ಫಲಿತಾಂಶ ಕನಿಷ್ಠ 4 ಗಂಟೆ ವಿಳಂಬ: ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್

Update: 2019-05-21 16:20 GMT

ಬೆಂಗಳೂರು, ಮೇ 21: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಬಾರಿ ಫಲಿತಾಂಶವು 3 ರಿಂದ 4ಗಂಟೆಗಳ ಕಾಲ ವಿಳಂಬವಾಗಲಿದೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಚುನಾವಣಾ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಆದೇಶದನ್ವಯ ಈ ಬಾರಿ ಪ್ರತಿ ವಿಧಾನಸಭಾ ವ್ಯಾಪ್ತಿಯ ಐದು ಮತಕೇಂದ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿರುವ (ಇವಿಎಂ) ಮತ ಎಣಿಕೆಯ ಜೊತೆಗೆ ವಿವಿ ಪ್ಯಾಟ್‌ಗಳಲ್ಲಿ ಮತಗಳ ಎಣಿಕೆ ಮಾಡಿ ತಾಳೆ ನೋಡಬೇಕಿದೆ. ಹೀಗಾಗಿ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ ಎಂದರು.

ಮತಎಣಿಕೆಯು ಬೆಳಗ್ಗೆ 8ಗಂಟೆಗೆ ಪ್ರಾರಂಭವಾಗುತ್ತದೆ. ಮೊದಲು ಅಂಚೆ ಮತಪತ್ರಗಳು, ಇಟಿಪಿಬಿಎಸ್(ಸೇವಾ ಮತದಾರರಿಗೆ ನೀಡುವ ಎಲೆಕ್ಟ್ರಾನಿಕ್ ಮತಪತ್ರ) ಎಣಿಕೆ ನಡೆಯಲಿದೆ. ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿರುವ ಮತಗಳ ಎಣಿಕೆ ಪ್ರಾರಂಭವಾಗಲಿದೆ. ಇದಾದ ಮೇಲೆ ಪ್ರತಿ ವಿಧಾನಸಭಾ ಕ್ಷೇತ್ರವಾರು 5 ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನು ಆರಿಸಿ ಸ್ಲಿಪ್‌ಗಳ ಎಣಿಕೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಗೆ ಅನುಗುಣವಾಗಿ 16 ರಿಂದ 32 ರೌಂಡ್ಸ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು 28 ಕ್ಷೇತ್ರಗಳಲ್ಲಿ 28 ಚುನಾವಣಾಧಿಕಾರಿ, 258 ಸಹಾಯಕ ಚುನಾವಣಾಧಿಕಾರಿ, ಮತ ಎಣಿಕೆಗೆ 180 ಸಹಾಯಕ ಚುನಾವಣಾಧಿಕಾರಿ, 3,682 ಮತ ಎಣಿಕೆ ಮೇಲ್ವಿಚಾರಕರು, 3,707 ಮತ ಎಣಿಕೆ ಸಹಾಯಕರು ಹಾಗೂ 3,738 ಸೂಕ್ಷ್ಮ ವೀಕ್ಷಕರಿಗೆ ಸೂಕ್ತ ತರಬೇತಿ ನೀಡಿ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ಲೋಕಸಭಾ ಕೇತ್ರಗಳಲ್ಲಿ ತಲಾ 8 ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ತಲಾ 14 ಮತ ಎಣಿಕೆ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. 300ಕ್ಕೂ ಹೆಚ್ಚು ಮತಗಟ್ಟೆಗಳಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಮತ ಎಣಿಕೆ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮೊಬೈಲ್ ಬಳಕೆ ನಿಷೇಧ: ಮತ ಎಣಿಕೆ ಕೇಂದ್ರಕ್ಕೆ ಬರುವ ಅಧಿಕಾರಿ, ಎಣಿಕಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳು ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News