ರೋಷನ್ ಬೇಗ್ ಹೇಳಿಕೆ ನೋವು ತಂದಿದೆ: ಸಚಿವ ಯು.ಟಿ.ಖಾದರ್

Update: 2019-05-21 14:29 GMT

ಹೊಸದಿಲ್ಲಿ, ಮೇ 21: ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರ ಬಗ್ಗೆ ಮಾಜಿ ಸಚಿವ ರೋಷನ್ ಬೇಗ್ ಹೇಳಿಕೆ ನೋವು ತಂದಿದೆ ಎಂದು ಸಚಿವ ಯು.ಟಿ.ಖಾದರ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇಗ್ ಅವರ ಹೇಳಿಕೆ ಅಚ್ಚರಿಯಾಗಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ವೇಣುಗೋಪಾಲ್ ಅವರ ಬಗ್ಗೆ ಮಾತನಾಡಿರುವುದು ಅತ್ಯಂತ ನೋವು ತಂದಿದೆ ಎಂದರು.

ಹಿರಿಯರ ಮಾರ್ಗದರ್ಶನದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅತ್ಯಂತ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಬೇಗ್‌ಗೆ ವೈಯಕ್ತಿಕ ನೋವು ಇರಬಹುದು. ಅದನ್ನ ಬಗೆಹರಿಸುವ ಕೆಲಸ ಪಕ್ಷ ಮಾಡುತ್ತದೆ ಎಂದರು.

ಅಲ್ಪಸಂಖ್ಯಾತರಿಗೆ ಎಲ್ಲ ರೀತಿಯಿಂದಲೂ ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸಿದೆ. ಮುಸ್ಲಿಂ ನಾಯಕರೆಲ್ಲರ ಒಪ್ಪಿಗೆ ಮೇರೆಗೆ ರಾಜ್ಯದಲ್ಲಿ ಒಂದೇ ಟಿಕೆಟ್ ನೀಡಿದೆ. ಈ ವೇಳೆ ಬೇಗ್ ದಿಲ್ಲಿಯಲ್ಲಿ ಇದ್ದರು. ಕಾಂಗ್ರೆಸ್ ಹಿಂದೆಯೂ ಮುಸ್ಲಿಂ ನಾಯಕರನ್ನ ಪರಿಗಣಿಸಿದೆ. ಮುಂದೆಯೂ ಮುಸ್ಲಿಮರನ್ನು ಪರಿಗಣಿಸಲಿದೆ ಎಂದು ಅವರು ನುಡಿದರು.

ಮೈತ್ರಿ ಸರಕಾರದಿಂದ ಯಾವುದೆ ನಷ್ಟ ಕಾಂಗ್ರೆಸ್ ಪಕ್ಷಕ್ಕೆ ಆಗಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಸರಕಾರದಿಂದ ಸೀಟು ಕಡಿಮೆಯಾಗಿಲ್ಲ. ಇನ್ನೊಂದು ದಿನದಲ್ಲಿ ಫಲಿತಾಂಶ ಹೊರಬೀಳಲಿದ್ದು ಮೈತ್ರಿಗೆ ಉತ್ತಮ ಬೆಂಬಲ ಸಿಗುವ ನೀರಿಕ್ಷೆ ಇದೆ ಎಂದು ಅವರು ಹೇಳಿದರು.

‘ಮಾಜಿ ಸಚಿವ ರೋಷನ್ ಬೇಗ್ ಆಪರೇಷನ್ ಕಮಲಕ್ಕೆ ಒಳಗಾಗುವ ವ್ಯಕ್ತಿಯಲ್ಲ. ಅವರಿಗೆ ಮಾನಸಿಕವಾಗಿ ಕಷ್ಟ ಕೊಟ್ಟು ಜೈಲಿಗೆ ಕಳಿಸಿದ್ದು ಬಿಜೆಪಿ. ಅವರ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದು ಕಾಂಗ್ರೆಸ್. ಹೀಗಾಗಿ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ’

-ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News