ಅಕ್ರಮ ಆಸ್ತಿ ಪ್ರಕರಣ: ಮುಲಾಯಂ, ಅಖಿಲೇಶ್‌ಗೆ ಸಿಬಿಐಯಿಂದ ಕ್ಲೀನ್ ಚಿಟ್

Update: 2019-05-21 14:31 GMT

ಹೊಸದಿಲ್ಲಿ, ಮೇ.21: ಅಕ್ರಮ ಆಸ್ತಿ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.

ತಂದೆ ಮತ್ತು ಮಗನ ವಿರುದ್ಧ ಪ್ರಕರಣ ದಾಖಲಿಸಲು ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ ಎಂದು ಸಿಬಿಐ ತಿಳಿಸಿದೆ. ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ನಾಯಕ ವಿರುದ್ಧ ಮಾಡಲಾಗಿದ್ದ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಕಳೆದ ಮಾರ್ಚ್‌ನಲ್ಲಿ ಸಿಬಿಐಗೆ ನೋಟಿಸ್ ಜಾರಿ ಮಾಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಒಳಗೆ ತನ್ನ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಸಿಬಿಐಗೆ ಸೂಚಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದ 2007ರಲ್ಲಿ ದಾಖಲಿಸಲಾದ ಸ್ಥಿತಿ ವರದಿ ಏನಾಗಿದೆ ಎಂಬ ಬಗ್ಗೆ ತಿಳಿಯಲು ಬಯಸುವುದಾಗಿ ಶ್ರೇಷ್ಠ ನ್ಯಾಯಾಲಯ ಆಗ್ರಹಿಸಿತ್ತು. 1999 ಮತ್ತು 2005ರ ಮಧ್ಯೆ ತಂದೆ-ಮಗ ಕ್ರೋಡೀಕರಿಸಿದ್ದ 100 ಕೋಟಿ ರೂ. ಅಕ್ರಮ ಸಂಪತ್ತಿಗೆ ಸಂಬಂಧಿಸಿ ಈ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ದಾವೆ ಹೂಡಿದ ನ್ಯಾಯವಾದಿ ವಿಶ್ವನಾಥ್ ಚತುರ್ವೇದಿ, ಮುಲಾಯಂ ಸಿಂಗ್ ಯಾದವ್, ಅವರ ಮಗ ಅಖಿಲೇಶ್ ಯಾದವ್, ಸೊಸೆ ಡಿಂಪಲ್ ಮತ್ತು ಇನ್ನೊರ್ವ ಮಗ ಪ್ರತೀಕ್ ವಿರುದ್ಧ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.

ತಮ್ಮ ವಿರುದ್ಧದ ಕಾರ್ಯಾಚರಣೆಗೆ ತಡೆ ನೀಡುವಂತೆ ಹಲವು ಬಾರಿ ಸಮಾಜವಾದಿ ಪಕ್ಷದ ನಾಯಕರು ಕೇಳಿಕೊಂಡರೂ ನ್ಯಾಯಾಲಯ ನಿರಾಕರಿಸಿತ್ತು. ಡಿಂಪಲ್ ಯಾವುದೇ ಸಾರ್ವಜನಿಕ ಹುದ್ದೆಯಲ್ಲಿಲ್ಲದ ಕಾರಣ ಆಕೆಯ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ 2012ರಲ್ಲಿ ಕೈಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News