ದಲಿತರು ಮತ್ತು ಆದಿವಾಸಿಗಳೊಂದಿಗೆ ಈದ್ ಸಂಭ್ರಮ ಆಚರಿಸಲಿರುವ ಮಹಾರಾಷ್ಟ್ರದ ಮುಸ್ಲಿಮರು

Update: 2019-05-21 13:11 GMT
ಕೃಪೆ: twocircles.net

ಮುಂಬೈ,ಮೇ 21: ಪ್ರವಾದಿ ಮುಹಮ್ಮದ್(ಸಅ) ಅವರ ಬೋಧನೆಗಳನ್ನು ಪ್ರಚಾರ ಮಾಡುವ ಪ್ರಯತ್ನವಾಗಿ ಮಹಾರಾಷ್ಟ್ರದ ಮುಸ್ಲಿಮರು ಸತತ ಎರಡನೇ ವರ್ಷ‘ಈದುಲ್ ಫಿತ್ರ್’ಅನ್ನು ದಲಿತ ಮತ್ತು ಆದಿವಾಸಿ ಸಮುದಾಯಗಳೊಂದಿಗೆ ಆಚರಿಸಲು ಯೋಜಿಸಿದ್ದಾರೆ. ‘ಪೈಗಂಬರ್ ಮುಹಮ್ಮದ್ ಸರ್ವಾಂಸಾಠಿ(ಪ್ರವಾದಿ ಮುಹಮ್ಮದ್‌ರು ಎಲ್ಲರಿಗಾಗಿ)’’ ಅಭಿಯಾನದಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ ವರ್ಷ ದುರ್ಬಲ ಸಮುದಾಯಗಳ ಸುಮಾರು 1,000 ಮಕ್ಕಳಿಗೆ ನಾವು ಬಟ್ಟೆಗಳನ್ನು ವಿತರಿಸಿದ್ದು,ಮುಸ್ಲಿಂ ಸಹೋದರರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈ ವರ್ಷ ನಾವು ಸುಮಾರು 10,000 ಮಕ್ಕಳಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ವಿತರಿಸಲು ಮತ್ತು ಮಹಾರಾಷ್ಟ್ರದ 20 ಜಿಲ್ಲೆಗಳಲ್ಲಿಯ ಇತರ ಸಮುದಾಯಗಳಿಗೆ ಸೇರಿದ ಒಂದು ಲಕ್ಷ ಸೋದರ-ಸೋದರಿಯರಿಗೆ ‘ಶಿರ್‌ಖುರ್ಮಾ’ ಒದಗಿಸಲು ನಿರ್ಧರಿಸಿದ್ದೇವೆ ಎಂದು ಕಾರ್ಯಕ್ರಮದ ಸಂಚಾಲಕ ಸುಭಾನ್ ಅಲಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ನಾವೀಗಾಗಲೇ 50 ಜೋಡಿ ಬಟ್ಟೆಗಳನ್ನು ಸಂಗ್ರಹಿಸಿದ್ದೇವೆ ಮತ್ತು ನಮ್ಮ ಪ್ರಯತ್ನವು ಭರದಿಂದ ಸಾಗಿದೆ. ದೇವರು ಬಯಸಿದರೆ ನಮ್ಮ ನಗರದಲ್ಲಿ ‘ಈದುಲ್ ಫಿತ್ರ್’ ದಿನದಂದು ನೂರಕ್ಕೂ ಅಧಿಕ ಬಡಮಕ್ಕಳಿಗೆ ನಾವು ಉಡುಗೊರೆಗಳನ್ನು ವಿತರಿಸುತ್ತೇವೆ ಮತ್ತು ‘ಶಿರ್‌ಖುರ್ಮಾ’ವನ್ನು ನೀಡುತ್ತೇವೆ ಎಂದು ಬುಲ್ಡಾನಾದ ಕಾರ್ಯಕರ್ತ ಮೊಹ್ಸಿನ್ ಶೇಖ್ ತಿಳಿಸಿದರು.

ರಾಜ್ಯದ ಎಲ್ಲ 20 ಜಿಲ್ಲೆಗಳಲ್ಲಿ ‘ಪೈಗಂಬರ್ ಮುಹಮ್ಮದ್ ಸರ್ವಾಂಸಾಠಿ’ ಅಭಿಯಾನದಡಿ ಈದ್ ಉಡುಗೊರೆಗಾಗಿ ಬಟ್ಟೆಗಳನ್ನು ಖರೀದಿಸಲು ಮತ್ತು ಶಿರ್‌ಖುರ್ಮಾ ತಯಾರಿಕೆಗಾಗಿ ಹಣವನ್ನು ಸಂಗ್ರಹಿಸಲು ವಿವಿಧ ಸಾಮಾಜಿಕ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ದಲಿತರು ಮತ್ತು ಆದಿವಾಸಿಗಳೊಂದಿಗೆ ಈದ್ ಆಚರಿಸುವ ವಿನೂತನ ಕಾರ್ಯಕ್ರಮವನ್ನು ಕಳೆದ ವರ್ಷದ ರಮಝಾನ್ ವೇಳೆ ಆರಂಭಿಸಲಾಗಿತ್ತು ಮತ್ತು ಅದನ್ನು ಈ ವರ್ಷವೂ ಮುಂದುವರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News