ಕಾರು ಚಾಲಕನ ಕೊಲೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು

Update: 2019-05-21 15:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 21: ಕಾರು ಚಾಲಕನೋರ್ವನನ್ನು ಕೊಲೆಗೈದಿದ್ದ ಪ್ರಕರಣವನ್ನು ಭೇದಿಸಿರುವ ಇಲ್ಲಿನ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು, ಆರೋಪಿಗಳಿಬ್ಬರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಕ್ಕಸಂದ್ರದ ನಿವಾಸಿ ವಿನೋದ್ ಕುಮಾರ್ (24) ಮತ್ತು ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ಹೇಮಂತ್ ಸಾಗರ್ (24) ಎಂಬುವರು ಬಂಧಿತ ಆರೋಪಿಗಳಾಗಿದ್ದು, ಸದ್ಯ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಮೇ 4ರಂದು ಎಲೆಕ್ಟ್ರಾನಿಕ್ ಸಿಟಿ ನಿವಾಸಿ, ಆಂಧ್ರ ಮೂಲದ ಕೆಂಪೇಗೌಡ ಎಂಬುವರ ಕಾರನ್ನು ಬಾಡಿಗೆಗೆ ಪಡೆದ ದುಷ್ಕರ್ಮಿಗಳು, ಮಾರ್ಗಮಧ್ಯೆ ಅವರ ಕುತ್ತಿಗೆ ಬಿಗಿದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದ ಬಳಿಕ ಮೃತ ದೇಹವನ್ನು ನೆಲಮಂಗಲದ ಮಲ್ಲರಬಾನವಾಡಿ ನೀಲಗಿರಿ ತೋಪಿನಲ್ಲಿ ಸುಟ್ಟು ಹಾಕಿ ಪರಾರಿಯಾಗಿದ್ದರು. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮೇ 6ರಂದು ಕೆಂಪೇಗೌಡ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇತ್ತ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಗಿರಿ ತೋಪಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಬಳಿಕ, ತನಿಖೆ ಚುರುಕುಗೊಳಿಸಿದ ಪೊಲೀಸರು ಕೆಂಪೇಗೌಡ ಅವರ ಪೂರ್ವಾಪರ ಮಾಹಿತಿ ಕಲೆ ಹಾಕಿ ಕೊಲೆ ರಹಸ್ಯ ಬಯಲಿಗೆಳೆದಿದ್ದಾರೆ.

ಮೊಬೈಲ್ ಸುಳಿವು: ಕೆಂಪೇಗೌಡ ಅವರು ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಪರಿಶೀಲನೆ ನಡೆಸಿದಾಗ ಆರೋಪಿಗಳಾದ ವಿನೋದ್ ಹಾಗೂ ಹೇಮಂತ್ ಕುರಿತು ಮಾಹಿತಿ ದೊರೆತಿದೆ. ಕೂಡಲೇ ಅವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸೋಮವಾರ ರಾತ್ರಿ ಆರೋಪಿಗಳು ಸೊಂಡೆಕೊಪ್ಪದಿಂದ ನೆಲಮಂಗಲಕ್ಕೆ ಬರುತ್ತಿದ್ದಾರೆಂಬ ಮಾಹಿತಿ ಕಲೆಹಾಕಿ ನೆಲಮಂಗಲ ಪಟ್ಟಣದ ಗಣೇಶಗುಡಿ ಬಳಿ ಆರೋಪಿಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಹಿಡಿಯಲು ಹೋದಾಗ ತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದಾರೆ.

ಆಗ ಪಿಎಸ್ಸೈ ನವೀನ್‌ಕುಮಾರ್ ಹಿಂಬಾಲಿಸಿಕೊಂಡು ಹೋಗಿ ಆರೋಪಿ ಹೇಮಂತ್ ಸಾಗರ್‌ನನ್ನು ಹಿಡಿಯಲು ಹೋದಾಗ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಎಚ್ಚೆತ್ತ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ, ಆರೋಪಿಗಳು ಪ್ರತಿರೋಧ ವ್ಯಕ್ತಪಡಿಸಿ ಹಲ್ಲೆಗೆ ಮುಂದಾದಾಗ, ಆತ್ಮರಕ್ಷಣೆಗಾಗಿ ಅವರು ಹಾರಿಸಿದ ಗುಂಡುಗಳು ಇಬ್ಬರ ಕಾಲುಗಳಿಗೆ ತಗುಲಿ ಕುಸಿದುಬಿದ್ದಿದ್ದಾರೆ.

ತಕ್ಷಣ ಸುತ್ತುವರೆದ ಪೊಲೀಸರು ಇಬ್ಬರು ಆರೋಪಿಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ತದನಂತರ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News