'ಜಲಾಮೃತ' ಬರಪರಿಹಾರಕ್ಕೆ ಶಾಶ್ವತ ಕ್ರಮ: ಸಚಿವ ಕೃಷ್ಣಭೈರೇಗೌಡ

Update: 2019-05-18 14:46 GMT

ಬೆಂಗಳೂರು, ಮೇ 18: ನಮ್ಮ ರಾಜ್ಯವು ಕಳೆದ 19 ವರ್ಷಗಳಲ್ಲಿ 15 ವರ್ಷಗಳ ಕಾಲ ಎದುರಿಸುತ್ತಿರುವ ನಿರಂತರ ಬರಗಾಲವನ್ನು ಎದುರಿಸಲು ಸರಕಾರವು ಶಾಶ್ವತ ಪರಿಹಾರ ಕ್ರಮವಾಗಿ 'ಜಲಾಮೃತ' ಯೋಜನೆಯನ್ನು ಜೂ.11ರಿಂದ ಜಾರಿಗೆ ತರಲು ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಶನಿವಾರ ನಗರದ ಎಂ.ಎಸ್.ಬಿಲ್ಡಿಂಗ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾನುವಾರುಗಳಿಗೆ ಮೇವು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ, ಬೆಳೆ ನಷ್ಟ ಅನುಭವಿಸುವ ರೈತರಿಗೆ ಪರಿಹಾರ ಒದಿಗಸುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ತಾತ್ಕಾಲಿಕವಾಗಿ ಕೈಗೊಳ್ಳುತ್ತೇವೆ. ಆದರೆ, ದೀರ್ಘ ಕಾಲದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಬರ ಪರಿಹಾರಕ್ಕೆ ದೀರ್ಘ ಹಾಗೂ ಶಾಶ್ವತ ಮಾರ್ಗೋಪಾಯಗಳನ್ನು ರೂಪಿಸಲು ರಾಜ್ಯ ಸರಕಾರವು ಜಲಾಮೃತ ಯೋಜನೆಯನ್ನು ರೂಪಿಸಿ, ಇದರ ಭಾಗವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ 2019ನ್ನು ಕರ್ನಾಟಕದ ಜಲವರ್ಷ ಎಂದು ಘೋಷಣೆ ಮಾಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಜಲಾಮೃತ ಹಾಗೂ ಜಲವರ್ಷ ಈ ಎರಡು ಅಭಿಯಾನಗಳನ್ನು ಯಶಸ್ವಿಗೊಳಿಸಲು ಜಲ ಸಾಕ್ಷರತೆ, ಜಲ ಸಂರಕ್ಷಣೆ- ಜಲ ಮೂಲಗಳ ಪುನಃಶ್ಚೇತನ ಮತ್ತು ಹೊಸ ಜಲ ಮೂಲಗಳನ್ನು ಸೃಜಿಸುವುದು, ನೀರಿನ ಪ್ರಜ್ಞಾವಂತ ಬಳಕೆ ಹಾಗೂ ಹಸಿರೀಕರಣವನ್ನು ಆಧಾರ ಸ್ತಂಭಗಳನ್ನಾಗಿ ಮಾಡಿಕೊಂಡಿದ್ದೇವೆ ಅವರು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯಾದ ಜೂ.5ರಂದು ರಜೆ ಇರುವ ಕಾರಣ, ಜೂ.11ರಂದು ರಾಜ್ಯದ 6022 ಗ್ರಾಮ ಪಂಚಾಯತ್ ಗಳಲ್ಲಿ ಏಕ ಕಾಲಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಕನಿಷ್ಠ 500 ಗಿಡಗಳನ್ನು ನಡೆಲಾಗುತ್ತದೆ. ಸಾರ್ವಜನಿಕರು, ಸ್ವ-ಸಹಾಯ ಗುಂಪುಗಳು, ಶಾಲಾ ಮಕ್ಕಳು, ಪಂಚಾಯತ್ ಗಳ ಸದಸ್ಯರು ಸೇರಿ ಕನಿಷ್ಠ 30 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ನ ಅಡಿಯಲ್ಲಿ ಬರುವ ಎಲ್ಲ ಸರಕಾರಿ ಕಚೇರಿಗಳ ಆವರಣದಲ್ಲಿ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ರಾಜ್ಯದ 1000 ಗ್ರಾಮ ಪಂಚಾಯತ್ ಗಳಲ್ಲಿ ಸುಸ್ಥಿರ ಘನತ್ಯಾಜ್ಯ ನಿರ್ವಹಣೆಯನ್ನು ಪ್ರಾರಂಭಿಸಲಾಗುವುದು. ಹಸಿ ಕಸವನ್ನು ನಾಗರಿಕರೆ ತಮ್ಮ ಜಮೀನುಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ಒಣ ಕಸವನ್ನು ಮಾತ್ರ ಗ್ರಾಮ ಪಂಚಾಯತ್ ಸಂಗ್ರಹಿಸುತ್ತದೆ ಎಂದು ಕೃಷ್ಣಭೈರೇಗೌಡ ಹೇಳಿದರು. ಜಲ ಸಾಕ್ಷರತೆ ಕುರಿತಾದ ಅರಿವು/ಸಂವಾದಗಳನ್ನು ಪ್ರತಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಸಲಾಗುವುದು. ಜಲಾಮೃತ ಕಾರ್ಯಕ್ರಮದ ಅಂಗವಾಗಿ 20 ಸಾವಿರ ಚೆಕ್‌ಡ್ಯಾಂಗಳ ನಿರ್ಮಾಣದ ಗುರಿಯಿದೆ. ಈಗಾಗಲೇ ಮೂರು ಸಾವಿರ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ಇನ್ನು ಆರು ಘಟಕಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

14 ಸಾವಿರ ಸಣ್ಣ ಪುಟ್ಟ ಜಲ ತಾಣಗಳ ಪುನರುಜ್ಜೀವನಗೊಳಿಸಲು ಉದ್ದೇಶಿಸಿದ್ದೇವೆ. ಇದಕ್ಕಾಗಿ ನರೇಗಾ ಯೋಜನೆಯ ಪ್ರಯೋಜನ ಪಡೆದುಕೊಂಡು ಸುಮಾರು 500 ಕೋಟಿ ರೂ.ಬಂಡವಾಳದೊಂದಿಗೆ ಈ ಸಾರ್ವಜನಿಕ ಆಸ್ತಿಗಳನ್ನು ಸೃಜಿಸಲಾಗುವುದು ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್ ಗಳ ಮೂಲಕ ಸುಮಾರು 2 ಕೋಟಿ ಸಸಿಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಂದು ವಾಣಿಜ್ಯ ಉದ್ದೇಶದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇ.1ರಷ್ಟು ಮೊತ್ತವನ್ನು ಗಿಡ ನೆಡುವುದಕ್ಕಾಗಿ ಬಳಸಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ರಸ್ತೆ ನಿರ್ಮಾಣ, ಪುನರ್ ನಿರ್ಮಾಣ, ನವೀಕರಣದ ಕಾಮಗಾರಿಗಳಲ್ಲಿ ರಸ್ತೆಯ ಬದಿಗಳಲ್ಲಿ ಗಿಡ ನೆಡುವುದನ್ನು ಕಡ್ಡಾಯಗೊಳಿಸಲಾಗುವುದು. ಅಲ್ಲದೇ, ಸರಕಾರಿ ಕಟ್ಟಡ ನಿರ್ಮಾಣಗಳಿಗಾಗಿ ಸಿದ್ಧಪಡಿಸುವ ಅಂದಾಜು ಪಟ್ಟಿಯಲ್ಲಿ ಮಳೆ ನೀರು ಸಂಗ್ರಹಣೆ ಅಥವಾ ಜಲ ಮರುಪೂರಣ ವ್ಯವಸ್ಥೆ ಮತ್ತು ಗಿಡ ನೆಡುವುದನ್ನು ಅಂದಾಜು ಪಟ್ಟಿಯಲ್ಲಿ ಸೇರಿಸಿ ಅನುಷ್ಠಾನಗೊಳಿಸಲು ಕಡ್ಡಾಯ ಮಾಡಲಾಗುವುದು ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಭಾಗದಲ್ಲಿ ನೇತ್ರಾವತಿ ನೀರು ಬರಿದಾಗುತ್ತಿರುವ ವಿಚಾರದ ಕುರಿತು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಾಗುವುದು. ನದಿಯ ಜಲ ಮೂಲದ ವಿಷಯ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೂ, ನಮ್ಮ ಇಲಾಖೆ ಕಡೆಯಿಂದಲೂ ಯಾವ ರೀತಿ ನೆರವು ನೀಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸುತ್ತೇವೆ.

-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News