ಹಿಂದೂ ಮಹಾಸಭಾದಿಂದ ಗೋಡ್ಸೆ ಜನ್ಮದಿನಾಚರಣೆ, ಸಿಹಿತಿಂಡಿ ವಿತರಣೆ

Update: 2019-05-20 04:50 GMT
ಕೃಪೆ: jansatta.com

ಗ್ವಾಲಿಯರ್, ಮೇ 20 : ಇಲ್ಲಿ ರವಿವಾರ ಹಿಂದೂ ಮಹಾಸಭಾ ವತಿಯಿಂದ ಮಹಾತ್ಮಾ ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆಯ ಜನ್ಮದಿನಾಚರಣೆ ಆಚರಿಸಲಾಯಿತು. 1910ರ ಮೇ 19ರಂದು ಗೋಡ್ಸೆ ಜನ್ಮ ತಾಳಿದ್ದ.

ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಇಲ್ಲಿನ ದೌಲತ್ ಗಂಜ್ ಪ್ರದೇಶದಲ್ಲಿರುವ ತನ್ನ ಕಚೇರಿಯಲ್ಲೇ ಕಾರ್ಯಕ್ರಮ ನಡೆಯಿತು ಎಂದು ಹೇಳಿದ್ದಾರೆ. ಗೋಡ್ಸೆ ದೇಶಭಕ್ತ ಎಂದು ಬಣ್ಣಿಸಿದ ಭಾರದ್ವಾಜ್, ನಾವು ಗೋಡ್ಸೆ ಭಾವಚಿತ್ರಕ್ಕೆ ಆರತಿ ಎತ್ತಿ, ಗೌರವ ಸಲ್ಲಿಸಿ ಬಳಿಕ ಸಿಹಿತಿಂಡಿ ವಿತರಿಸಿದೆವು ಎಂದು ಹೇಳಿದ್ದಾರೆ.

ಬಿಜೆಪಿಯ ಹಲವು ನಾಯಕರು ಗೋಡ್ಸೆಯನ್ನು ದೇಶಭಕ್ತ ಎಂದು ಪರಿಗಣಿಸುತ್ತಾರೆ ಎಂದ ಭಾರದ್ವಾಜ್ ಅಲ್ಲಿ ಕೆಲವರಿಗೆ ಮಾತ್ರ ಗೋಡ್ಸೆಯನ್ನು ಕಂಡರೆ ಆಗುವುದಿಲ್ಲ ಎಂದರು.

ಈ ಹಿಂದೆ  2017 ರಲ್ಲಿ ಹಿಂದೂ ಮಹಾಸಭಾ ತನ್ನ ಗ್ವಾಲಿಯರ್ ಕಚೇರಿಯಲ್ಲಿ ಗೋಡ್ಸೆಯ ಪ್ರತಿಮೆ ಅನಾವರಣ ಮಾಡಿತ್ತು. ಬಳಿಕ ಅದನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿತು.  ಈ ಪ್ರತಿಮೆಯನ್ನು ನವೆಂಬರ್ 15ರೊಳಗೆ ವಾಪಾಸ್ ಮಾಡದಿದ್ದರೆ ನಾವು ಹೊಸ ಪ್ರತಿಮೆ ಇಡುತ್ತೇವೆ ಎಂದು ಭಾರದ್ವಾಜ್ ಹೇಳಿದ್ದಾರೆ.

ಘಟನೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಎಸ್ಪಿ ಸತ್ಯೇ ತಂದ್ರ ಸಿಂಗ್, ಕಟ್ಟಡದೊಳಗೆ ನಡೆದ ಕಾರ್ಯಕ್ರಮವಾದ್ದರಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಪೊಲೀಸರು ಕಣ್ಣಿಟ್ಟಿದ್ದು ಅದರಿಂದ ಶಾಂತಿ ಭಂಗವೂ ಆಗಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಮೀರಟ್ ನಲ್ಲೂ ರವಿವಾರ ಅಖಿಲ ಭಾರತೀಯ ಹಿಂದೂ ಮಹಾಸಭಾದಿಂದ ನಾಥೂರಾಮ್ ಗೋಡ್ಸೆ ಜನ್ಮದಿನ ಆಚರಿಸಲಾಯಿತು. ಮಹಾಸಭಾದ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮ ನೇತೃತ್ವದಲ್ಲಿ ಇದನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಯಜ್ಞ ಮಾಡಿ ಸಿಹಿತಿಂಡಿ ವಿತರಿಸಲಾಯಿತು. ಅಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ದೇಶದ ವಿಭಜನೆಗೆ ಗಾಂಧೀಜಿ ಕಾರಣ. ಇದರಿಂದ ನಲವತ್ತು ಲಕ್ಷ ಜನರ ಮಾರಣ ಹೋಮ ನಡೆಯಿತು. ಹಿಂದೂ ಧರ್ಮವನ್ನು ರಕ್ಷಿಸಲು ಗೋಡ್ಸೆ ಗಾಂಧೀಜಿಯ ಹತ್ಯೆ ಮಾಡಿದರು ಎಂದು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News