ಮರಾಠಾ ಮೀಸಲಾತಿ: ಆಧ್ಯಾದೇಶ ಪ್ರಕಟಣೆಗೆ ಸಂಪುಟ ಅನುಮೋದನೆ

Update: 2019-05-17 18:50 GMT

ಮುಂಬೈ, ಮೇ 17: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ನ ಮರಾಠಾ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ವರ್ಗಗಳ (ಎಸ್‌ಇಬಿಸಿ) ಮೀಸಲಾತಿ ಕಾಯ್ದೆ-2018ಕ್ಕೆ ತಿದ್ದುಪಡಿ ತರುವ ಆಧ್ಯಾದೇಶ ಪ್ರಕಟಣೆಗೆ ಮಹಾರಾಷ್ಟ್ರ ಸರಕಾರ ಶುಕ್ರವಾರ ಅನುಮತಿ ನೀಡಿದೆ.

ಈ ಆಧ್ಯಾದೇಶದ ಪ್ರಕಟಣೆಯಿಂದ ತೊಂದರೆಗೊಳಗಾಗುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಶುಲ್ಕವನ್ನು ಮರು ಪಾವತಿಸಲು ಕೂಡ ಸಂಪುಟ ಅನುಮತಿ ನೀಡಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಟ್ ಕೋಟಾದ ಅಡಿಯಲ್ಲಿ ಪ್ರವೇಶ ಕೋರಬಹುದು ಎಂದು ಸಚಿವರು ತಿಳಿಸಿದ್ದಾರೆ. ಪ್ರವೇಶ ಪ್ರಕ್ರಿಯೆಗಳು ತುಂಬಾ ಬೇಗ ಆರಂಭವಾಗಿದೆ ಎಂಬ ಆಧಾರದಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶದಲ್ಲಿ ಮರಾಠಾ ಸಮುದಾಯಕ್ಕೆ ಶೇ. 16 ಮೀಸಲಾತಿ ನೀಡಬೇಕೆಂಬುದಕ್ಕೆ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಅನುಮತಿ ನೀಡಿರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಆಧ್ಯಾದೇಶ ರೂಪಿಸಲಾಗಿತ್ತು. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್, ಆಧ್ಯಾದೇಶದ ಕರಡನ್ನು ಪ್ರಕಟಣೆಗಾಗಿ ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News