ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ: ಮಂಜುನಾಥ್ ಪ್ರಸಾದ್

Update: 2019-05-20 14:26 GMT

ಬೆಂಗಳೂರು, ಮೇ 20: ನಗರದ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು 1491 ಸಿಬ್ಬಂದಿ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಸೋಮವಾರ ಮಲ್ಲೇಶ್ವರಂನ ಪಾಲಿಕೆ ಕಚೇರಿಯಲ್ಲಿ 2019ರ ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಂಬಂಧಿಸಿದ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ಪೋಲಿಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮತ ಎಣಿಕೆ ಸಿಬ್ಬಂದಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದ್ದು, ಮೇ 22ರಂದು 2ನೇ ಹಂತದ ತರಬೇತಿ ನೀಡಲಾಗುವುದು. ಮತ ಎಣಿಕೆಗೆ ಅನುಕೂಲವಾಗುವಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಎಣಿಕೆ ಕೊಠಡಿಯಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ, ಮೈಕ್ರೋ ಅಬ್ಸರ್‌ವರ್ ಮತ ಎಣಿಕೆ ಮಾಡಲಿದ್ದಾರೆ ಎಂದು ಹೇಳಿದರು.

300ಕ್ಕೂ ಅಧಿಕ ಮತಗಟ್ಟೆಗಳಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೆ.ಆರ್.ಪುರ, ಬ್ಯಾಟರಾಯನಪುರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 26, ಯಶವಂತಪುರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 24 ಮಹದೇವಪುರಕ್ಕೆ 28, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 21 ಟೇಬಲ್‌ಗಳನ್ನು ಹಾಕಲಾಗಿದೆ. ಮೇ 23ರಂದು ಬೆಳಗ್ಗೆ 6ಗಂಟೆಗೆ ಮತ ಎಣಿಕೆ ಸಿಬ್ಬಂದಿ ನೋಂದಣಿ ಮಾಡಿಕೊಳ್ಳಲಾಗುವುದು. ಏಕಕಾಲಕ್ಕೆ ಸ್ಟ್ರಾಂಗ್ ರೂಮ್‌ಗಳನ್ನು ತೆರೆಯಲಾಗುವುದು. ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, 8.30ರವರಗೆ ಪೋಸ್ಟಲ್ ಬ್ಯಾಲೇಟ್ ಮತ್ತು ಇಟಿಪಿಬಿಎಸ್ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಅಲ್ಲದೆ, ರಿಟರ್ನಿಂಗ್ ಅಧಿಕಾರಿಗಳು ಪಕ್ಷದ ಏಜೆಂಟರಿಗೆ ಮತ ಎಣಿಕೆ ಪ್ರವೇಶ ಪತ್ರ ನೀಡಲಿದ್ದಾರೆ. ಮತ ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಲಾಟರಿ ಮೂಲಕ 5 ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನು ಆರಿಸಿ ವಿವಿ ಪ್ಯಾಟ್‌ಗಳ ಸ್ಲಿಪ್‌ಗಳ ಎಣಿಕೆ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಲೋಕಸಭಾ ಚುನಾವಣಾ ಲಿತಾಂಶ ಹಿನ್ನೆಲೆ ಮೇ 23ರಂದು ಬೆಳಗ್ಗೆ 6 ಗಂಟೆಯಿಂದ ಮೇ 24ರಂದು ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮೇ 23ರಂದು ಬೆಳಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12ರವರೆಗೆ 144 ಸೆಕ್ಷನ್ ಜಾರಿಯಾಗಲಿದೆ.

-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ

ಮತ ಚಲಾವಣೆ ಎಷ್ಟು?

* ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 15,56,997

* ಬೆಂಗಳೂರು ಕೇಂದ್ರ 11,96,697

* ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 11,84,745

ಮತ ಎಣಿಕೆ ಕೇಂದ್ರದ ನೇತೃತ್ವ

* ಸೇಂಟ್ ಜೋಸ್ ಇಂಡಿಯನ್ ಹೈಸ್ಕೂಲ್- ಡಿಸಿಪಿ ದೇವರಾಜ್

* ಮೌಂಟ್ ಕಾರ್ಮೆಲ್ ಮಹಿಳಾ ಪಿಯು ಕಾಲೇಜು- ಡಿಸಿಪಿ ರಾಹುಲ್

* ಎಸ್‌ಎಸ್‌ಎಂಆರ್‌ವಿ ಕಾಲೇಜ್- ಡಿಸಿಪಿ ಅಣ್ಣಾಮಲೈ

ಭದ್ರತೆ ಅಂಕಿ- ಅಂಶ

* 7 ಡಿಸಿಪಿ

* 24 ಎಸಿಪಿ

* 76 ಇನ್‌ಸ್ಪೆಕ್ಟರ್

* 180 ಸಬ್ ಇನ್‌ಸ್ಪೆಕ್ಟರ್

* 2 ಪ್ಯಾರಾ ಮಿಲಿಟರಿ ಫೋರ್ಸ್

* 23 ಕೆಎಸ್‌ಆರ್‌ಪಿ ತುಕಡಿ 

ಮುಖ್ಯಾಂಶಗಳು

* ಮೇ 23 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ.

* ಮತ ಎಣಿಕೆ ಕೇಂದ್ರಗಳ ಬಂದೋಬಸ್ತ್‌ಗೆ 2,300 ಸಿಬ್ಬಂದಿ ನೇಮಕ.

* ಮೇ 23 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರ ವರೆಗೆ 144 ಸೆಕ್ಷನ್ ಜಾರಿ.

* ಮೇ 23 ರಂದು ಬೆಳಗ್ಗೆ 6 ಗಂಟೆಯಿಂದ ಮೇ 24 ರಂದು ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ನಿಷೇಧ.

* ಎಣಿಕೆ ಕೇಂದ್ರದ 100 ಮೀಟರ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News