ಯಾರನ್ನೂ ನಾನು ದೂರುವುದಿಲ್ಲ: ಚು.ಆಯೋಗ ವಿವಾದ ಕುರಿತಂತೆ ಚುನಾವಣಾ ಆಯುಕ್ತ ಅಶೋಕ್ ಲವಾಸಾ

Update: 2019-05-21 17:37 GMT

ಹೊಸದಿಲ್ಲಿ,ಮೇ 21: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಮುಕ್ತಗೊಳಿಸುವ ಚುನಾವಣಾ ಆಯೋಗ(ಇಸಿ)ದ ನಿರ್ಧಾರಕ್ಕೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರು ಮಂಗಳವಾರ ಆಂಗ್ಲ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ತನ್ನ ಮೌನವನ್ನು ಮುರಿದರು ಮತ್ತು ತಾನು ಯಾರನ್ನೂ ದೂರುವುದಿಲ್ಲ ಎಂದು ಹೇಳಿದರು.

‘ನಾನು ಯಾರನ್ನೂ ದೂರುವುದಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಅವಧಿಬದ್ಧ,ಪಾರದರ್ಶಕ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ವಿಲೇವಾರಿಗೊಳಿಸುವ ವ್ಯವಸ್ಥೆಯು ಇರಬೇಕು ಎನ್ನುವುದು ನನ್ನ ಕಳಕಳಿಯಾಗಿದೆ ’ಎಂದು ಚುನಾವಣಾ ಆಯೋಗದ ಮಹತ್ವದ ಸಭೆಯೊಂದರಲ್ಲಿ ಪಾಲ್ಗೊಳ್ಳುವ ಮುನ್ನ ಅವರು ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆಗಳ ಕುರಿತು ಚರ್ಚಿಸಲು ನಡೆದಿದ್ದ ಇಸಿಯ ಎಲ್ಲ ಸಭೆಗಳಿಂದ ಲವಾಸಾ ದೂರವುಳಿದಿದ್ದಾರೆ ಎನ್ನ್ನುವುದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಮೂವರು ಸದಸ್ಯರ ಆಯೋಗದಲ್ಲಿಯ ಬಿರುಕು ಬಹಿರಂಗಗೊಂಡಿತ್ತು.

ಆಯೋಗದ ಆದೇಶಗಳಲ್ಲಿ ಭಿನ್ನಾಭಿಪ್ರಾಯದ ಟಿಪ್ಪಣಿಗಳು ಮತ್ತು ಅಲ್ಪಮತದ ನಿರ್ಧಾರಗಳು ದಾಖಲಾದರೆ ಮಾತ್ರ ತಾನು ಸಭೆಗಳಲ್ಲಿ ಪಾಲ್ಗೊಳ್ಳುವುದಾಗಿ ಲವಾಸಾ ಒತ್ತಿ ಹೇಳಿದರು.

ಮೋದಿ ಮತ್ತು ಶಾ ಅವರನ್ನು ನೀತಿ ಸಂಹಿತೆ ಉಲ್ಲಂಘನೆ ಆರೋಪಗಳಿಂದ ಮುಕ್ತಗೊಳಿಸಿದ ಇಸಿ ಆದೇಶಗಳಲ್ಲಿ ಲವಾಸಾ ಅವರ ಭಿನ್ನಮತವನ್ನು ದಾಖಲಿಸದಿರುವುದು ವಿವಾದವನ್ನು ಸೃಷ್ಟಿಸಿದೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ನ್ಯಾಯಿಕ ಸ್ವರೂಪದ ಕಲಾಪವಲ್ಲ,ಹೀಗಾಗಿ ಆದೇಶಗಳಲ್ಲಿ ಭಿನ್ನಮತವನ್ನು ದಾಖಲಿಸುವಂತಿಲ್ಲ ಎಂದು ಇಸಿಯ ಕಾನೂನು ವಿಭಾಗವು ತಿಳಿಸಿತ್ತು.

ಆದರೆ ಲವಾಸಾ ಇದನ್ನು ಒಪ್ಪಿಲ್ಲ. ನ್ಯಾಯಾಲಯವಿರಲಿ ಅಥವಾ ನ್ಯಾಯಾಧಿಕರಣವಿರಲಿ,ಬಹುಸದಸ್ಯರಿರುವ ಸಂಸ್ಥೆಗಳಲ್ಲಿ ಭಿನ್ನಮತವನ್ನು ಆದೇಶದಲ್ಲಿ ಸೇರಿಸಲಾಗುತ್ತದೆ ಎಂದು ಲವಾಸಾ ಹೇಳಿದರು. ಭಿನ್ನಮತವನ್ನು ವ್ಯಕ್ತಪಡಿಸುವ ತನ್ನ ಹಕ್ಕನ್ನು ಸಮರ್ಥಿಸಿಕೊಂಡ ಅವರು,ಭಿನ್ನಮತಕ್ಕೆ ತನ್ನ ಕಾರಣಗಳು ಮಾದರಿ ನೀತಿ ಸಂಹಿತೆಯ ನಿಯಮಗಳು ಮತ್ತು ಚುನಾವಣಾ ಆಯೋಗದ ನಿರ್ದೇಶಗಳಿಗೆ ಅನುಗುಣವಾಗಿವೆ. ಇದು ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯಲ್ಲಿ ಜನರ ವಿಶ್ವಾಸವನ್ನು ಉತ್ತೇಜಿಸುತ್ತದೆ ಎಂದರು. ಲವಾಸಾ ಅವರು ಮೇ 4ರ ನಂತರ ನೀತಿ ಸಹಿತೆ ಉಲ್ಲಂಘನೆಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗಿಯಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News