6ನೆ ವೇತನ ಶ್ರೇಣಿ ಜಾರಿಗೆ ಒತ್ತಾಯಿಸಿ ಮುಷ್ಕರ 14ನೆ ದಿನಕ್ಕೆ: ಮುಷ್ಕರ ನಿರತರಿಂದ ರಕ್ತದಾನ

Update: 2019-05-21 16:44 GMT

ಬೆಂಗಳೂರು, ಮೇ 21: 6ನೆ ವೇತನ ಶ್ರೇಣಿ ಜಾರಿಮಾಡಬೇಕೆಂದು ಒತ್ತಾಯಿಸಿ ಒಕ್ಕಲಿಗರ ಸಂಘದ ನೌಕರರ ನಡೆಸುತ್ತಿರುವ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ’ರಕ್ತ ಕೊಟ್ಟೇವು 6ನೇ ವೇತನ ಬಿಡೆವು’ ಎಂಬ ಶೀರ್ಷಿಕೆಯಡಿ ರಕ್ತದಾನ ಮಾಡುವ ಮೂಲಕ ಪ್ರತಿಭಟನೆ ಮುಂದುವರೆಸಿದ್ದಾರೆ.

ಈ ವೇಳೆ ನೌಕರರ ಸಂಘದ ಕಾರ್ಯದರ್ಶಿ ಆರ್.ರಂಗರಾಜು ಮಾತನಾಡಿ, ಒಕ್ಕಲಿಗರ ಸಂಘದ ಅಧೀನ ಸಂಸ್ಥೆಗಳಲ್ಲಿ 1200ಕ್ಕೂ ಹೆಚ್ಚು ಖಾಯಂ ನೌಕರರು ಕೆಲಸ ಮಾಡುತ್ತಿದ್ದು, 2018ರ ಎಪ್ರಿಲ್‌ನಿಂದ 6ನೇ ವೇತನ ಜಾರಿ ಮಾಡಿಲ್ಲ ಹಾಗೂ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಇದು ಕಾರ್ಮಿಕ ಹಕ್ಕುಗಳ ಶೋಷಣೆಯ ಪರಮಾವಧಿ ಎಂದು ಖಂಡಿಸಿದರು.

ಸಂಘದ ಮೂಲಕ ಬೇಡಿಕೆ ಈಡೇರಿಸುವಂತೆ ಆಡಳಿತಾಧಿಕಾರಿ ಅಶೋಕಾನಂದ ಅವರಿಗೆ ಮನವಿ ನೀಡಲಾಗಿದ್ದು, ಈವರೆಗೂ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಹೀಗಾಗಿ 6ನೇ ವೇತನ ಜಾರಿ ಮಾಡುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ. ಇದರಲ್ಲಿ ಯಾವುದೆ ರಾಜಿ ಇಲ್ಲವೆಂದು ಅವರು ಹೇಳಿದರು.

ಸಂಘದ ಅಧೀನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ, ಉಪನ್ಯಾಸಕರಿಗೆ, ಎಐಸಿಟಿಇ ವೇತನ ಶ್ರೇಣಿಯನ್ನು ನೀಡುತ್ತಿದ್ದಾರೆ. ಆದರೆ, ಬೋಧಕೇತರ ಸಿಬ್ಬಂದಿಗಳಿಗೆ 6ನೇ ವೇತನ ಜಾರಿ ಮಾಡಲು ಆಡಳಿತ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಕಿಮ್ಸ್ ಆಸ್ಪತ್ರೆಯಲ್ಲಿ ಅನಗತ್ಯವಾಗಿ ಯಂತ್ರೋಪಕರಣ ಖರೀದಿ, ಗುತ್ತಿಗೆದಾರರಿಗಾಗಿ ಹಣ ವ್ಯಯಿಸುತ್ತಿದ್ದು, ಇತರ ನೌಕರರಿಗೆ ನ್ಯಾಯಯುತವಾದ ವೇತನ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಹಗಲಿರುಳು ದುಡಿದು ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿರುವ ಕಾರ್ಮಿಕರ ಉತ್ತಮ ಭವಿಷ್ಯಕ್ಕಾಗಿ 6ನೆ ವೇತನ ಶ್ರೇಣಿ ಜಾರಿ ಮಾಡಲೇಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದರು. ಈ ವೇಳೆ ಮುಷ್ಕರ ನಿರತ ನೌಕರರು ಪ್ರತಿಭಟನೆಯ ಅಂಗವಾಗಿ ಕೈಗೊಂಡ ರಕ್ತದಾನವನ್ನು ಕ್ಯಾನ್ಸರ್ ರೋಗಿಗಳಿಗೆ ಕಳುಹಿಸುವುದಾಗಿ ತಿಳಿಸಿದರು. ಸಂಘದ ಸಹ ಕಾರ್ಯದರ್ಶಿ ಎಚ್.ಜಿ. ಮಹದೇವ, ಖಜಾಂಚಿ ವೆಂಕಟಸ್ವಾಮಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News