ಬಿಬಿಎಂಪಿಯಲ್ಲಿ ಸಾವಿರಾರು ಕೋಟಿ ರೂ. ಹಗರಣ: ಎಎಪಿ ಗಂಭೀರ ಆರೋಪ

Update: 2019-05-17 15:35 GMT

ಬೆಂಗಳೂರು, ಮೇ 17: ಬೃಹತ್ ಬೆಂಗಳೂರು ಮಹಾನಗರದಲ್ಲಿ ಪಾಲಿಕೆಯಲ್ಲಿ ಮೈಕ್ರೊ ಪ್ಲಾನ್ ಅಡಿಯಲ್ಲಿ ಕಸ ಸಂಗ್ರಹ ಹಾಗೂ ತ್ಯಾಜ್ಯ ವಿಲೇವಾರಿಗಾಗಿ ಬಳಸುವ ಆಟೋ ಟಿಪ್ಪರ್‌ಗಳಲ್ಲಿ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಗಂಭೀರವಾಗಿ ಆರೋಪಿಸಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಕಾರ್ಯಕರ್ತ ಮೋಹನ್ ದಾಸ್, ಬಿಬಿಎಂಪಿಯು ಮೈಕ್ರೊ ಪ್ಲಾನ್ ಅಡಿಯಲ್ಲಿ ನಗರದ 198 ವಾರ್ಡ್‌ಗಳಲ್ಲಿ ಕಸ ಸಂಗ್ರಹ ಮತ್ತು ತ್ಯಾಜ್ಯ ವಿಲೇವಾರಿಗಾಗಿ 750 ಮನೆಗಳಿಗೆ 1 ಆಟೋದಂತೆ 4,466 ಆಟೋ ಟಿಪ್ಪರ್‌ಗಳು ಅಗತ್ಯವಿದೆ. ಆದರೆ ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು 1,273 ಆಟೋ ಟಿಪ್ಪರ್‌ಗಳು ಇರುವುದು ಕೂಡ ಸಂದೇಹ ಎಂದು ದೂರಿದರು.

2019-20ರ ಬಿಬಿಎಂಪಿ ಬಜೆಟ್‌ನ್ನು ಪರಿಶೀಲಿಸುವುದಾದರೆ ಸುಮಾರು 700 ಕೋಟಿ ಹಣವನ್ನು ಘನ ತ್ಯಾಜ್ಯ ನಿರ್ವಹಣೆ, ಪೌರಕಾರ್ಮಿಕರ ವೇತನ ಹಾಗೂ ಕಸ ವಿಲೇವಾರಿಗಾಗಿಯೇ ಮೀಸಲಿಡಲಾಗಿದೆ. ಇದರಲ್ಲಿ 356 ಕೋಟಿ ಹಣ ಪೌರ ಕಾರ್ಮಿಕರ ವೇತನಕ್ಕಾಗಿಯೇ ನೀಡಲಾಗಿದ್ದು 257.2 ಕೋಟಿ ಹಣವನ್ನು ಆಟೋ ಟಿಪ್ಪರ್ ಬಳಕೆ ಒಳಗೊಂಡಂತೆ ಘನ ತ್ಯಾಜ್ಯ ನಿರ್ವಹಣೆಗೆಂದೇ ಇದೆ ಎಂದು ಮಾಹಿತಿ ನೀಡಿದರು.

ಬಿಬಿಎಂಪಿಯಲ್ಲಿ 4,466 ಆಟೋ ಟಿಪ್ಪರ್ ಇರಬೇಕಿತ್ತು. ಆದರೆ 2,580 ಆಟೋಗಳು ಕೆಲಸ ಮಾಡುತ್ತಿರುವುದಾಗಿ ದಾಖಲೆಗಳಿವೆ. ಆದರೆ ಇದರಲ್ಲಿಯೂ ಪ್ರತಿದಿನ ಕೇವಲ 1,273 ಆಟೋ ಟಿಪ್ಪರ್‌ಗಳು ಹಾಜರಾಗುತ್ತಿವೆ. ಈ ಕುರಿತು ಹಲವಾರು ಮಾಧ್ಯಮಗಳು ಸುದ್ದಿ ಮಾಡಿವೆ. ಒಟ್ಟಾರೆಯಾಗಿ ಕೆಲಸ ಮಾಡದೇ ಇರುವ ಆಟೋ ಟಿಪ್ಪರ್‌ಗಳ ಸುಳ್ಳು ಲೆಕ್ಕ ಕೊಡುತ್ತಿರುವ ಗುತ್ತಿಗೆದಾರರು ಬಿಬಿಎಂಪಿಯಿಂದ ಕೋಟ್ಯಂತರ ಹಣವನ್ನು ದೋಚುತ್ತಿದ್ದಾರೆ ಎಂದು ತಿಳಿಸಿದರು.

ಒಂದು ಆಟೋ ಟಿಪ್ಪರ್‌ಗೆ ತಿಂಗಳಿಗೆ 57,000 ವ್ಯಯ ಮಾಡಲಾಗುತ್ತಿದ್ದು, ಹಾಲಿ ಕಾರ್ಯನಿರ್ವಹಿಸುತ್ತಿರುವ ಆಟೋ ಟಿಪ್ಪರ್‌ಗಳು 1,230 ಇದ್ದು, ಇವುಗಳ ಕೆಲಸಕ್ಕೆ ತಗಲುವ ವೆಚ್ಚ 80 ಕೋಟಿ. ಆದರೆ ದಾಖಲೆಯಲ್ಲಿರುವ 2,580 ಆಟೋ ಟಿಪ್ಪರ್‌ಗಳಿಗೆ ವರ್ಷಕ್ಕೆ 176.5 ಕೋಟಿ ಹಣ ನೀಡಲಾಗುತ್ತದೆ. ಆದರೆ ಬಿಬಿಎಂಪಿ ಆಟೋ ಟಿಪ್ಪರ್‌ಗಳಿಗಾಗಿ ವ್ಯಯಿಸುತ್ತಿರುವ ಹಣ, ಹಾಲಿ ಕೆಲಸ ಮಾಡುತ್ತಿರುವ ಟಿಪ್ಪರ್‌ಗಳಿಗಿಂತ ದುಪ್ಪಟ್ಟು ಎಂದು ಹೇಳಿದರು.

ದೆಹಲಿಯಲ್ಲಿಯೂ ನೀರಿನ ಟ್ಯಾಂಕರ್ ಹಗರಣವಿತ್ತು. ಆಮ್ ಆದ್ಮಿ ಪಾರ್ಟಿ ಆಡಳಿತಕ್ಕೆ ಬಂದಮೇಲೆ ಇಲ್ಲದಂತಾಯಿತು. ಇಂದು ಬೆಂಗಳೂರಿನಲ್ಲಿ ದೆಹಲಿ ಮಾದರಿಯ ಪ್ರಾಮಾಣಿಕರು ಬಿಬಿಎಂಪಿಯನ್ನು ಪ್ರತಿನಿಧಿಸಬೇಕು. ಇದೇ ನಿಟ್ಟಿನಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಎಲ್ಲ 198 ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದೆ ಎಂದರು.

ಸುಳ್ಳು ದಾಖಲೆ: ಮೈಕ್ರೊ ಪ್ಲಾನ್ ಪ್ರಕಾರ 4,466 ಆಟೋ ಟಿಪ್ಪರ್‌ಗಳಿಗೆ ಬಿಬಿಎಂಪಿ ನಿಗದಿ ಮಾಡಿರುವ ಹಣ 305 ಕೋಟಿ ರೂ. ಆಗಿದೆ. 2017-18ರ ಬಿಬಿಎಂಪಿ ಬಜೆಟ್‌ನಲ್ಲಿ ತ್ಯಾಜ್ಯ ನಿರ್ವಹಣೆಗಾಗಿಯೇ 600 ಕೋಟಿ ಹಾಗೂ 2018-19 ರಲ್ಲಿ 650 ಕೋಟಿ ಹಣ ವೆಚ್ಚ ಮಾಡಿದೆ. ಅದೇ ಸಮಯದಲ್ಲಿ ಆಟೋ ಟಿಪ್ಪರ್‌ಗಳಿಗೆ ನೀಡಿದ ಹಣವು ಈ ವರ್ಷದಂತೆಯೇ ಇದ್ದು, ಸುಳ್ಳು ದಾಖಲೆ ಕೊಟ್ಟು ಗುತ್ತಿಗೆದಾರರು ಬಿಬಿಎಂಪಿಯಿಂದ ಕೋಟಿಗಟ್ಟಲೆ ಹಣ ದೋಚುತ್ತಿರುವುದು ತಿಳಿಯುತ್ತದೆ.

ಪೌರ ಕಾರ್ಮಿಕರ ಹೆಸರಲ್ಲಿ ಲೂಟಿ: ಇಲ್ಲದಿರುವ ಪೌರ ಕಾರ್ಮಿಕರ ಹೆಸರಲ್ಲಿ ಲೂಟಿ ಹೊಡೆಯುತ್ತಿರುವುದರ ಬಗ್ಗೆಯೂ ಮಾಹಿತಿಯಿದ್ದು, ಇದುವರೆಗೂ ಯಾವೊಬ್ಬ ಗುತ್ತಿಗೆದಾರನು ಜೈಲಿಗೆ ಹೋಗಿಲ್ಲ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿ ಲೋಕಾಯುಕ್ತ, ಎಸಿಬಿ ಹಾಗೂ ಬಿಎಂಟಿಎಫ್‌ಗೆ ದೂರು ನೀಡಲಿದೆ.

ಬಿಬಿಎಂಪಿಯಲ್ಲಿ ಆಟೋ ಟಿಪ್ಪರ್ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಹಣ ತೆರಿಗೆದಾರರ ಪ್ರಾಮಾಣಿಕ ಹಣವಾಗಿದ್ದು, ಈ ಹಣವನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು, 198 ವಾರ್ಡ್‌ಗಳ ಕಾರ್ಪೊರೇಟರ್‌ಗಳು ಹಾಗೂ ಶಾಸಕರುಗಳಿಂದ ವಸೂಲಿ ಮಾಡಬೇಕು.

-ಆಮ್ ಆದ್ಮಿ ಪಾರ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News