ರೋಷನ್ ಬೇಗ್‌ ಗೆ ಕಾಂಗ್ರೆಸ್ ನೋಟಿಸ್, ಶಿಸ್ತು ಕ್ರಮದ ಎಚ್ಚರಿಕೆ

Update: 2019-05-22 14:55 GMT

ಬೆಂಗಳೂರು, ಮೇ 21: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಧ್ಯಮಗಳಲ್ಲಿ ಆರೋಪಗಳನ್ನು ಮಾಡಿರುವ ರೋಷನ್ ಬೇಗ್‌ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಬಫೂನ್, ಆರೋಗೆಂಟ್ ಹಾಗೂ ಫ್ಲಾಪ್ ಶೋ, ಇತ್ಯಾದಿ ಪದಗಳನ್ನು ಬಳಸಿ ಪಕ್ಷಕ್ಕೆ ಮುಜುಗರವಾಗುವಂತೆ ಹೇಳಿಕೆಗಳನ್ನು ನೀಡಿರುವುದು ಹಾಗೂ ಅಸಮಾಧಾನವನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿ, ಪಕ್ಷದ ತತ್ವ-ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಮ್ಮ ವಿರುದ್ಧ ಏಕೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬಾರದೆಂದು ಒಂದು ವಾರದೊಳಗೆ ತಮ್ಮ ಸಮಜಾಯಿಷಿಯನ್ನು ನೀಡಬೇಕು. ತಪ್ಪಿದಲ್ಲಿ, ತಮ್ಮ ಮೇಲೆ ಮುಂದಿನ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿದಾಗ ಎಲ್ಲವೂ ಸರಿಯಾಗಿತ್ತು. ಇವರಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿಲ್ಲ ಎಂದ ಮಾತ್ರಕ್ಕೆ ಕಾಂಗ್ರೆಸ್ ಸರಿಯಿಲ್ಲವೇ? ಚುನಾವಣೋತ್ತರ ಸಮೀಕ್ಷೆ ನೋಡಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ರೋಷನ್ ಬೇಗ್ ರಾಜಕೀಯವಾಗಿ ಬೇರೆ ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಬೇರೆ ಪಕ್ಷಕ್ಕೆ ಹೋಗುವುದಾದರೆ ಹೋಗಲಿ.

-ಝಮೀರ್‌ ಅಹ್ಮದ್‌ ಖಾನ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ

ಕೋಳಿನೇ ಹುಟ್ಟದೇ, ರೋಷನ್ ಬೇಗ್ ಕಬಾಬ್ ಮಾಡಲು ಹೊರಟಿದ್ದಾರೆ. ಚುನಾವಣೋತ್ತರ ಸಮೀಕ್ಷೆ ಬಗ್ಗೆಯೇ ಇಷ್ಟೊಂದು ಆತುರ ಪಡುತ್ತಿರುವುದು ಏಕೆ? ಮೇ 23ರಂದು ಪ್ರಕಟವಾಗುವ ಫಲಿತಾಂಶ ಎಲ್ಲದ್ದಕೂ ಉತ್ತರ ಕೊಡುತ್ತದೆ. ತಪ್ಪು ಮಾಡಿದವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News