ರಾಜ್ಯದಲ್ಲಿ ವಸತಿ ರಹಿತ ಅಲ್ಪಸಂಖ್ಯಾತರ ಸಮೀಕ್ಷೆ: ಸಚಿವ ಝಮೀರ್ ಅಹ್ಮದ್ ಖಾನ್

Update: 2019-05-20 14:45 GMT

ಬೆಂಗಳೂರು, ಮೇ 20: ರಾಜ್ಯದಲ್ಲಿ ವಸತಿ ರಹಿತ ಅಲ್ಪಸಂಖ್ಯಾತರ ಎಷ್ಟು ಕುಟುಂಬಗಳಿಗೆ ಎಂಬುದರ ಕುರಿತು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಏಜೆನ್ಸಿ ನಿಗದಿಗೊಳಿಸಿ ಶೀಘ್ರವೇ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಸೋಮವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿ ನಡೆದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕ್ಷೇಂದ್ರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಳಚೆ ಪ್ರದೇಶಗಳಿದ್ದು, ಮೊದಲು ಈ ಭಾಗದಲ್ಲಿ ಸಮೀಕ್ಷೆ ನಡೆಸಿ, ಆನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

ವಕ್ಫ್ ಬೋರ್ಡ್‌ಗೆ ಸೇರಿದ ಜಮೀನಿನಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆಯನ್ನು ಸಿದ್ಧಪಡಿಸಿ, ಸರಕಾರದ ಮುಂದಿಟ್ಟಿದ್ದೇನೆ. ಇದಕ್ಕಾಗಿ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಮೂರು ಸಾವಿರ ಕೋಟಿ ರೂ.ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಆದರೆ, ರೈತರ ಸಾಲ ಮನ್ನಾ ಹಿನ್ನೆಲೆಯಲ್ಲಿ ಒಂದು ಸಾವಿರ ಕೋಟಿ ರೂ.ನೀಡುವುದಾಗಿ ಭರವಸೆ ನೀಡಿದ್ದರು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಆದರೆ, ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿರಲಿಲ್ಲ. ಮೇ 23ರ ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಅನುದಾನ ಬಿಡುಗಡೆ ಸಂಬಂಧ ಚರ್ಚೆ ನಡೆಸುತ್ತೇನೆ. ವಸತಿ ರಹಿತರ ನಿಖರ ಮಾಹಿತಿ ಲಭ್ಯವಾದ ನಂತರ, ಎಷ್ಟು ಪ್ರಮಾಣದಲ್ಲಿ ಮನೆಗಳನ್ನು ನಿರ್ಮಿಸಬೇಕೆಂಬುದರ ಕುರಿತು ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಮುಸ್ಲಿಮ್ ಸಮುದಾಯದಲ್ಲಿ ಬಡತನ ಸೇರಿದಂತೆ ವಿವಿಧ ಕಾರಣಗಳಿಂದ ಹಲವಾರು ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಆದುದರಿಂದ, 6-16ನೇ ವಯಸ್ಸಿನ ಎಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬುದರ ಕುರಿತು ಸಮೀಕ್ಷೆ ನಡೆಸಿ, ನಮ್ಮ ಇಲಾಖೆ ಮೂಲಕ ಇಂತಹ ಮಕ್ಕಳಿಗೆ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಸ್ಲಂ ಬೋರ್ಡ್‌ನಿಂದ ಮನೆ ಮಂಜೂರಾಗಿರುವ ಫಲಾನುಭವಿಗಳು 50 ಸಾವಿರ ರೂ.ಮುಂಗಡ ಹಣ ಪಾವತಿಸಬೇಕು. ಇದಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ತಲಾ 50 ಸಾವಿರ ರೂ.ಗಳನ್ನು ಹಂಚಿಕೆ ಮಾಡಲು ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಗೆ 10 ಕೋಟಿ ರೂ.ಒದಗಿಸಲಾಗಿತ್ತು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು. ಆದರೆ, ತಾಂತ್ರಿಕ ಕಾರಣಗಳಿಂದ ಆ ಮೊತ್ತ ಮುಂಗಡ ಹಣದ ಬದಲು, ಮನೆ ನಿರ್ಮಾಣಕ್ಕೆ ತಗಲುವ ವೆಚ್ಚ 5.50 ಲಕ್ಷ ರೂ.ಗಳಲ್ಲಿ 50 ಸಾವಿರ ರೂ.ಕಡಿತವಾಗುವಂತೆ ಆಗಿದೆ. ಈ ಆದೇಶವನ್ನು ಹಿಂಪಡೆದು 50 ಸಾವಿರ ರೂ.ಗಳನ್ನು ಕೆಎಂಡಿಸಿ ಮೂಲಕ ನೇರವಾಗಿ ಫಲಾನುಭವಿಯ ಖಾತೆಗೆ ಜಮೆ ಮಾಡಲು ನಿರ್ಧರಿಸಿದ್ದು, ಇದರಲ್ಲಿ 25 ಸಾವಿರ ರೂ.ಸಬ್ಸಿಡಿ ಇರುತ್ತದೆ ಎಂದು ಅವರು ಹೇಳಿದರು.

ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಲಾಗಿರುವ ಡಿ.ಜೆ.ಹಳ್ಳಿ ಹಾಗೂ ರಾಮನಗರದ ಯುವಕರ ಬಗ್ಗೆ ಪೊಲೀಸರಿಂದ ಮಾಹಿತಿ ಕೋರಿದ್ದು, ಅವರು ನಮ್ಮಿಂದ ಯಾವುದೇ ತಪ್ಪಾಗಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ನೀಡಿರುವ ವರದಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಇದೇ ವೇಳೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಮಾಹಿತಿ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್, ಸದಸ್ಯರಾದ ಬಲ್ಜೀತ್ ಸಿಂಗ್, ಮಹೇಂದ್ರ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುನಾವಣೋತ್ತರ ಸಮೀಕ್ಷೆ ನಂಬಲ್ಲ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ನಾನು ನಂಬುವುದಿಲ್ಲ. ಈ ಸಮೀಕ್ಷೆಗಳನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳು ಕನಿಷ್ಠ 15-16 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಮೇ 23ರಂದು ಎಲ್ಲ ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ಕಾದು ನೋಡೋಣ.

-ಝಮೀರ್ ಅಹ್ಮದ್ ಖಾನ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News