ನಾಡಿನ ಜನತೆ ಸರಕಾರಿ ಶಾಲೆಗಳ ಕಡೆಗೆ ಆಸಕ್ತಿ ವಹಿಸಲಿ: ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್

Update: 2019-05-21 16:42 GMT

ಬೆಂಗಳೂರು, ಮೇ 21: ರಾಜ್ಯದಲ್ಲಿ ವಾಸಿಸುತ್ತಿರುವವರು ಸರಕಾರಿ ಶಾಲೆಗಳ ಮೇಲೆ ಹೆಚ್ಚು ಆಸಕ್ತಿ ವಹಿಸಿ, ತಮ್ಮ ಮಕ್ಕಳನ್ನು ಅಲ್ಲಿಯೆ ಸೇರಿಸಬೇಕೆಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮನವಿ ಮಾಡಿದ್ದಾರೆ.

ಮಂಗಳವಾರ ಕನ್ನಡ ಅನುಷ್ಠಾನ ಮಂಡಳಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಯೋಜಿಸಿದ್ದ ‘ಮುಂದಿನ ಪೀಳಿಗೆಗೆ ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿದರೆ ಮಾತ್ರ ನಾಡಿನ ಅಸ್ಮಿತೆ ಉಳಿಯಲು ಸಾಧ್ಯ. ನಮ್ಮ ನಾಡಿನ ಕಲ್ಪನೆಯೆ ನಮಗೆ ಇಲ್ಲದಿದ್ದರೆ ನಾವು ಪರಕೀಯರಾಗಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ಮನೆಯ ರೀತಿಯಲ್ಲಿ ನಮ್ಮೂರಿನ ಸರಕಾರಿ ಶಾಲೆಗಳನ್ನು ಕಾಣಬೇಕು. ಗ್ರಾಮದ ಪ್ರತಿ ಕುಟುಂಬವು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತಾದರೆ ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ತಾನಾಗಿಯೆ ಅಭಿವೃದ್ದಿಯಾಗಲಿದೆ. ಕನ್ನಡ ನಾಡಿಗೆ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಹೇಗೆ ಮುಖ್ಯವೋ ಹಾಗೆಯೆ ಸರಕಾರಿ ಶಾಲೆಗಳು ಮುಖ್ಯ ಎಂಬುದನ್ನು ಮನಗಾಣಬೇಕಾಗಿದೆ ಎಂದು ಅವರು ಹೇಳಿದರು.

ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಉಳಿಯುತ್ತದೆಯೇ ಎನ್ನುವ ಆತಂಕ ಪಡುವಂತಾಗಿದೆ. ಕನ್ನಡ ಮಾತನಾಡುವುದಕ್ಕೆ ಕೀಳರಿಮೆ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ಇದು ಹೀಗೆಯೆ ಮುಂದುವರೆದರೆ ಬೆಂಗಳೂರಿನಲ್ಲಿ ಕನ್ನಡಿಗರನ್ನು ಹುಡುಕಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದರು.

ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿಯಿಟ್ಟುಕೊಂಡವರು ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಭಾಷೆಗಳು ಎಷ್ಟೇ ನಮ್ಮ ಮೇಲೆ ಪ್ರಭಾವ ಬೀರಿದರೂ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ಅನಿವಾರ್ಯ ಎಂಬ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದು ಅವರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಆರ್.ಎ.ಪ್ರಸಾದ್ ಮಾತನಾಡಿ, ಖಾಸಗಿ ಶಾಲೆಗಳು ಪ್ರವಾಹದ ಮಧ್ಯೆ ಕನ್ನಡ ಶಾಲೆಗಳು ಮುಚ್ಚಿಹೋಗುವ ಆತಂಕ ಎದುರಾಗಿದೆ. ಹಾಗಾಗಿ ಶಿಕ್ಷಕರು ಪೋಷಕರು ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದರು.

ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಗಳಲ್ಲಿರುವ ಕನ್ನಡಿಗರು ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕು. ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ದೊರೆಯುವಂತಾಗಬೇಕು. ಜಾಗತಿಕ ವಿಷಯಗಳನ್ನು ಮಕ್ಕಳಿಗೆ ಕನ್ನಡದಲ್ಲಿಯೆ ಬೋಧನೆ ಮಾಡುವಂತಹ ಸಾಮರ್ಥ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಅವರು ಆಶಿಸಿದರು.

ಈ ವೇಳೆ ಕನ್ನಡ ಅನುಷ್ಠಾನ ಮಂಡಳಿಯ ನೂರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಕನ್ನಡ ಶಾಲೆ, ಭಾಷೆಯ ಕುರಿತು ಜಾಗೃತಿ ಮೂಡಿಸುವಂತಹ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಅಭಿಯಾನ ನಡೆಸಿದರು.

ರಾಜ್ಯದಲ್ಲಿರುವ ಸರಕಾರ, ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳಲ್ಲಿ ಕನ್ನಡದಲ್ಲೇ ಆಡಳಿತ ವ್ಯವಹಾರ ನಡೆಯುವಂತಾಗಬೇಕು. ರಾಜ್ಯದಲ್ಲಿ ಸ್ಥಾಪಿತಗೊಂಡಿರುವ ಕಾರ್ಪೊರೇಟ್ ಕಂಪೆನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಹುದ್ದೆಗಳನ್ನು ನೀಡಲು ರಾಜ್ಯ ಸರಕಾರ ವಿಶೇಷ ಕಾಯ್ದೆ ರೂಪಿಸಬೇಕು. ಕನ್ನಡ ಶಾಲೆ ಎಂಬುದು ನಮ್ಮ ಮನೆಇದ್ದಂಗೆ ಎಂಬ ಭಾವನೆ ಬರುವ ರೀತಿಯಲ್ಲಿ ರಾಜ್ಯ ಸರಕಾರ ವಿಶೇಷ ಅಭಿಯಾನ ನಡೆಸಬೇಕು.

-ಡಾ.ಆರ್.ಎ.ಪ್ರಸಾದ್, ಸದಸ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News