ಜೂನ್‌ನಿಂದ ದೇಶಾದ್ಯಂತ ‘ಡಿಕೇಡ್ ಆಫ್ ಡಿಗ್ನಿಟಿ’ ಸಂಭ್ರಮ

Update: 2019-05-21 17:36 GMT

ಬೆಂಗಳೂರು, ಮೇ 21: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸ್ಥಾಪನೆಯಾಗಿ ನ.7ಕ್ಕೆ ಹತ್ತು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಡಿಕೇಡ್ ಆಫ್ ಡಿಗ್ನಿಟಿ’ ಎಂಬ ಘೋಷ ವಾಕ್ಯದೊಂದಿಗೆ ಜೂನ್‌ನಿಂದ ನವೆಂಬರ್‌ವರೆಗೂ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪಸ್‌ನ ಅಧ್ಯಕ್ಷ ಸಾಜಿದ್ ತಿಳಿಸಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 7ರಂದು ದಿಲ್ಲಿಯಲ್ಲಿ ಸಮಾವೇಶವನ್ನ್ನು ಆಯೋಜಿಸಲಾಗಿದ್ದು, ಅದಕ್ಕೂ ಮೊದಲು ಜೂನ್‌ನಿಂದ ನವೆಂಬರ್‌ವರೆಗೂ ಸಮಾವೇಶದ ಪ್ರಯುಕ್ತ ವಿಚಾರ ಸಂಕಿರಣ, ರ್ಯಾಲಿ, ಪೋಸ್ಟರ್ ಬಿಡುಗಡೆ ಹಾಗೂ ಕ್ಯಾಂಪಸ್ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮತ್ತು ಬದಲಾವಣೆಗಳನ್ನು ತರುವ ಪ್ರಯತ್ನದಲ್ಲಿ ಮಾಡಲಿದ್ದೇವೆ ಎಂದು ಹೇಳಿದರು.

2009 ರಲ್ಲಿ ಕಲ್ಲಿಕೋಟೆಯಲ್ಲಿ ನಡೆದ ರಾಷ್ಟ್ರೀಯ ರಾಜಕೀಯ ಸಮಾವೇಶದಲ್ಲಿ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿ ನಾಯಕರು ಸೇರಿ ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಚರ್ಚೆಯನ್ನು ನಡೆಸಿದರು. ಅಲ್ಲದೆ, ತುಳಿತಕ್ಕೊಳಗಾದ ದಲಿತ, ಮುಸ್ಲಿಂ ವಿದ್ಯಾರ್ಥಿಗಳು ಅಸಂಘಟಿತರಾಗಿದ್ದು ಫ್ಯಾಶಿಸಂ ಹಿಂದುತ್ವವಾದಿಗಳ ದಬ್ಬಾಳಿಕೆಯಿಂದಾಗಿ ಸಬಲೀಕರಣದ ಕಾರ್ಯಸೂಚಿಯನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ ಎಂಬುದನ್ನು ಅರಿತುಕೊಂಡರು ಎಂದರು.

ಹಿಂದುತ್ವದ ಫ್ಯಾಶಿಸಂನ್ನು ಕೇವಲ ಹಿಂಸೆ ಮತ್ತು ಗಲಭೆಗಳ ಆಧಾರದಲ್ಲಿ ನೋಡದೆ, ದ್ವೇಷದ ಆಧಾರದಲ್ಲಿ ಜನರ ಮನಸ್ಸುಗಳಲ್ಲಿ ಆಳವಾಗಿ ಬೇರೂರಿ ನಿಂತಿರುವುದು ಕಾಣಲು ಸಾಧ್ಯವಾಗಿದೆ. ವಿದ್ಯಾರ್ಥಿ ಮತ್ತು ಯುವ ಶಕ್ತಿಯ ಸಂಘಟಿತವಾದ ವ್ಯವಸ್ಥೆ ಮತ್ತು ದೃಢವಾದ ನೈತಿಕ ಮೌಲ್ಯಗಳ ಮೂಲಕ ಫ್ಯಾಶಿಸಂನ್ನು ಸೈದ್ಧಾಂತಿಕವಾಗಿ ಮತ್ತು ವ್ಯವಸ್ಥಿತವಾಗಿ ಎದುರಿಸಬೇಕಾಗಿದೆ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ರೌಫ್, ರಾಜ್ಯಾಧ್ಯಕ್ಷ, ಫಯಾಝ್ ದೊಡ್ಡಮನೆ ಹಾಗೂ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News