ಹಾಪ್‌ಕಾಮ್ಸ್‌ಗಳಲ್ಲಿ ತರಕಾರಿ, ಹಣ್ಣುಗಳು ಕಡಿಮೆ ಬೆಲೆಗೆ ಸಿಗುವಂತಾಗಲಿ: ಎಚ್.ಎಸ್.ದೊರೆಸ್ವಾಮಿ

Update: 2019-05-17 15:32 GMT

ಬೆಂಗಳೂರು, ಮೇ 17: ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ತರಕಾರಿ ಮತ್ತು ಹಣ್ಣುಗಳು ಕಡಿಮೆ ಬೆಲೆಗೆ ಸಿಗುವಂತಾದರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರು ಅಭಿಪ್ರಾಯಪಟ್ಟರು.

ಶುಕ್ರವಾರ ಹಡ್ಸನ್ ವೃತ್ತದಲ್ಲಿರುವ ಹಾಪ್‌ಕಾಮ್ಸ್ ಶೀತಲಗೃಹದ ಆವರಣದಲ್ಲಿ ಆಯೋಜಿಸಿದ್ದ ‘ಮಾವು ಹಾಗೂ ಹಲಸು ಮಾರಾಟ ಮೇಳ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯ ಮಾರುಕಟ್ಟೆಯ ತರಕಾರಿ ಹಣ್ಣುಗಳ ಬೆಲೆಗೂ ಹಾಗೂ ಹಾಪ್‌ಕಾಮ್ಸ್‌ನಲ್ಲಿ ಮಾರಾಟವಾಗುವ ಹಣ್ಣು ತರಕಾರಿಗಳ ಬೆಲೆಗೂ ವ್ಯತ್ಯಾಸವೇ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಹಾಪ್‌ಕಾಮ್ಸ್ ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಮೂಲಕ ರೈತ ಮತ್ತು ಗ್ರಾಹಕರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನಾರ್ಹ. ಆದರೆ, ಮಾರುಕಟ್ಟೆಯ ಬೆಲೆಯಷ್ಟೇ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ತರಕಾರಿ ಮತ್ತು ಹಣ್ಣುಗಳ ಬೆಲೆಯನ್ನು ಕಡಿತಗೊಳಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಅವರು ಆಶಿಸಿದರು.

ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ನಾನು ಇವತ್ತಿಗೂ ಕೃಷಿಕ. ರೈತರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ರೈತ ಸ್ವಾವಲಂಬಿಯಾಗಿ ಬದುಕಬೇಕಾದ ಸಂದರ್ಭದಲ್ಲಿ ಹಾಪ್‌ಕಾಮ್ಸ್ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಹಾಪ್‌ಕಾಮ್ಸ್ ಮಳಿಗೆಗಳು ಮತ್ತಷ್ಟು ವಿಸ್ತರಣೆಗೊಳ್ಳಬೇಕಾದ ಅಗತ್ಯವಾಗಿದೆ ಎಂದು ತಿಳಿಸಿದರು.

ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ಮಾತನಾಡಿ, ಪ್ರತಿವರ್ಷ ಈ ಮೇಳವನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಬಾರಿ ಮೇಳದಲ್ಲಿ 15 ತಳಿಗಳನ್ನು ಮಾರಾಟಕ್ಕಿಟ್ಟಿದ್ದು, ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ. ಕಳೆದ ವರ್ಷ 750 ಟನ್ ಮಾವು ಮತ್ತು 150 ಟನ್ ಹಲಸು ಮಾರಾಟವಾಗಿತ್ತು. ಈ ಸಾಲಿನಲ್ಲಿ 1000 ಟನ್ ಮಾವು ಮತ್ತು 200 ಟನ್ ಹಲಸು ವಹಿವಾಟು ನಡೆಸುವ ನಿರೀಕ್ಷೆ ಇದೆ ಎಂದು ತಿಳಿಸಿದರು

ನಗರದ ಎಲ್ಲಾ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಜೂನ್ ಅಂತ್ಯದವರೆಗೆ ಮಾವು-ಹಲಸು ಮಾರಾಟಕ್ಕೆ ಇಡಲಾಗಿದ್ದು, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಹಣ್ಣುಗಳನ್ನು ತರಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇಲ್ಲಿನ ಹಾಪ್‌ಕಾಮ್ಸ್‌ನಲ್ಲಿ ಆಯೋಜಿಸುವ ಮಾವು ಮೇಳಕ್ಕೆ ಪ್ರತಿ ವರ್ಷ ಬರುತ್ತೇನೆ. ವಿವಿಧ ತಳಿಗಳು ಒಂದೇ ಮೇಳದಲ್ಲಿ ಸಿಗುವುದರಿಂದ ಆಯ್ಕೆ ಮಾಡಿಕೊಳ್ಳುವುದು ಕಷ್ಟ. ಎಲ್ಲವನ್ನು ಖರೀದಿಸಬೇಕು ಎನಿಸುತ್ತದೆ. ಮಕ್ಕಳಿಗೆ ಇಷ್ಟವಾಗುವ ಹಣ್ಣುಗಳನ್ನು ಖರೀದಿಸುತ್ತಿದ್ದೆ. ಈ ವರ್ಷವೂ 15 ತಳಿಗಳಿವೆ. ಹಾಪ್‌ಕಾಮ್ಸ್‌ನಲ್ಲಿ ಗುಣಮಟ್ಟದ ಮಾವು ಬರುವುದರಿಂದ ಖರೀದಿಸಲು ಇಷ್ಟ ಪಡುತ್ತೇನೆ.

-ಸರೋಜಾ, ಗ್ರಾಹಕಿ

ಮಾವಿನಹಣ್ಣುಗಳ ಮಾರಾಟ ದರ

ತೋತಾಪುರಿ- 28 ರೂ, ನಾಟಿಮಾವು- 35ರೂ., ಕಾಲಪಾಡು- 80ರೂ, ಸೆಂದೂರ-48 ರೂ., ಬೈಗಾನ್‌ಪಲ್ಲಿ- 65ರೂ, ರಸಪುರಿ-65 ರೂ, ಬಾದಾಮಿ-80ರೂ, ದಸೇರಿ-85ರೂ, ಮಲ್ಲಿಕಾ-80ರೂ, ಬಾದಾಮಿ(ಬಾಕ್ಸ್)-87ರೂ., ಮಲಗೋವ-120ರೂ., ಸಕ್ಕರೆಗುತ್ತಿ-80ರೂ., ಅಮರ್‌ಪಲ್ಲಿ-80ರೂ., ಕೇಸರ-75ರೂ., ಹಲಸಿನ ಹಣ್ಣು-20ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News