ಬಂಧೇರ್‌ವಾ: ಹತ್ಯೆ ಪ್ರಕರಣಕ್ಕೆ ಕೋಮುಬಣ್ಣ ಬಳಿಯಲು ಯತ್ನ- ಜಿಲ್ಲಾಧಿಕಾರಿ

Update: 2019-05-17 18:47 GMT

ಜಮ್ಮು, ಮೇ 17: ಜಮ್ಮು ಮತ್ತು ಕಾಶ್ಮೀರದ ಬಂಧೇರ್‌ವಾ ಕಣಿವೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಗುರುವಾರ ವಿಧಿಸಲಾಗಿದ್ದ ಕರ್ಫ್ಯೂ ಶುಕ್ರವಾರವೂ ಮುಂದುವರಿದಿದೆ. ಈ ಮಧ್ಯೆ, ಗೋರಕ್ಷಣೆಯ ನೆಪದಲ್ಲಿ ಹತ್ಯೆ ಮಾಡಲಾಗಿದೆ ಎಂಬ ಮಾಧ್ಯಮದ ವರದಿಯನ್ನು ಖಂಡಿಸಿರುವ ದೋಡ ಜಿಲ್ಲಾಡಳಿತ, ಈ ಪ್ರಕರಣಕ್ಕೆ ಕೋಮುಬಣ್ಣ ಬಳಿಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯ ಜೊತೆಗೆ ಸೇನೆಯನ್ನು ನಿಯೋಜಿಸಲಾಗಿದೆ. ನಗರದಲ್ಲಿ ಕರ್ಫ್ಯೂ ಮುಂದುವರಿಸಲಾಗಿದ್ದು ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ದೋಡಾದ ಜಿಲ್ಲಾಧಿಕಾರಿ ಸಾಗರ್ ದಾಯ್‌ಫೊಡೆ ಹೇಳಿದ್ದಾರೆ. ಮೃತಪಟ್ಟ ವ್ಯಕ್ತಿಯ ಕುಟುಂಬದವರನ್ನು ತಾನು ಭೇಟಿ ಮಾಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಸಂತೃಪ್ತಿ ಸೂಚಿಸಿದ್ದಾರೆ.

ಕೊಲೆ ಘಟನೆಗೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಿದ್ದು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ, ಆದರೆ ಇದು ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆಯಲ್ಲ. ಅಂತಹ ಪ್ರಕರಣ ಇದಲ್ಲ. ಕೆಲವರು ಇದಕ್ಕೆ ಉದ್ದೇಶಪೂರ್ವಕವಾಗಿ ಕೋಮುಬಣ್ಣ ಬಳಿಯುತ್ತಿದ್ದಾರೆ ಎಂದು ಹೇಳಿದರು. ಬುಧವಾರ ಮಧ್ಯರಾತ್ರಿ ನಡೆದ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಯೀಮ್ ಎಂದು ಗುರುತಿಸಲಾಗಿದೆ. ಗೋರಕ್ಷಕರು ಎಂದು ಹೇಳಿಕೊಂಡ ಕೆಲವರು ನಯೀಮ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಬುಧವಾರ ರಾತ್ರಿ ಇಬ್ಬರು ವ್ಯಕ್ತಿಗಳು ಪರಿಸರದಲ್ಲಿ ಶಂಕಾಸ್ಪದವಾಗಿ ಅಡ್ಡಾಡುತ್ತಿದ್ದುದು ಗುಂಡು ಹಾರಾಟ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಪ್ರಕರಣದ ಹಿಂದೆ ಹಿಂದೂ ಸಂಘಟನೆಯ ಕೈವಾಡವಿದೆ ಎಂಬ ಆರೋಪವನ್ನು ನಿರಾಕರಿಸಿರುವ ಜಮ್ಮು ಸನಾತನ ಧರ್ಮ ಸಭಾದ ವಕ್ತಾರರು, ಹಿಂಸಾತ್ಮಕ ಪ್ರತಿಭಟನೆ ಖಂಡನೀಯವಾಗಿದ್ದು ಈ ಪ್ರದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಸಮುದಾಯವನ್ನು ಗುರಿಯಾಗಿಸಿಕೊಂಡು ಆಕ್ರಮಣ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News