ಹುಟ್ಟುವಾಗಲೇ ಎರಡೂ ಕೈಗಳಿಲ್ಲ: ಪಾದಗಳಿಂದಲೇ ವಿಮಾನ ಹಾರಿಸುವ ದಿಟ್ಟ ಮಹಿಳೆ ಈಕೆ!

Update: 2019-05-20 10:32 GMT

ಬಲ ಪಾದ ಮತ್ತು ಎಡ ಪಾದದ ಸಹಾಯದಿಂದ ವಿಮಾನವನ್ನು ಟೇಕಾಫ್ ಮಾಡುವುದು ಈ ವಿಶೇಷ ಪೈಲಟ್‍ ಗೆ ಸಹಜ ಪ್ರಕ್ರಿಯೆ. ಈ ದಿಟ್ಟ ಪೈಲಟ್ ಹೆಸರು ಜೆಸಿಕಾ ಕಾಕ್ಸ್.

"ಇತರ ಪೈಲಟ್‍ಗಳು ಕೈಯಿಂದ ಮಾಡುವ ಕೆಲಸವನ್ನು ನಾನು ಪಾದದಿಂದ ಮಾಡುತ್ತೇನೆ" ಎಂದು ಕಾಕ್ಸ್ ಸಹಜವಾಗಿ ಹೇಳುತ್ತಾರೆ.

ಅರಿಝೋನಾ ಸಂಜಾತೆಯಾಗಿರುವ ಜೆಸಿಕಾಗೆ ಹುಟ್ಟುವಾಗಲೇ ಕೈಗಳು ಇರಲಿಲ್ಲ. "ನನ್ನ ತಾಯಿ ಸಹಜ ಗರ್ಭಧಾರಣೆ ಮಾಡಿದರು. ನಾನು ಹುಟ್ಟಿದಾಗ ಸಹಜವಾಗಿಯೇ ಪೋಷಕರಿಗೆ ದಿಗ್ಭ್ರಮೆಯಾಯಿತು. ನಿಮ್ಮ ಮಗುವಿಗೆ ಕೈಗಳಿಲ್ಲ ಎಂದು ಹೇಳಿ ನನ್ನನ್ನು ತಾಯಿಯ ಕೈಗಿತ್ತಾಗ ತಾಯಿಗೆ ದಿಕ್ಕೇ ತೋಚದಾಯಿತು" ಎಂದು ಜೆಸಿಕಾ ಬಣ್ಣಿಸುತ್ತಾರೆ.

ಆದರೆ ಬೆಳೆಯುವ ಹಂತದಲ್ಲಿ ಜೆಸಿಕಾಗೆ ಇದು ಕೊರತೆ ಎನಿಸಲೇ ಇಲ್ಲ. ಈ ಅಸಾಧಾರಣ ಧೈರ್ಯ ಹಾಗೂ ಬಲಕ್ಕೆ ಕುಟುಂಬದ ಬೆಂಬಲವೇ ಕಾರಣ ಎಂದು ಅವರು ವಿವರಿಸುತ್ತಾರೆ. ಒಮ್ಮೆ ವಿಮಾನದಲ್ಲಿ ಯಾನ ಕೈಗೊಳ್ಳುವುದು ಜೆಸಿಕಾ ಭೀತಿ ಹುಟ್ಟಿಸಿತು. "ಪ್ರತಿ ಬಾರಿ ವಾಣಿಜ್ಯ ವಿಮಾನಗಳಲ್ಲಿ ನಾನು ಹೋಗುವಾಗ ಕೂಡಾ ನನ್ನ ಕಾಳಜಿ ವಹಿಸಿ ಎಂದು ದೇವರಿಗೆ ಮೊರೆ ಇಡುತ್ತಿದ್ದೆ".

ಆದರೆ ಒಂದು ಸಣ್ಣ ವಿಮಾನ ನನ್ನ ಭವಿಷ್ಯವನ್ನೇ ಬದಲಾಯಿಸಿತು. "ಪೈಲಟ್ ನನ್ನನ್ನು ವಿಮಾನದ ಮುಂದೆ ಕರೆದೊಯ್ದರು. ವಿಮಾನಕ್ಕೆ ಅವಳಿ ನಿಯಂತ್ರಣ ವ್ಯವಸ್ಥೆ ಇತ್ತು. ಆತ ತನ್ನ ಕೈನಿಂದ ನಿಯಂತ್ರಣ ಮಾಡುತ್ತಾ, ನನಗೆ ವಿಮಾನ ಹಾರಿಸಲು ಅವಕಾಶ ಮಾಡಿಕೊಟ್ಟರು. ಇದು ಒಂದು ರೀತಿಯಲ್ಲಿ ಭಯಕ್ಕೆ ಕಾರಣವಾದರೂ, ನಾವದನ್ನು ಎದುರಿಸುವುದು ಮುಖ್ಯ" ಎಂದು ಜೆಸಿಕಾ ಹೇಳುತ್ತಾರೆ.

2005ರಲ್ಲಿ ಅರಿಝೋನಾ ವಿವಿಯಿಂದ ಪದವಿ ಪಡೆದ ಬಳಿಕ ಪೈಲಟ್ ತರಬೇತಿ ಪಡೆದರು. ಆದರೆ ಅದು ಸುಲಭವಾಗಿರಲಿಲ್ಲ. ಹಲವು ಸಂಕಷ್ಟಗಳನ್ನು ಎದುರಿಸಿದರೂ, 2008ರಲ್ಲಿ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಷನ್‍ ನಿಂದ ಪ್ರಮಾಣಪತ್ರ ಪಡೆದರು.

ಸಾಧಿಸುವ ಛಲ ಇದ್ದ ಜೆಸಿಕಾಗೆ ಕೈಗಳಿಲ್ಲ ಎನ್ನುವುದು ಎಂದೂ ಸಾಧನೆಗೆ ಅಡ್ಡ ಬರಲಿಲ್ಲ. ವಿಮಾನ ಚಲಾಯಿಸುವುದು ಕಲಿಯುವ ಜತೆ ಜತೆಗೆ ಸ್ಕೂಬಾ ಡೈವಿಂಗ್ ಮತ್ತು ಟೇಕ್ವಾಂಡೊದಲ್ಲಿ ಮೂರನೇ ದರ್ಜೆಯ ಬ್ಲ್ಯಾಕ್ ಬೆಲ್ಟ್ ಕೂಡಾ ಪಡೆದಿದ್ದಾರೆ. 20ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ಕೈಗೊಂಡು ಪ್ರೇರಣಾತ್ಮಕ ಉಪನ್ಯಾಸ ನೀಡಿದ್ದಾರೆ.

ಕೃಪೆ: cnn.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News