ಹೆಗಡೆ-ನಳಿನ್ ಕಟೀಲ್ ವಿರುದ್ಧ ಯಡಿಯೂರಪ್ಪ ಆಕ್ರೋಶ

Update: 2019-05-17 13:05 GMT

ಹುಬ್ಬಳ್ಳಿ, ಮೇ 17: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹಂತಕ ನಾಥುರಾಂ ಗೋಡ್ಸೆ ಬಗ್ಗೆ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಹಾಗೂ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗಳು ಪಕ್ಷದ ಗೌರವಕ್ಕೆ ಧಕ್ಕೆ ತಂದಿದೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಬ್ಬರಿಗೂ ನೋಟಿಸ್ ಜಾರಿ ಮಾಡಿ, 10 ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿದ್ದಾರೆ ಎಂದರು.

ದೇಶದ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಮಾತನಾಡುವಾಗ ಏನು ಮಾತನಾಡುತ್ತಿದ್ದೇವೆ ಎಂಬ ಅರಿವು ಜನಪ್ರತಿನಿಧಿಗಳಿಗೆ ಇರಬೇಕು. ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಬಗ್ಗೆ ಹಗುರವಾದ ಹೇಳಿಕೆಗಳನ್ನು ನೀಡುವುದು ಶೋಭೆ ತರುವುದಿಲ್ಲ. ಇದೊಂದು ಕ್ಷಮಿಸಲಾರದ ಅಪರಾಧವಾಗಿದೆ. ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದರು.

ಅನಂತಕುಮಾರ್ ಹೆಗಡೆ ಟ್ವೀಟ್: 7 ದಶಕಗಳ ನಂತರ ಇಂದಿನ ಪೀಳಿಗೆಯು, ಬದಲಾದ ಸನ್ನಿವೇಶದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಖುಷಿ ತಂದಿದೆ. ಈ ಚರ್ಚೆಯಿಂದ ನಾಥುರಾಂ ಗೋಡ್ಸೆಗೆ ಖುಷಿಯಾಗಿರಬಹುದು ಎಂದು ಅನಂತಕುಮಾರ್ ಹೆಗಡೆ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.

ಸ್ವಪಕ್ಷಿಯರು, ಪ್ರತಿಪಕ್ಷಗಳಿಂದ ಅನಂತಕುಮಾರ್ ಹೆಗಡೆ ಟ್ವೀಟ್‌ಗೆ ಭಾರಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟಣೆ ನೀಡಿದ ಅವರು, ಕಳೆದ ಒಂದು ವಾರದಲ್ಲಿ ನನ್ನ ಟ್ವಿಟರ್ ಖಾತೆ ಎರಡು ಬಾರಿ ಹ್ಯಾಕ್ ಆಗಿತ್ತು. ನನ್ನ ಟೈಮ್ ಲೈನ್ ಮೇಲೆ ಕೆಲವು ಟ್ವೀಟ್‌ಗಳನ್ನು ಹಾಕಲಾಗಿತ್ತು. ಅವುಗಳನ್ನ ಸದ್ಯ ಡಿಲೀಟ್ ಮಾಡಲಾಗಿದೆ. ನನ್ನ ಹೆಸರಿನಲ್ಲಿ ಆಗಿದ್ದ ಪೋಸ್ಟ್‌ಗಳಿಗೆ ವಿಷಾದಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಿನ್ನೆಯಿಂದ ನನ್ನ ಅಕೌಂಟ್ ಹ್ಯಾಕ್ ಆಗಿತ್ತು. ಗಾಂಧೀಜಿ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಗಾಂಧೀಜಿ ಹತ್ಯೆಗೆ ಯಾವುದೇ ಸಮರ್ಥನೆ ಅಥವಾ ಅನುಕಂಪ ಇಲ್ಲ. ದೇಶಕ್ಕೆ ಗಾಂಧೀಜಿ ನೀಡಿದ ಕೊಡುಗೆ ಬಗ್ಗೆ ನಮಗೆಲ್ಲಾ ಅಪಾರ ಗೌರವವಿದೆ ಎಂದು ಅನಂತಕುಮಾರ್ ನಂತರ ಟ್ವೀಟ್ ಮಾಡಿದ್ದಾರೆ.

ನಳೀನ್ ಕುಮಾರ್ ಕಟೀಲ್ ಟ್ವೀಟ್: ಗೋಡ್ಸೆ ಸಾಯಿಸಿದ್ದು ಒಬ್ಬರನ್ನ, ಕಸಬ್ ಸಾಯಿಸಿದ್ದು 72 ಜನರನ್ನು, ಅದೇ ರಾಜೀವ್ ಗಾಂಧಿ 17 ಸಾವಿರ ಜನರನ್ನು ಸಾಯಿಸಿದ್ದು. ನೀವೇ ಹೇಳಿ. ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? ಎಂದು ಪ್ರಶ್ನಿಸಿ ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಕುರಿತು ಇಂದು ಕ್ಷಮೆ ಯಾಚಿಸಿರುವ ನಳೀನ್ ಕುಮಾರ್ ಕಟೀಲ್, ನನ್ನ ಕೊನೆಯ ಎರಡು ಟ್ವೀಟ್‌ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ ಎಂದು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News