ಗಂಗಾ ನದಿಯ ಒಂದು ಬಿಂದು ನೀರು ಮಾಲಿನ್ಯ ಕೂಡ ಕಳವಳಕಾರಿ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ

Update: 2019-05-20 14:58 GMT

ಹೊಸದಿಲ್ಲಿ, ಮೇ 20: ಗಂಗಾ ನದಿಯ ಒಂದು ಬಿಂದು ನೀರು ಮಾಲಿನ್ಯ ಕೂಡ ಕಳವಳದ ವಿಚಾರ. ಗಂಗಾ ನದಿ ರಕ್ಷಿಸಲು ಎಲ್ಲ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೇಳಿದೆ.

ಉತ್ತರಪ್ರದೇಶ, ಬಿಹಾರ್, ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳದ ಕ್ರಿಯಾ ಯೋಜನೆ ಕುರಿತು ಗಂಗಾ ನದಿ ನೈರ್ಮಲ್ಯ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಎಂಸಿಜಿ)ವನ್ನು ಹಸಿರು ನ್ಯಾಯಾಧಿಕರಣದ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿತು. ಕ್ಲಪ್ತ ಸಮಯ ಮಿತಿಯಲ್ಲಿ ವಾಸ್ತವಿಕ ಯೋಜನೆಯನ್ನು ಅದು ಸಲ್ಲಿಸಿಲ್ಲ ಎಂದು ಪೀಠ ಹೇಳಿತು. ಕಾನ್ಪುರದಿಂದ ಗಂಗಾ ಸಾಗರ್‌ನ ನಡುವೆ ಯೋಜಿಸಲಾದ ಹಾಗೂ ಕಾರ್ಯಗತಗೊಳಿಸಲಾದ ಯೋಜನೆಯ ಸ್ಥಿತಿಗತಿ ಬಗ್ಗೆ ಎನ್‌ಎಂಸಿಜಿ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಆದುದರಿಂದ ಎನ್‌ಎಂಸಿಜಿ ಸಲ್ಲಿಸಿದ ಅಫಿದಾವಿತ್‌ನಿಂದ ಯಾವುದೇ ನೆರವು ಸಿಗಲಾರದು. ಎನ್‌ಎಂಸಿಜಿ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ವಕೀಲರು ಯಾವುದೇ ರೀತಿಯಲ್ಲಿ ಸಿದ್ಧರಾಗುತ್ತಿಲ್ಲ. ಎನ್‌ಎಂಸಿಜಿ ನ್ಯಾಯಾಧಿಕರಣಕ್ಕೆ ನರೆವು ನೀಡಲು ಸಮರ್ಥರಲ್ಲದ ಎನ್‌ಎಂಸಿಜಿಯ ನಿರ್ದೇಶಕ (ತಾಂತ್ರಿಕ) ಪ್ರವೀಣ ಕುಮಾರ್ ಅವರನ್ನು ಮಾತ್ರ ಅವಲಂಬಿಸಿದೆ ಎಂದು ಪೀಠ ಹೇಳಿದೆ.

ಮಾತುಕತೆ ಸಂದರ್ಭ, ಈ ನ್ಯಾಯಾಧಿಕರಣದ ಕಾನೂನು ಹಾಗೂ ಆದೇಶದಲ್ಲಿ ಕಡ್ಡಾಯವಾಗಿರುವಂತೆ ಮಾಲಿನ್ಯಕ್ಕೆ ಪರಿಹಾರ ನೀಡುವ ಬದಲು ಮಾಲಿನ್ಯ ಮಾಡುವವರಿಗೆ ನೆರವು ನೀಡುವ ಅವರ ವರ್ತನೆಯನ್ನು ನಾವು ಗಮನಿಸಿದೆವು ಎಂದು ನ್ಯಾಯಮೂರ್ತಿ ಎಸ್.ಪಿ. ವಂಗಾದಿ ಹಾಗೂ ಕೆ. ರಾಮಕೃಷ್ಣ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ. ಪರಿಹಾರ ಕ್ರಮಗಳನ್ನು ಕೈಗೊಳ್ಳಿ. ನಿಖರ ಮಾಹಿತಿ ಹೊಂದಿರುವ ಸೂಕ್ತ ವ್ಯಕ್ತಿಯನ್ನು ನೆರವನ್ನು ನ್ಯಾಯಾಧಿಕರಣಕ್ಕೆ ಒದಗಿಸಿ. ಇಲ್ಲದಿದ್ದರೆ ಇದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನ್ಯಾಯಾಧಿಕರಣ ಎಚ್ಚರಿಸಿತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ನ್ಯಾಯಾಧಿಕರಣ ಸಂಬಂಧಿತ ರಾಜ್ಯಗಳಿಗೆ ಸೂಚಿಸಿತು ಹಾಗೂ ಹಿರಿಯ ಅಧಿಕಾರಿಗಳು ಅಥವಾ ವಕೀಲರ ಮುಖಾಂತರ ನಿಖರ ಮಾಹಿತಿ ನೀಡುವುದರೊಂದಿಗೆ ಪೀಠಕ್ಕೆ ನೆರವು ನೀಡುವಂತೆ ನಿರ್ದೇಶಿಸಿತು. ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳದ ಪರವಾಗಿ ಯಾರೊಬ್ಬ ವಕೀಲರು ಹಾಜರಾಗಿಲ್ಲ. ನೀರಿನ ಗುಣಮಟ್ಟ ಕಾಪಾಡಿಕೊಳ್ಳುವುದು ಎಲ್ಲ ಐದು ರಾಜ್ಯಗಳ ಕರ್ತವ್ಯ. ಇದರ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಧಿಕರಣ ಎಚ್ಚರಿಸಿತು. ವೆಬ್‌ಸೈಟ್‌ಗಳಲ್ಲಿ ನೀರಿನ ಗುಣಮಟ್ಟ ಸ್ಥಿತಿಗತಿ ಅಪ್‌ಲೋಡ್ ಮಾಡಲು ಉತ್ತರಾಖಂಡ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳ ರಾಜ್ಯಗಳಿಗೆ ನಾವು ನಿರ್ದೇಶಿಸುತ್ತೇವೆ. ವಿವಿಧ ಪ್ರದೇಶಗಳಲ್ಲಿ ಕುಡಿಯುವ ಹಾಗೂ ಸ್ನಾನ ಮಾಡುವ ಉದ್ದೇಶದ ನೀರಿನ ಯುಕ್ತತೆಯನ್ನು ತಿಂಗಳಿಗೊಮ್ಮೆ ಪರಿಷ್ಕರಿಸಬೇಕು ಎಂದು ಎಚ್ಚರಿಕೆ ನೀಡುತ್ತೇವೆ ಎಂದು ಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News