ಇವಿಎಂ ಹ್ಯಾಕ್ ಆಗಿರುವ ಅನುಮಾನವಿದೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

Update: 2019-05-20 14:34 GMT

ಬೆಂಗಳೂರು, ಮೇ 20: ದೇಶದಲ್ಲಿ ಬಿಜೆಪಿ ಪರವಾದ ಫಲಿತಾಂಶ ಸಮೀಕ್ಷೆ, ಅವರೇ ಹೇಳಿ ಮಾಡಿಸಿದ ರೀತಿ ಎಂಬ ವರದಿ ಇದೆ. ಆದರೆ, ವಸ್ತು ಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.

ಸೋಮವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚುನಾವಣೋತ್ತದ ಸಮೀಕೆ ಬಗ್ಗೆ ಮಾತನಾಡಿದ ಅವರು, 300ರಿಂದ 400 ಸೀಟುಗಳು ಬರಲಿವೆ ಎಂದು ಸಮೀಕ್ಷೆ ಮೂಲಕ ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ವಾಸ್ತವದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ನಿನ್ನೆ ಹೊಸದಿಲ್ಲಿಯಲ್ಲಿ ನಾಯಕರನ್ನು ಭೇಟಿ ಮಾಡಿದಾಗಲೂ ಇದೆ ಅಭಿಪ್ರಾಯ ಕೇಳಿ ಬಂದಿದೆ. ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರಲಿದೆ ಎಂಬ ವರದಿಯನ್ನು ನಂಬಲಾದರೂ ಸಾಧ್ಯವೇ? ಎಂದು ಪರಮೇಶ್ವರ್ ಇಂದಿಲ್ಲಿ ಪ್ರಶ್ನಿಸಿದರು.

ಈ ಬಾರಿ ಸಮೀಕ್ಷಾ ವರದಿ ಸಂಪೂರ್ಣ ತಪ್ಪಿದೆ. ಅದರಲ್ಲೂ ಕರ್ನಾಟಕದ ಸ್ಥಿತಿ ಗೊತ್ತಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳೇ ಹೆಚ್ಚು ಸ್ಥಾನ ಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪರಮೇಶ್ವರ್ ಭರವಸೆ ವ್ಯಕ್ತಪಡಿಸಿದರು. ಇವಿಎಂ ಬೇಡ, ಬ್ಯಾಲೆಟ್ ಪೇಪರ್ ತರುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇವಿಎಂ ಹ್ಯಾಕ್ ಮಾಡುವ ಸಾಧ್ಯತೆಯ ಬಗ್ಗೆ ಉದಾಹರಣೆ ನೋಡಿದ್ದೇವೆ. ಆ ಅನುಮಾನವೂ ಮೂಡಿದೆ ಎಂದು ಪರಮೇಶ್ವರ್ ಇದೇ ವೇಳೆ ಸಂಶಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News