ಅಮೆಝಾನ್ ಕಂಪೆನಿ ಸಿಬ್ಬಂದಿ ಬಂಧನ

Update: 2019-05-21 16:46 GMT

ಬೆಂಗಳೂರು, ಮೇ 21: ಆನ್‌ಲೈನ್‌ನಲ್ಲಿ ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳನ್ನು ಬದಲಾವಣೆ ಮಾಡುವುದಲ್ಲದೆ, ಕಚೇರಿಯಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ಅಮೆಝಾನ್ ಕಂಪೆನಿ ಸಿಬ್ಬಂದಿಯೊಬ್ಬರನ್ನು ಇಲ್ಲಿನ ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥನಗರದ ನಿವಾಸಿ ಕೃಷ್ಣನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣನ್ ಕೆಲ ವರ್ಷಗಳಿಂದ ಅರೆಕೆಂಪನಹಳ್ಳಿ ಬಳಿಯ ಅಮೆಝಾನ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಗ್ರಾಹಕರು ಆರ್ಡರ್ ಮಾಡಿ, ಖರೀದಿಸಿದ ವಸ್ತುಗಳು ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ತಲುಪಿದಾಗ ಅದನ್ನು ಪಡೆದುಕೊಂಡು, ಬೇರೊಂದು ವಸ್ತು ನೀಡುವ ಮೂಲಕ ವಂಚಿಸಿ, ಅಮೆಝಾನ್ ಕಂಪೆನಿಗೆ ನಷ್ಟ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಗ್ರಾಹಕರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ ಸಾಮಗ್ರಿಗಳನ್ನು ಆರೋಪಿ ನೀಡದೆ, ಬೆಲೆಬಾಳುವ ವಸ್ತುಗಳನ್ನು ಅಕ್ರಮವಾಗಿ ತನ್ನಲ್ಲಿಯೇ ಇಟ್ಟುಕೊಳ್ಳುತ್ತಿದ್ದ. ಈ ಬಗ್ಗೆ ಅಮೆಝಾನ್ ಸಂಸ್ಥೆಯ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕರೊಬ್ಬರು ಸಿಸಿಟಿವಿಯನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಕೃಷ್ಣನ್ ಬಂಧಿಸಿ, ಇನ್ನುಳಿದ ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News