ಸರಗಳ್ಳತನ ಪ್ರಕರಣ: ಇಬ್ಬರು ಯುವಕರಿಗೆ ಗುಂಡೇಟು

Update: 2019-05-20 15:13 GMT

ಬೆಂಗಳೂರು, ಮೇ 20: ಸರಗಳ್ಳತನ ಆರೋಪ ಪ್ರಕರಣ ಸಂಬಂಧ ಇಬ್ಬರು ಯುವಕರ ಮೇಲೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ, ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸದಿಲ್ಲಿ ಮೂಲದ ಸುರೇಂದ್ರ ಸಿಂಗ್(26) ಮತ್ತು ಕರಣ್ ಗುಪ್ತ(24) ಎಂಬುವರು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ನಗರದ ಬಾಗಲಗುಂಟೆ, ಪೀಣ್ಯ, ಸೋಲದೇವನಹಳ್ಳಿ, ಮಾದನಾಯಕನಹಳ್ಳಿ ಠಾಣಾ ಸರಹದ್ದುಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ಅವರು, ಬಾಗಲಗುಂಟೆ ಠಾಣೆ ಇನ್‌ಸ್ಪೆಕ್ಟರ್ ಶಿವಸ್ವಾಮಿ ಹಾಗೂ ನಂದಿನಿಲೇಔಟ್ ಠಾಣೆ ಇನ್‌ಸ್ಪೆಕ್ಟರ್ ಲೋಹಿತ್ ಅವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದರು.

ಈ ತಂಡಗಳು ಕಳೆದ 15 ದಿನಗಳಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾಗ ಸೋಮವಾರ ಮುಂಜಾನೆ ಬಾಗಲಗುಂಟೆ ವ್ಯಾಪ್ತಿಯ ರಾಮಯ್ಯ ಲೇಔಟ್ ಬಳಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಸರ ಕಳವು ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಆ ಮಹಿಳೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಮಾಹಿತಿ ಆಧರಿಸಿ ಕೂಡಲೇ ಕಾರ್ಯಪ್ರವೃತ್ತವಾದ ಎರಡು ವಿಶೇಷ ತಂಡಗಳು, ಸೋಲದೇವನಹಳ್ಳಿಯ ಸಾಸಿವೆಘಟ್ಟ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಆರೋಪಿಗಳನ್ನು ಹಿಡಿಯಲು ಸಿನಿಮೀಯ ರೀತಿ ಬೆನ್ನಟ್ಟಿದ್ದಾರೆ. ಈ ವೇಳೆ ಎಸ್ಸೈ ರಾಜಾಸಾಬಾ ಮತ್ತು ಪೇದೆ ಗಣೇಶ್ ವಶಕ್ಕೆ ಪಡೆಯಲು ಮುಂದಾಗಿದ್ದ ವೇಳೆ ಆರೋಪಿ ಕರಣ್‌ಗುಪ್ತ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ.

ಈ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಲೋಹಿತ್ ಅವರು ಆತ್ಮರಕ್ಷಣೆಗಾಗಿ ಎರಡು ಸುತ್ತು ಕರಣ್‌ಗುಪ್ತ ಕಾಲಿಗೆ ಗುಂಡು ಹಾರಿಸಿದಾಗ ಸಿಕ್ಕಿಬಿದ್ದಿದ್ದಾನೆ. ಇದೇ ವೇಳೆ ಮತ್ತೊಬ್ಬ ಆರೋಪಿ ಸುರೇಂದ್ರಸಿಂಗ್ ಮಾರಕಾಸ್ತ್ರಗಳಿಂದ ಎಸ್ಸೈ ಶಿವಸ್ವಾಮಿ ಮೇಲೆ ಎಗರಿ ಹೋದಾಗ, ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡುಹಾರಿಸಿ ಎಚ್ಚರಿಸಿದ್ದಾರೆ. ಆದರೂ, ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಅವರು ಎರಡು ಸುತ್ತು ಗುಂಡಿನ ದಾಳಿ ನಡೆಸಿದಾಗ ಆರೋಪಿ ಸುರೇಂದ್ರ ಸಿಂಗ್ ಕಾಲುಗಳಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಪೊಲೀಸರು ಇವರಿಬ್ಬರನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರುಗಳನ್ನು ಸಹ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಇಬ್ಬರ ವಿರುದ್ಧ 20ಕ್ಕೂ ಹೆಚ್ಚು ಕಳವು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News