ಜಮೀನಿನ ದಿಕ್ಕು ತಿದ್ದಲು 20 ಲಕ್ಷ ಲಂಚ ಆರೋಪ: ಎಸಿಬಿ ತನಿಖೆಗೆ ಆದೇಶಿಸಿದ ಹೈಕೋರ್ಟ್

Update: 2019-05-17 14:19 GMT

ಬೆಂಗಳೂರು, ಮೇ 17: ಜನ ಸಾಮಾನ್ಯರ ಕೆಲಸ ಮಾಡಿಕೊಡಲು ಲಂಚ ಕೇಳುವ ಸರಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಹೈಕೋರ್ಟ್ ಆದೇಶವೊಂದನ್ನು ಹೊರಡಿಸಿದೆ. ತಪ್ಪಾಗಿ ನಮೂದಿಸಲಾಗಿದ್ದ ಒಂದು ಗುಂಟೆ ಜಾಗದ ದಿಕ್ಕಿನ ಮಾಹಿತಿಯನ್ನು ಸರಿಪಡಿಸಲು ಬರೋಬ್ಬರಿ 20 ಲಕ್ಷ ರೂ.ಲಂಚ ಕೇಳಿದ್ದಾರೆ ಎನ್ನಲಾದ ಭೂ ದಾಖಲೆಗಳ ಜಂಟಿ ನಿರ್ದೇಶಕರೊಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ಹೈಕೋರ್ಟ್ ಆದೇಶಿಸಿದೆ. 

ನಗರದ ಕೆ.ಆರ್.ಪುರದ ದೇವಸಂದ್ರ ಗ್ರಾಮದಲ್ಲಿ ತಮಗೆ ಸೇರಿದ ಸರ್ವೇ ನಂ 62/1ಸಿಯ ಒಂದು ಗುಂಟೆ ಜಾಗದ ದಿಕ್ಕಿನ ಮಾಹಿತಿಯನ್ನು 1999ರಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಅದನ್ನು ಸರಿಪಡಿಸಲು ಹಿಂದೆ ಭೂ ದಾಖಲೆಗಳ ಜಂಟಿ ನಿರ್ದೇಶಕರಾಗಿದ್ದ ಕೆ.ಜಯಪ್ರಕಾಶ್, 20 ಲಕ್ಷ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಆ ಜಾಗದ ಮಾಲಕ ಎನ್.ಗಂಗಾಧರ್(72) ಹೈಕೋರ್ಟ್‌ಗೆ ದೂರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರು, ಪ್ರಕರಣವನ್ನು ತನಿಖೆ ನಡೆಸುವಂತೆ ಎಸಿಬಿಗೆ ಆದೇಶಿಸಿದರು.

ತನಿಖೆ ಹಿನ್ನೆಲೆಯಲ್ಲಿ ಜಯಪ್ರಕಾಶ್ ವಿರುದ್ಧದ ಎಲ್ಲ ದಾಖಲೆಗಳನ್ನು ಎಸಿಬಿಗೆ ಒಪ್ಪಿಸಬೇಕು. ಎಸಿಬಿ ತನಿಖಾಧಿಕಾರಿಯ ನ್ಯಾಯಾಲಯದ ಆದೇಶದ ಪ್ರತಿ ದೊರೆತ 90 ದಿನಗಳ ಒಳಗೆ ತನಿಖೆ ಅಂತಿಮ ವರದಿ ಸಿದ್ಧಪಡಿಸಬೇಕು. ಆ ವರದಿ ಮೇಲೆ ನ್ಯಾಯಾಲಯ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶದಿಂದ ಸರಕಾರಿ ಅಧಿಕಾರಿ ಕೆ.ಜಯಪ್ರಕಾಶ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರದ ದೇವಸಂದ್ರ ಗ್ರಾಮದ ಸರ್ವೇ ನಂ 62/1ಸಿಯಲ್ಲಿನ ಒಂದು ಗುಂಟೆ ಜಮೀನು ಈಶಾನ್ಯ ದಿಕ್ಕಿನಲ್ಲಿರುವುದಾಗಿ 1981ರಲ್ಲಿ ಸರ್ವೇ ಬಾಬ್ತು ಪುಸ್ತಕದಲ್ಲಿ ದಾಖಲಾಗಿದೆ. ಆದರೆ, 1999ರಲ್ಲಿ ಸರ್ವೇ ಇಲಾಖೆಯ ಕೆಲ ಅಧಿಕಾರಿಗಳು ಈ ಜಾಗವನ್ನು ವಾಯವ್ಯ ದಿಕ್ಕಿಗೆ ಬದಲಿಸಿ, ಆ ಕುರಿತ ಮಾಹಿತಿಯನ್ನು ಟಿಪ್ಪಣಿ, ಆಕಾರಬಂದಿ ಮತ್ತು ನಕ್ಷೆಯಲ್ಲಿ ನಮೂದಿಸಿದ್ದಾರೆ. ಅಧಿಕಾರಿಗಳು ದುರುದ್ದೇಶದಿಂದಲೇ ಜಾಗದ ದಿಕ್ಕನ್ನು ಕೈ ಬರಹದಿಂದ ತಿದ್ದಿದ್ದಾರೆ. ಆ ಕೆಲಸ ಮಾಡುವಾಗ ಕಾನೂನಿನ ಪ್ರಕ್ರಿಯೆ ಅನುಸರಿಸಿಲ್ಲ. ಯಾವುದೇ ಆದೇಶವೂ ಹೊರಡಿಸಿಲ್ಲ ಹಾಗೂ ಅದಕ್ಕೆ ಸೂಕ್ತ ಕಾರಣ ತಿಳಿಸಿಲ್ಲ. ಈ ಬದಲಾವಣೆಯಿಂದ ಮೂಲ ಜಾಗವು ಕರಾಬು ಬಾಬ್ತು ಜಮೀನಾಗಿದ್ದು, ಅದರಲ್ಲಿ ರಸ್ತೆ ಹಾದು ಹೋಗಿದೆ ಎಂದು ಪ್ರತಿಬಿಂಬಿಸಲಾಗಿದೆ ಎಂಬುದು ಗಂಗಾಧರ ಅವರ ತಕರಾರು. ಅಲ್ಲದೆ, ಗಂಗಾಧರ ಪರ ವಕೀಲರು 2019ರ ಎ.8ರಂದು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ, ಹಿಂದಿನ ಅಧಿಕಾರಿಗಳು ತಪ್ಪಾಗಿ ನಮೂದಿಸಿರುವ ಸರ್ವೇ ನಂ 62/1ಸಿ ಜಾಗದ ದಿಕ್ಕಿನ ಮಾಹಿತಿಯನ್ನು ಸರಿಪಡಿಸಲು ಹಿಂದಿನ ಭೂ ದಾಖಲೆಗಳ ಜಂಟಿ ನಿರ್ದೇಶಕ ಕೆ.ಜಯಪ್ರಕಾಶ್ 20 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದರು.

ಜಯಪ್ರಕಾಶ್ ಪರ ವಕೀಲರ ಆಕ್ಷೇಪ: ಇದರಿಂದ ಕೆಂಡಾಮಂಡಲವಾದ ಹೈಕೋರ್ಟ್, ಜಯಪ್ರಕಾಶ್ ಅವರನ್ನು ವಿಚಾರಣೆಗೆ ಕರೆಸಿಕೊಂಡಿತು. ಅವರ ಪರ ಹೆಚ್ಚುವರಿ ಅಡ್ವೋಕೆಟ್ ಜನರಲ್ ಹಾಜರಾಗಿ, ಅರ್ಜಿದಾರರ ಪರ ವಕೀಲರ ಆರೋಪಗಳು ಸುಳ್ಳು ಆರೋಪ ನಿಜವಾಗಿದ್ದರೆ ಕೂಡಲೇ ಉನ್ನತಾಧಿಕಾರಿ ಅಥವಾ ಹೈಕೋರ್ಟ್ ಮೊರೆ ಹೋಗುವುದಕ್ಕೆ ಗಂಗಾಧರ್‌ಗೆ ಯಾವುದೇ ಅಡ್ಡಿ ಇರಲಿಲ್ಲ ಎಂದು ಅಕ್ಷೇಪಿಸಿದರು. ಇದರಿಂದ, ನ್ಯಾಯಮೂರ್ತಿಗಳು ವಿವಾದಿತ ಸ್ಥಳದ ದಾಖಲೆ ಪರಿಶೀಲಿಸಿದರು. ನಂತರ ಪರಿಶೀಲನೆಯಿಂದ ಜಯಪ್ರಕಾಶ್ ವಿರುದ್ಧದ ಆರೋಪಗಳಲ್ಲಿ ನ್ಯಾಯಾಲಯಕ್ಕೆ ಯಾವುದೇ ಸಂಶಯ ಕಾಣುತ್ತಿಲ್ಲ. ಆದರೆ, ಜಯಪ್ರಕಾಶ್ 20 ಲಕ್ಷ ಹಣ ಕೇಳಿದ್ದರೆ ಎಂಬುದು ತಿಳಿಯಲು ಸಕ್ಷಮ ಪ್ರಾಧಿಕಾರದಿಂದ ತನಿಖೆ ನಡೆಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ, ಎಸಿಬಿಗೆ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News