ಶಾರದಾ ಚಿಟ್ ಫಂಡ್ ಹಗರಣ: ಸುಪ್ರೀಂ ಕೋರ್ಟ್‌ನಲ್ಲಿ ರಕ್ಷಣಾ ಕಾಲಾವಧಿ ವಿಸ್ತರಿಸುವಂತೆ ಕೋರಿದ ರಾಜೀವ್ ಕುಮಾರ್

Update: 2019-05-20 14:55 GMT

ಹೊಸದಿಲ್ಲಿ, ಮೇ 20: ಬಂಧನದಿಂದ ರಕ್ಷಣೆ ತೆರವುಗೊಳಿಸಿದ ಬಳಿಕ ಸಂಬಂಧಿತ ನ್ಯಾಯಾಲಯ ಸಂಪರ್ಕಿಸಲು ಸುಪ್ರೀಂ ಕೋರ್ಟ್ ನೀಡಿದ 7 ದಿನಗಳ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಕೋಲ್ಕೊತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸೋಮವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಪಶ್ಚಿಮಬಂಗಾಳದಲ್ಲಿ ವಕೀಲರ ಮುಷ್ಕರ ನಡೆಯುತ್ತಿರುವುದು ಕಾಲಾವಧಿ ವಿಸ್ತರಣೆ ಕೋರಲು ಕಾರಣ ಎಂದು ಕುಮಾರ್ ಹೇಳಿದರು. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ರಾಜೀವ್ ಕುಮಾರ್ ಅವರ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಕಳೆದ ವಾರ ತೆರವುಗೊಳಿಸಿತ್ತು. ಆದರೆ, ಕಾನೂನು ಪರಿಹಾರ ಕೋರಲು ಸಂಬಂಧಿಸಿದ ನ್ಯಾಯಾಲಯ ಸಂಪರ್ಕಿಸಲು 7 ದಿನಗಳ ಕಾಲಾವಕಾಶ ನೀಡಿತ್ತು. ಈ ಆದೇಶವನ್ನು ಕಸ್ಟಡಿ ವಿಚಾರಣೆಗೆ ಸಿಬಿಐಗೆ ನೀಡಿದ ನಿರ್ದೇಶ ಎಂದು ಪರಿಗಣಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠ ಹೇಳಿತ್ತು.

ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಅದು ಸಿಬಿಐಗೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News