ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

Update: 2019-05-17 14:35 GMT

ಬೆಂಗಳೂರು, ಮೇ 17: ಉದ್ಯಾನನಗರಿ ಬೆಂಗಳೂರಿನಲ್ಲಿ ಮಧ್ಯಾಹ್ನದಿಂದಲೇ ಸುರಿದ ಆಲಿಕಲ್ಲು-ಗುಡುಗು ಸಹಿತ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.

ಶುಕ್ರವಾರ ಮಧ್ಯಾಹ್ನ 1:30ರಿಂದ 2:15ರ ವರೆಗೆ ಹಾಗೂ ಸಂಜೆ 4ರಿಂದ ಎಡಬಿಡದೆ ಸುರಿದ ಅಬ್ಬರದ ಮಳೆ ಸುರಿದ ಪರಿಣಾಮ ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ಸಾರ್ವಜನಿಕರು, ವಾಹನ ಸವಾರರು ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಯಶವಂತಪುರ, ಶಾಂತಿನಗರ, ಕೋರಮಂಗಲ, ರಿಚ್ಮಂಡ್ ವೃತ್ತ, ಲಾಲ್‌ಬಾಗ್, ಚಾಮರಾಜಪೇಟೆ, ಆಡುಗೋಡಿ, ಬನಶಂಕರಿ, ಹೆಬ್ಬಾಳ, ಮಲ್ಲೇಶ್ವರಂ, ರಾಂಮೂರ್ತಿ ನಗರ, ಯಲಹಂಕ, ಶಿವಾಜಿನಗರ, ಮೆಜೆಸ್ಟಿಕ್, ಕಾರ್ಪೋರೆಷನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ.

ನಗರದ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು, ಮರಗಳು ನೆಲಕ್ಕೆ ಉರುಳಿ ಬಿದ್ದ ಪರಿಣಾಮ ಕೆಲ ವಾಹನಗಳು ಜಖಂಗೊಂಡಿವೆ. ಕೆಲ ಮರಗಳು ರಸ್ತೆಗೆ ಬಿದ್ದ ಪರಿಣಾಮ ಹಲವು ಕಡೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಮತ್ತು ಬೆಸ್ಕಾಂ ಸಿಬ್ಬಂದಿ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News