ಕಾಂಗ್ರೆಸ್ ನಿಂದ ನ್ಯಾಯ ಸಿಕ್ಕಿಲ್ಲ, ಅಗತ್ಯ ಬಿದ್ದರೆ ಮುಸ್ಲಿಮರು ಬಿಜೆಪಿ ಜೊತೆ ಕೈಜೋಡಿಸಬೇಕು: ರೋಷನ್ ಬೇಗ್

Update: 2019-05-21 12:19 GMT

ಬೆಂಗಳೂರು, ಮೇ 21: ರಾಜ್ಯದ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಆರ್.ರೋಷನ್‌ಬೇಗ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಹಂಕಾರಿ, ದಿನೇಶ್ ಗುಂಡೂರಾವ್ ಒಬ್ಬ ಫ್ಲಾಪ್ ಅಧ್ಯಕ್ಷ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಒಬ್ಬ ಬಫೂನ್, ಜೋಕರ್. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆಗೆ ಈ ಮೂವರು ನೇರ ಕಾರಣ. ಇವರಿಂದ ಕಾಂಗ್ರೆಸ್ ಉದ್ಧಾರವಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆಯ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿ ನನಗೆ ಆಶ್ಚರ್ಯವಾಗಿಲ್ಲ. ಇವರ ವಿಫಲ ಚುನಾವಣಾ ಪ್ರಚಾರದ ಪರಿಣಾಮ ಪಕ್ಷ ನಷ್ಟ ಅನುಭವಿಸುತ್ತಿದೆ. ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಪರಿಸ್ಥಿತಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಬೇಕು ಎಂದು ಕಳಕಳಿಯಾಗಿ ಮನವಿ ಮಾಡಿಕೊಳ್ಳುತ್ತೇನೆ. ಒಂದೇ ಪಕ್ಷಕ್ಕೆ ನಿಷ್ಠರಾಗಿರುವುದು ಬೇಡ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವಾಗಲೇ ನಾನು ಅಸಮಾಧಾನ ವ್ಯಕ್ತಪಡಿಸಿದ್ದೇನೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮುಸ್ಲಿಮರಿಗೆ ಒಂದೇ ಒಂದು ಟಿಕೆಟ್ ನೀಡಿ, ಕ್ರೈಸ್ತರನ್ನು ಕಡೆಗಣಿಸಲಾಗಿದೆ. ಕಾಂಗ್ರೆಸ್ ನಿಂದ ನ್ಯಾಯ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಸಿದ್ದರಾಮಯ್ಯನವರ ದುರಹಂಕಾರದ ನಡೆಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 78 ಸ್ಥಾನಗಳಿಗೆ ಕುಸಿಯಿತು. ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿದ್ದರಿಂದ 25 ರಿಂದ 30 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿತು. ಜಾತಿ, ಧರ್ಮಗಳನ್ನು ಒಡೆಯಲು ಮುಂದಾದರೆ ಜನ ಒಪ್ಪುತ್ತಾರೆಯೇ ಎಂದು ರೋಷನ್ ಬೇಗ್ ಪ್ರಶ್ನಿಸಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಪ್ರಮುಖ ನಾಯಕರು ಆಕಾಶದಲ್ಲಿ ಹಾರಾಡುತ್ತಿದ್ದರು. ಈಗ ಕೆಳಗೆ ಇಳಿದು ವಾಸ್ತವ ಪರಿಸ್ಥಿತಿಯನ್ನು ನೋಡಲಿ ಎಂದು ರೋಷನ್ ಬೇಗ್ ಹೇಳಿದರು. ಬಿಜೆಪಿ ಜೊತೆ ಕೈ ಜೋಡಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಗತ್ಯವಿದ್ದರೆ ಕೈ ಜೋಡಿಸುತ್ತೇವೆ. ಸ್ವಾಭಿಮಾನ, ಗೌರವದೊಂದಿಗೆ ನಮ್ಮನ್ನು ಜೊತೆಯಲ್ಲಿ ಇಟ್ಟುಕೊಂಡರೆ ಇರುತ್ತೇವೆ. ಜೀತದಾಳುಗಳಂತೆ ನಡೆಸಿಕೊಂಡರೆ ಹೊರಗೆ ಹೋಗುತ್ತೇವೆ ಎಂದರು.

ಕುಮಾರಸ್ವಾಮಿಯ ಮನೆ ಬಾಗಿಲಿಗೆ ಹೋಗಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಈಗ ನಾನೇ ಮುಖ್ಯಮಂತ್ರಿ ಎಂದು ಹೋದ ಕಡೆಯಲ್ಲ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನನ್ನನ್ನು, ರಾಮಲಿಂಗಾರೆಡ್ಡಿಯನ್ನು ಸಂಪುಟದಿಂದ ಹೊರಗಿಟ್ಟರು. ಪಕ್ಷದಲ್ಲಿ ಉದ್ದೇಶ ಪೂರ್ವಕವಾಗಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಕಿಡಿಗಾರಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಬಾಯಿಗೆ ಬಂದಂತೆ ಸಿದ್ದರಾಮಯ್ಯ ಬಯ್ಯುತ್ತಿದ್ದರು. ಇವರಿಗೆ ಮಾನ ಮರ್ಯಾದೆ ಇದ್ದರೆ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರೋಷನ್ ಬೇಗ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News