ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರವೇ ಆಡಳಿತಕ್ಕೆ ಬರಲಿದೆ: ಡಿಸಿಎಂ ಡಾ.ಜಿ. ಪರಮೇಶ್ವರ್

Update: 2019-05-21 15:54 GMT

ಬೆಂಗಳೂರು, ಮೇ 21: ಪಕ್ಷ ತಾಯಿ ಇದ್ದಂತೆ. ತಾಯಿ ಪಕ್ಷಕ್ಕೆ ಯಾರೇ ಮುಜುಗರ ತರುವ ಕೆಲಸ ಮಾಡಿದರು ಅಥವಾ ಹೇಳಿಕೆ ನೀಡಿದರು ಅದನ್ನು ನಿಯಂತ್ರಿಸುವ ಕೆಲಸ ಆಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 28ನೆ ಪುಣ್ಯತಿಥಿಯಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಕ್ಷ ತಾಯಿ ಇದ್ದಂತೆ. ಆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು. ರಾಜೀವ್ ಗಾಂಧಿ ಅವರು ಸರ್ವಸ್ವವನ್ನು ತ್ಯಾಗ ಮಾಡಿ, ಕಾಂಗ್ರೆಸ್ ನನ್ನ ಜೀವನ ಎಂದು ಹೇಳಿಕೊಂಡಿದ್ದಾರೆ. ಆ ನಾಯಕನ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ಎಲ್ಲರು ಅರ್ಥ ಮಾಡಿಕೊಳ್ಳಬೇಕೆಂದು ಡಾ.ಜಿ.ಪರಮೇಶ್ವರ್ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ರಾಜೀವ್ ಗಾಂಧಿ ಅವರು ದೇಶದ ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕು ತಂದು ಕೊಟ್ಟರು. ಆದರೆ, ಯುವಕರಿಗೆ ಈ ಸತ್ಯ ಅರಿವಾಗಿಲ್ಲ. ಮೋದಿ ಪರ ಯುವಕರಿದ್ದಾರೆಂದು ಹೇಳುತ್ತಾರೆ. ಯುವಕರ ಕಣ್ಣಿಗೆ ಪೊರೆ ಆವರಿಸಿದೆ. ತಮಗೆ ಮತದಾನದ ಹಕ್ಕು ನೀಡಿದ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಎಂಬ ಸತ್ಯ ಅರಿಯುವಂತೆ ಮಾಡುವ ಕೆಲಸ ಕಾಂಗ್ರೆಸ್ ಕೈಯಲ್ಲಿದೆ ಎಂದರು.

ಲೋಕಸಭೆ ಚುನಾವಣಾ ಫಲಿತಾಂಶದ ಕುರಿತು ಬಂದಿರುವ ಚುನಾವಣೋತ್ತರ ಸಮೀಕ್ಷಾ ವರದಿಗಳು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಹೇಳಿ ಮಾಡಿಸಿದಂತಿದೆ. ಕೇಂದ್ರದಲ್ಲಿ ಈ ಬಾರಿ ಬಿಜೆಪಿಯೇತರ ಸರಕಾರವೆ ಆಡಳಿತಕ್ಕೆ ಬರಲಿದೆ ಎಂದು ಪರಮೇಶ್ವರ್ ಭವಿಷ್ಯ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News