ಕಾಂಗ್ರೆಸ್‌ನೊಂದಿಗಿದ್ದೇವೆ ಎಂದು ಘೋಷಿಸಲು ಹಿಂಜರಿಕೆ ಏಕೆ: ಡಿಎಂಕೆಗೆ ಎಐಎಡಿಎಂಕೆ ಪ್ರಶ್ನೆ

Update: 2019-05-21 16:47 GMT

ಚೆನ್ನೈ, ಮೇ 21: ಮಿತ್ರಪಕ್ಷ ಕಾಂಗ್ರೆಸ್‌ನೊಂದಿಗೆ ದೃಢವಾಗಿ ನಿಲ್ಲುವ ಬಗ್ಗೆ ಹಿಂಜರಿಕೆಯೇಕೆ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್‌ರನ್ನು ತಮಿಳುನಾಡಿನ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಪ್ರಶ್ನಿಸಿದೆ.

 ಕೇಂದ್ರದಲ್ಲಿ ಯಾವುದೇ ಪಕ್ಷದ ನೇತೃತ್ವದಲ್ಲಿ ರಚನೆಯಾಗುವ ಸರಕಾರದ ಭಾಗವಾಗಿರುವ ಬಗ್ಗೆ ತಮ್ಮ ಪಕ್ಷ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ನಿರ್ಧರಿಸಲಿದೆ ಎಂದು ಸ್ಟಾಲಿನ್ ಸೋಮವಾರ ನೀಡಿದ ಹೇಳಿಕೆಗೆ ಎಐಎಡಿಎಂಕೆಯ ಮುಖವಾಣಿ ‘ನಮಥು ಅಮ್ಮ’ದಲ್ಲಿ ಪ್ರತಿಕ್ರಿಯೆ ನೀಡಲಾಗಿದೆ. ಡಿಎಂಕೆಯು ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಕಾರಣ ತಮ್ಮ ಪಕ್ಷ ಕೇವಲ ಯುಪಿಎ ನೇತೃತ್ವದ ಸರಕಾರದಲ್ಲಿ ಮಾತ್ರ ಸೇರಿಕೊಳ್ಳುತ್ತದೆ ಎಂದು ಸ್ಟಾಲಿನ್ ಹೇಳಬೇಕಾಗಿತ್ತು. ತನ್ನ ಸಿದ್ಧಾಂತಕ್ಕೆ ಬದ್ಧನಾಗಿರುವ ಓರ್ವ ಪ್ರಾಮಾಣಿಕ ರಾಜಕಾರಣಿ ಮತ್ತು ನಾಯಕನಾಗಿದ್ದರೆ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಹೊರತುಪಡಿಸಿ ಬೇರೆ ಯಾವ ಸರಕಾರದಲ್ಲೂ ಡಿಎಂಕೆ ಭಾಗಿಯಾಗದು ಎಂದು ಸ್ಪಷ್ಟವಾಗಿ ಹೇಳಬೇಕಿತ್ತಲ್ಲವೇ ಎಂದು ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಶ್ನಿಸಲಾಗಿದೆ.

 ಚುನಾವಣೋತ್ತರ ಮೈತ್ರಿಯ ಬಗ್ಗೆ ಡಿಎಂಕೆ ಪಕ್ಷ ಬಿಜೆಪಿಯೊಂದಿಗೆ ಮಾತುಕತೆ ನಡೆಸಿದೆ ಎಂಬ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳರಸಿ ಸೌಂದರರಾಜನ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿರುವ ಎಐಎಡಿಎಂಕೆ, ಇದು ಸ್ಟಾಲಿನ್‌ರ ದ್ವಿಮುಖ ನೀತಿಯನ್ನು ತಿಳಿಸುತ್ತದೆ. ಅವರಿಗೆ ತತ್ವ, ಸಿದ್ಧಾಂತದ ಗೊಡವೆಯಿಲ್ಲ, ತಮ್ಮ ಪಕ್ಷಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂಬುದಷ್ಟೇ ಅವರ ನಿಲುವಾಗಿದೆ ಎಂದು ಕಟುವಾಗಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News