ ದುಷ್ಕರ್ಮಿಗಳು ಸಾಮಾಜಿಕ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆ ಆಕಸ್ಮಿಕವಲ್ಲ. ಬಿಜೆಪಿ ಪಶ್ಚಿಮ ಬಂಗಾಳದೊಳಗೆ ಅಧಿಕಾರ ಹಿಡಿಯಬೇಕಾದರೆ ಆ ನೆಲದ ವೈಚಾರಿಕ ಚಿಂತನೆಗಳು ನಾಶವಾಗಬೇಕು. ಅದಕ್ಕಾಗಿ ಸಾಂಕೇತಿಕವಾಗಿ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿ ಪಶ್ಚಿಮ ಬಂಗಾಳದಲ್ಲಿ ಬೇರಿಳಿಯಲು ಹೊರಟಿದ್ದಾರೆ. ‘ಹಿಂಸಾಚಾರ’ ಬಿಜೆಪಿಯ ರಾಜಕೀಯ ಆಯುಧ. ದೇಶಾದ್ಯಂತ ಹಿಂಸಾಚಾರವನ್ನು ಹರಡುವ ಮೂಲ ಬಿಜೆಪಿ ಸಂಸತ್‌ಗೆ ಪ್ರವೇಶ ಪಡೆಯಿತು. ಯಾವ ಯಾವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆಯೋ ಅಲ್ಲೆಲ್ಲ ಕೋಮುಗಲಭೆಗಳಿಂದ ಅಮಾಯಕರು ನಾಶ, ನಷ್ಟ ಅನುಭವಿಸಿದ್ದಾರೆ.

ಸಾಮಾನ್ಯ ಕಾರ್ಯಕರ್ತರು ಬಿಜೆಪಿಗಾಗಿ ಬಾವುಟ ಹಿಡಿಯಬಲ್ಲರು. ಆದರೆ ಅವರು ಬೀದಿಯಲ್ಲಿ ಕತ್ತಿ ಹಿಡಿದು ಹಿಂಸಾಚಾರ ನಡೆಸಲಾರರು. ಅದಕ್ಕಾಗಿ ಬಿಜೆಪಿ ತರಬೇತಿ ಪಡೆದ ಗೂಂಡಾಗಳನ್ನು, ರೌಡಿಗಳನ್ನು ತನ್ನ ಕಾರ್ಯಕರ್ತರ ವೇಷದಲ್ಲಿ ಸಾಕುತ್ತಾ ಬಂದಿದೆ. ಹಿಂದೂ ರಕ್ಷಣೆ, ಗೋ ರಕ್ಷಣೆ ಇತ್ಯಾದಿ ಮುಖವಾಡದಲ್ಲಿ ಈ ಗೂಂಡಾಗಳು ದೇಶಾದ್ಯಂತ ಹರಡಿದ್ದಾರೆ. ಇಂದು ದೇಶದ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಏಕಮುಖ ಹಿಂಸಾಚಾರವನ್ನು ನಡೆಸುತ್ತಿದೆ. ಆ ಹಿಂಸಾಚಾರಕ್ಕೆ ಅಷ್ಟೇ ತೀವ್ರವಾದ ಪ್ರತಿರೋಧ ಅಲ್ಲಿ ವ್ಯಕ್ತವಾಗದೇ ಇರುವುದರಿಂದಲೇ ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ಆದರೆ ಕೇರಳ ಮತ್ತು ಪಶ್ಚಿಮಬಂಗಾಳ ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಪಶ್ಚಿಮಬಂಗಾಳ ಮತ್ತು ಕೇರಳದ ಬದುಕು ಎಡಪಂಥೀಯ ಚಿಂತನೆಯ ಕಾವಿನಿಂದ ಅರಳಿರುವಂತಹದ್ದು. ಈ ನೆಲಗಳಲ್ಲಿ ನಡೆದ ವೈಚಾರಿಕ ಹೋರಾಟ, ಸಾಮಾಜಿಕ ಕ್ರಾಂತಿಯ ಬೆಳಕು ಇನ್ನೂ ಈ ನೆಲವನ್ನು ಮುನ್ನಡೆಸುತ್ತಿದೆ. ಜನರಲ್ಲಿ ಅಕ್ಷರ ಜಾಗೃತಿಯಿದೆ. ಮನುವಾದದ ಭ್ರಾಮಕ ಕಲ್ಪಿತ ಇತಿಹಾಸವನ್ನು ನಂಬಿ ಅದಕ್ಕೆ ಬಲಿ ಬೀಳುವ ಜನರಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಆರೆಸ್ಸೆಸ್‌ನಂತೆಯೇ ತಮ್ಮ ಸಿದ್ಧಾಂತಕ್ಕಾಗಿ ಸಂಘಟಿತರಾಗಿರುವ ಕಾರ್ಯಕರ್ತರ ಪಡೆಯಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸಂಘಪರಿವಾರ ಪದೇ ಪದೇ ಹಿಂಸಾಚಾರದ ಮೂಲಕ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಾ ಬಂದಿದೆಯಾದರೂ ಅದಕ್ಕೆ ಅಷ್ಟೇ ತೀವ್ರವಾದ ಪ್ರತಿರೋಧ ದೊರಕುತ್ತಿರುವುದರಿಂದ ಈ ರಾಜ್ಯಗಳಲ್ಲಿ ಅದು ಅಸಹಾಯಕವಾಗಿದೆ. ಆ ಕಾರಣಕ್ಕಾಗಿಯೇ ‘ಕೇರಳ, ಪಶ್ಚಿಮ ಬಂಗಾಳದಲ್ಲಿ’ ಮಾತ್ರ ಹಿಂಸೆಗಳು ನಡೆಯುತ್ತಿವೆಯೇನೋ ಎಂದು ಬಿಜೆಪಿ ನಾಯಕರು ಕೇಂದ್ರದಲ್ಲಿ ಕುಳಿತು ಅರಚಾಡುತ್ತಿದ್ದಾರೆ.

ಇಂದು ದೇಶಾದ್ಯಂತ ಸಂಘಪರಿವಾರ ಹಿಂಸಾಚಾರ ನಡೆಸುತ್ತಿದೆ. ಮುಝಫ್ಫರ್ ನಗರದ ಗಲಭೆ, ಗುಜರಾತ್ ಹತ್ಯಾಕಾಂಡ, ಮಂಗಳೂರು ಗಲಭೆ, ಮುಂಬೈ ಗಲಭೆ ಎಲ್ಲೆಲ್ಲ ಕೋಮುಗಲಭೆಗಳು ನಡೆದಿವೆಯೋ ಅಲ್ಲೆಲ್ಲ ಹಲ್ಲೆ-ಪ್ರತಿಹಲ್ಲೆಗಳು ನಡೆದಿಲ್ಲ. ಕೇವಲ ಹಲ್ಲೆಗಳಷ್ಟೇ ನಡೆದಿವೆ. ಅಖ್ಲಾಕ್ ಕೊಲೆ, ಆಸೀಫಾ ಎನ್ನುವ ಮಗುವಿನ ಅತ್ಯಾಚಾರ ಮತ್ತು ಕಗ್ಗೊಲೆ, ಗೋರಕ್ಷಕರ ವೇಷದಲ್ಲಿ ಹಿಂಸಾಚಾರ ಇವುಗಳ ಕುರಿತಂತೆ ಅಮಿತ್ ಶಾ ಆಗಲಿ, ಕೇಂದ್ರ ಸರಕಾರವಾಗಲಿ ಎಂದೂ ತುಟಿ ಬಿಚ್ಚಿಲ್ಲ. ಈ ಹಿಂಸಾಚಾರಗಳ ಹಿಂದೆ ಯಾರಿದ್ದಾರೆ ಎನ್ನುವುದು ಇವರಿಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಾಕ್ಷಣ, ಇಡೀ ಭಾರತದಲ್ಲಿ ಹಿಂಸಾಚಾರವೇ ನಡೆದಿಲ್ಲವೇನೋ ಎಂಬಂತೆ ಅಮಿತ್ ಶಾ ಮತ್ತು ಬಳಗ ಆಡುತ್ತಿದೆ. ಇದಕ್ಕೆ ಕಾರಣ ಸ್ಪಷ್ಟ. ಈ ರಾಜ್ಯಗಳಲ್ಲಿ ಹಲವು ದಶಕಗಳಿಂದ ಸಂಘಪರಿವಾರದ ದುಷ್ಕರ್ಮಿಗಳು ಹಿಂಸಾಚಾರದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಹಿಂಸಾಚಾರಕ್ಕೆ ಪ್ರತಿ ಹಿಂಸೆ ಅವರನ್ನು ತಡೆಯುತ್ತಿದೆ. ‘ಹಿಂಸೆಗೆ ಹಿಂಸೆ ಯಾವತ್ತೂ ಒಪ್ಪವಂತಹದಲ್ಲ’ ನಿಜ. ಆದರೆ ಅದು ಕೇವಲ ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಮಾತ್ರ ಅನ್ವಯವಾಗಬಾರದು. ಇದೀಗ ಕೇರಳ ಮತ್ತು ಪಶ್ಚಿಮ ಬಂಗಾಳದ ವೈಚಾರಿಕತೆಯನ್ನು ನಾಶ ಮಾಡದೆ ಅಲ್ಲಿ ಕಾಲಿಡುವುದು ಅಸಾಧ್ಯ ಎನ್ನುವುದು ಬಿಜೆಪಿಗೆ ಸ್ಪಷ್ಟವಾಗಿದೆ. ಈ ಕಾರಣದಿಂದಲೇ, ಕೇರಳದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ನಾರಾಯಣ ಗುರುಗಳ ಪೀಠದೊಳಗೆ ಸಂಘಪರಿವಾರ ವಿವಿಧ ವೇಷದಲ್ಲಿ ನುಗ್ಗಿ ಅದನ್ನು ಕೈವಶ ಮಾಡಿಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಶಬರಿಮಲೆಯನ್ನು ಇನ್ನೊಂದು ಅಯೋಧ್ಯೆ ಮಾಡಲು ಯತ್ನಿಸುತ್ತಿದೆ. ಆದರೆ ಕೇರಳದ ಜನರ ವೈಚಾರಿಕ ಪ್ರಜ್ಞೆಯಿಂದಾಗಿ ಅವರ ಪ್ರಯತ್ನ ಬಹುತೇಕ ಕೈಕೊಟ್ಟಿದೆ.

ಪಶ್ಚಿಮಬಂಗಾಳದಲ್ಲಿ ಎಡಪಂಥೀಯ ಶಕ್ತಿಗಳು ಗಟ್ಟಿಯಾಗಿ ಬೇರೂರಿದ್ದಾಗ ಬಿಜೆಪಿಗೆ ಅಲ್ಲಿ ಕಾಲಿಡುವುದಕ್ಕೆ ಕಷ್ಟವಾಗಿತ್ತು. ಆದರೆ ಕಾಂಗ್ರೆಸ್‌ನ ದೌರ್ಬಲ್ಯಗಳನ್ನು ಬಳಸಿಕೊಂಡು ಬಿಜೆಪಿ ಇದೀಗ ಪಶ್ಚಿಮ ಬಂಗಾಳದಲ್ಲಿ ಭಾವನಾತ್ಮಕ ರಾಜಕೀಯದ ಮೂಲಕ ಜನರನ್ನು ವಿಭಜಿಸಲು ಹೊರಟಿದೆ. ರಾಮನವಮಿ ಮೆರವಣಿಗೆ, ದುರ್ಗಾ ಪೂಜೆ ಮೊದಲಾದ ಧಾರ್ಮಿಕ ನಂಬಿಕೆಗಳ ಮರೆಯಲ್ಲಿ ಜನರನ್ನು ಮೂರ್ಖರನ್ನಾಗಿಸಿ ಅಲ್ಲಿ ಅಧಿಕಾರ ಹಿಡಿಯಲು ಸಿದ್ಧತೆ ನಡೆಸುತ್ತಿದೆ. ಅದರ ಭಾಗವಾಗಿಯೇ ಸಾಮಾಜಿಕ ಸುಧಾರಕ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಅದು ಧ್ವಂಸಗೊಳಿಸಿದೆ. ಬ್ರಿಟಿಷ್ ಸರಕಾರವನ್ನು ಬಳಸಿಕೊಂಡು, ಹಿಂದೂ ಸಮಾಜದಲ್ಲಿ ಭಾರೀ ಸುಧಾರಣೆಗೆ ಕಾರಣರಾದವರು ವಿದ್ಯಾಸಾಗರ್. ತತ್ವಜ್ಞಾನಿ ಮಾತ್ರವಲ್ಲ ಶಿಕ್ಷಣ ತಜ್ಞರೂ ಆಗಿದ್ದ ಅವರು, ವಿಧವೆಯರಿಗೆ ಮರು ವಿವಾಹ ಅವಕಾಶ ನೀಡಲು ಕಾನೂನೊಂದು ಜಾರಿಗೊಳಿಸಲು ಕಾರಣರಾದವರು.

ಬಂಗಾಳಿ ವರ್ಣಮಾಲೆಯನ್ನು ಆಧುನಿಕಗೊಳಿಸಿ ಅದನ್ನು ಸರಳಗೊಳಿಸಿದ ಹೆಗ್ಗಳಿಕೆ ಇವರದು. ಬಂಗಾಳಿ ವರ್ಣಮಾಲೆ ಸದಾ ವಿದ್ಯಾಸಾಗರ್ ಅವರಿಗೆ ಋಣಿಯಾಗಿದೆ. ಇಂತಹ ಮಹಾ ನಾಯಕರಿಂದ ರೂಪುಗೊಂಡ ಬಂಗಾಳವನ್ನು ಮತ್ತೆ ಮನುವಾದಿ ಬಂಗಾಳವನ್ನಾಗಿಸುವುದು ಸಂಘಪರಿವಾರದ ಗುರಿ. ಬಂಗಾಳದ ಸಾಂಸ್ಕೃತಿಕ ವೈವಿಧ್ಯವನ್ನು, ವೈಚಾರಿಕ ಜಾಗೃತಿಯನ್ನು ನಾಶ ಮಾಡಿ ಹಿಂದುತ್ವದ ಮುಖವಾಡದಲ್ಲಿ ಅಧಿಕಾರ ಹಿಡಿಯಲು ಹೊರಟಿದೆ. ಈ ಸಂದರ್ಭದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗದಿದ್ದರೆ ಖಂಡಿತವಾಗಿ ಸಂಘಪರಿವಾರ ಮತ್ತು ಬಿಜೆಪಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುತ್ತವೆ. ಇಂದು ತೃಣಮೂಲ ಕಾಂಗ್ರೆಸ್, ಎಡಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರರನ್ನು ಮಟ್ಟ ಹಾಕುವ ಹಟದಲ್ಲಿ ಬಿಜೆಪಿಯನ್ನು ಸ್ವಯಂ ಬೆಳೆಸುವುದಕ್ಕೆ ಹೊರಟಿವೆ. ಕನಿಷ್ಠ ಬಿಜೆಪಿ ಮತ್ತು ಸಂಘಪರಿವಾರವನ್ನು ಎದುರಿಸುವ ಸಂದರ್ಭದಲ್ಲಾದರೂ ಪಕ್ಷಭೇದ ಮರೆತು ಒಂದಾಗುವುದು ಅಗತ್ಯವಾಗಿದೆ. ಒಮ್ಮೆ ಬಿಜೆಪಿ ಪಶ್ಚಿಮ ಬಂಗಾಳದೊಳಗೆ ಕಾಲಿಟ್ಟರೆ ಬಳಿಕ ಅದನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಅದು ಬಂದಣಿಕೆಯಂತೆ ಪಶ್ಚಿಮ ಬಂಗಾಳವನ್ನು ಆವರಿಸುತ್ತಾ ಹೋಗುತ್ತದೆ. ಪರಿಸ್ಥಿತಿ ಕೈ ಮೀರುವ ಮೊದಲು ಜಾತ್ಯತೀತ ಪಕ್ಷಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News