ರಾಜ್ಯ ರಾಜಧಾನಿಯ ರಸ್ತೆ ಗುಂಡಿಗಳಿಗೆ ಇಲ್ಲ ಮುಕ್ತಿ

Update: 2019-05-17 16:31 GMT

ಬೆಂಗಳೂರು, ಮೇ 17: ರಾಜಧಾನಿಯ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಎಚ್ಚರಿಕೆ ನೀಡಿತ್ತು. ಆದರೆ, ಕಳೆದ ಸೆಪ್ಟೆಂಬರ್‌ನಲ್ಲಿ ಗುಂಡಿ ಮುಕ್ತವಾಗಿದ್ದ ನಗರದಲ್ಲಿ ಮತ್ತೆ ಎಲ್ಲೆಂದರಲ್ಲಿ ಗುಂಡಿಗಳು ಕಾಣಲಾರಂಭಿಸಿವೆ.

ಗುಂಡಿಗಳಿಗೆ ಮುಕ್ತಿ ನೀಡುವ ಕೆಲಸಕ್ಕೆ ಈವರೆಗೂ ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ. ಮಳೆಗಾಲ ಆರಂಭವಾಗುತ್ತಿದ್ದರೂ ಮುಕ್ತಿ ಸಿಗದಂತಾಗಿದೆ. ಪ್ರಮುಖ ರಸ್ತೆಗಳಲ್ಲಿಯೆ ಭಾರಿ ಗುಂಡಿಗಳಿದ್ದು, ನಿತ್ಯ ಒಂದಿಲ್ಲೊಂದು ಅಪಘಾತ ಉಂಟಾಗುತ್ತಿದೆ. ಬಜೆಟ್‌ನಲ್ಲಿ ರಸ್ತೆ ಗುಂಡಿಗೆ ಅನುದಾನ ಮೀಸಲಿದ್ದರೂ ಅದನ್ನು ಬಳಸಿ ಗುಂಡಿ ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.

ರಸ್ತೆ ಗುಂಡಿ ವಿಚಾರವಾಗಿ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಹೀಗೆ ಎಚ್ಚರಿಕೆ ನೀಡಿದ ಒಂದು ವಾರದಲ್ಲಿ ನಗರದಲ್ಲಿನ ಗುಂಡಿಗಳನ್ನು ಲೆಕ್ಕ ಹಾಕಿ ಮುಚ್ಚಲಾಗಿತ್ತು. ಆದರೆ, ಕಳಪೆ ಕಾಮಗಾರಿ ಪರಿಣಾಮ ಮತ್ತೆ ಆ ರಸ್ತೆಗಳಲ್ಲಿ ಗುಂಡಿಗಳು ಕಾಣಿಸುವಂತಾಗಿದೆ. ಪ್ರಮುಖ ರಸ್ತೆಗಳಾದ ಬನ್ನೇರುಘಟ್ಟ ಮುಖ್ಯರಸ್ತೆ, ಶಾಂತಿನಗರ ಜೋಡಿ ರಸ್ತೆ, ಲಾಲ್‌ಬಾಗ್ ರಸ್ತೆ, ಬಾಗಲಗುಂಟೆ, ಬಿವಿಕೆ ಐಯ್ಯಂಗಾರ್ ರಸ್ತೆ, ಗಾಂಧಿನಗರ, ಶೇಷಾದ್ರಿಪುರ, ಶಿವಾನಂದ ವೃತ್ತ, ಮೈಸೂರು ರಸ್ತೆ, ಕತ್ತರಿಗುಪ್ಪೆ, ಬಸವನಗುಡಿ, ನಾಗರಬಾವಿ ಮುಖ್ಯರಸ್ತೆ, ಬಿಇಎಲ್ ರಸ್ತೆ, ಚಂದ್ರಾಲೇಔಟ್ ಸೇರಿ ನಗರದ ಬಹುತೇಕ ಬಡಾವಣೆಗಳಲ್ಲಿ ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ.

ರಸ್ತೆ ಗುಂಡಿ ಮುಚ್ಚಿ, ದುರಸ್ತಿ ಮಾಡಿ 6 ತಿಂಗಳಾಗಿದೆ ಅಷ್ಟೇ, ಬಿದ್ದ ಮೊದಲ ಮಳೆಗೇ ಗುಂಡಿ ಕಾಣಿಸಿಕೊಂಡಿರುವುದು ಬಿಬಿಎಂಪಿ ಕಾಮಗಾರಿ ಗುಣಮಟ್ಟವನ್ನೇ ಅಣಕವಾಡುವಂತಾಗಿದೆ. ಅದರಲ್ಲೂ ಗುಂಡಿ ಮುಚ್ಚಿದ ಜಾಗದಲ್ಲಿ ಡಾಂಬರು ಕಿತ್ತು ಬಂದು ಗುಂಡಿ ಕಾಣಿಸಿಕೊಂಡಿದೆ. ಅಲ್ಲದೆ, ಮೇ ತಿಂಗಳಲ್ಲಿ ಸುರಿದ 2 ಮಳೆಗೆ ರಸ್ತೆಗಳೆಲ್ಲ ಹಾಳಾಗಿವೆ.

ರಸ್ತೆ ಗುಂಡಿ ಮುಚ್ಚಲು ಕೆಲವೊಂದು ನಿಯಮ ಅನುಸರಿಸಬೇಕಿದೆ. ಗುಂಡಿ ಬಿದ್ದ ಜಾಗವನ್ನು ಚೌಕಾಕಾರ ಅಥವಾ ಆಯಥಾಕಾರವಾಗಿ ಕತ್ತರಿಸಬೇಕು. ಆನಂತರ ಅಲ್ಲಿ ಬಿಟುಮಿನ್ ಮಿಶ್ರಣ ತುಂಬಿ ಸಮತಟ್ಟು ಮಾಡಬೇಕು. ಹೀಗೆ ಬಿಟುಮಿನ್ ಮಿಶ್ರಣ ತುಂಬುವಾಗ ಅದು ರಸ್ತೆ ಎತ್ತರಕ್ಕಿಂತ ಜಾಸ್ತಿ ಇರಬಾರದು. ಆದರೆ, ಈ ಯಾವ ನಿಯಮವನ್ನು ಅನುಸರಿಸಿ ರಸ್ತೆ ಗುಂಡಿ ಮುಚ್ಚಿಲ್ಲ. ಅದರಲ್ಲೂ ಬಹುತೇಕ ಕಡೆ ಗುಂಡಿ ಮುಚ್ಚಿದ ನಂತರ ರಸ್ತೆ ಉಬ್ಬು ನಿರ್ಮಾಣವಾಗುವಂತಾಗಿದೆ.

ಅನುದಾನವಿದೆ, ಬಳಸುತ್ತಿಲ್ಲ: ವಾರ್ಡ್‌ಗಳಲ್ಲಿನ ರಸ್ತೆ ಗುಂಡಿ ಮುಚ್ಚುವುದನ್ನು ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ ಬಿಬಿಎಂಪಿ ಆಯುಕ್ತರು, ಸಹಾಯಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ರಸ್ತೆ ಗುಂಡಿ ದುರಸ್ತಿ ಹೊಣೆ ನೀಡಿದ್ದರು. ಅದರ ಜತೆಗೆ ಎಇಗಳು 1 ಲಕ್ಷ ರೂ. ಮತ್ತು ಎಇಇಗಳು 25 ಸಾವಿರ ರೂ. ಮೊತ್ತವನ್ನು ಬಳಸಿ ರಸ್ತೆ ಗುಂಡಿ ದುರಸ್ತಿ ಕಾರ್ಯ ಮಾಡಿಸಬಹುದು ಎಂದು ಆದೇಶಿಸಿದ್ದರು. ಆದರೆ, ಆ ಅನುದಾನ ಬಳಸಿ ಗುಂಡಿ ಮುಚ್ಚಲು ಅಧಿಕಾರಿಗಳು ಮುಂದಾಗಿಲ್ಲ.

ಸಾವಿರ ಗುಂಡಿಗಳು: ಹೈಕೋರ್ಟ್ ಚಾಟಿ ಬೀಸಿದ ನಂತರ ರಾತ್ರೊರಾತ್ರಿ ನಗರದಲ್ಲಿನ ರಸ್ತೆ ಗುಂಡಿಗಳನ್ನು ಬಿಬಿಎಂಪಿ ಸಿಬ್ಬಂದಿ ಲೆಕ್ಕ ಹಾಕಿದ್ದರು. 3,071 ಗುಂಡಿಗಳನ್ನು ಪತ್ತೆ ಮಾಡಿದ್ದರು. ಅದಾದ ನಂತರ ಸಮರೊಪಾದಿಯಲ್ಲಿ ಗುಂಡಿಗಳನ್ನು ಮುಚ್ಚಿದ್ದರು. ಆದರೆ, ಈಗ ಅಷ್ಟೆ ಪ್ರಮಾಣದ ಗುಂಡಿಗಳು ಕಾಣಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News