ಚುನಾವಣೋತ್ತರ ಸಮೀಕ್ಷೆಗಳು ವಾಸ್ತವ ಸ್ಥಿತಿಗೆ ದೂರ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Update: 2019-05-20 14:46 GMT

ಬೆಂಗಳೂರು, ಮೇ 20: ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಗಳು ವಾಸ್ತವ ಸ್ಥಿತಿಗೆ ದೂರವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಐದು ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಪರ ಆಡಳಿತ ನಡೆಸಲಿಲ್ಲ. ಅವರು ಪ್ರಚಾರದಲ್ಲೇ ಆಡಳಿತ ಮಾಡಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ದರೂ ಅವರಿಗೆ ಇಷ್ಟೊಂದು ಅಂಕಿ-ಸಂಖ್ಯೆ ತೋರಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು. ಇತ್ತೀಚಿಗೆ ಆಸ್ಟ್ರೇಲಿಯದಲ್ಲೂ ಯಾವುದೇ ಚುನಾವಣೋತ್ತರ ಸಮೀಕ್ಷೆಗಳು ನಿಜ ಹೇಳಲಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ತಪ್ಪುಅಥವಾ ಸುಳ್ಳು ಅಂತ ಹೇಳಲ್ಲ. ಕರ್ನಾಟಕದಲ್ಲಿ ಈ ಸಮೀಕ್ಷೆಗಳು ತೋರಿಸಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಪಡೆಯುತ್ತೇವೆ. ಈ ಸಮೀಕ್ಷೆಗಳನ್ನು ನಾನು ನಂಬುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೇ 23ರ ಫಲಿತಾಂಶದ ವರೆಗೆ ಕಾದು ನೋಡೋಣ. ಅಂದು ನಿಜವಾದ ಸಮೀಕ್ಷೆ ಬರುತ್ತದೆ. ನಮಗೆ ರಾಜ್ಯ, ದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ದಿನೇಶ್ ಗುಂಡೂರಾವ್ ನುಡಿದರು.

ಮೂಡ್ ಸೆಟ್: ‘ಎಕ್ಸಿಟ್ ಪೋಲ್ ನಾಟ್ ಎ ಎಕ್ಸಾಟ್ ಪೋಲ್’. ಮೂಡ್ ಸೆಟ್ ಮಾಡಿ, ಇವಿಎಂಗಳನ್ನು ತಿರುಚುವ ಹುನ್ನಾರ ಇದಾಗಿದೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೂ ಇದನ್ನೇ ಪದೇ ಪದೇ ಹೇಳುತ್ತಲೇ ಇದ್ದಾರೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಸುದ್ದಿ ವಾಹಿನಿಗಳಲ್ಲಿ ಮೋದಿ ಹಾಗೂ ಬಿಜೆಪಿ ಪರವಾದ ಅಲೆ ಇದೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಮೇ 23ರ ಬಳಿಕ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ ಎಂದು ಹರಿಪ್ರಸಾದ್ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.

ಡಿಕೆಶಿ ವಿದೇಶ ಪ್ರವಾಸ: ಕುಟುಂಬ ಸದಸ್ಯರ ಜೊತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಒಂದು ವಾರ ಕಾಲ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News