ಬರ ಪರಿಹಾರ ಕಾರ್ಯ ಚುರುಕಾಗಿ ನಡೆಯಲಿ

Update: 2019-05-22 05:03 GMT

ನಿರಂತರ ಅಸ್ಥಿರತೆಯ ಭೀತಿ, ಒಂದರ ಮೇಲೊಂದರಂತೆ ಬಂದ ಚುನಾವಣೆಗಳು, ಎಲ್ಲಕ್ಕಿಂತ ಮಿಗಿಲಾಗಿ ಧುತ್ತೆಂದು ಬಂದ ಲೋಕಸಭಾ ಚುನಾವಣೆ, ಈ ಜಂಜಾಟದಲ್ಲಿ ನಮ್ಮನ್ನಾಳುವ ರಾಜ್ಯ ಸರಕಾರಕ್ಕೆ ತೀವ್ರ ಬರಗಾಲದಿಂದಾಗಿ ರಾಜ್ಯದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗಿಲ್ಲ. ಇನ್ನು ಕರ್ನಾಟಕದ ಬಗ್ಗೆ ಪಕ್ಷಪಾತ ನೀತಿ ಅನುಸರಿಸುತ್ತ್ತಾ ಬಂದಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗುವುದಿಲ್ಲ. ರಾಜ್ಯದಲ್ಲಿ 160 ತಾಲೂಕುಗಳು ಬರ ಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದೆ. ಆದರೆ ಅಷ್ಟರಲ್ಲಿ ಲೋಕಸಭಾ ಚುನಾವಣೆ ಬಂದು ನೀತಿ ಸಂಹಿತೆ ಜಾರಿಯಾದುದರಿಂದ ಬರಗಾಲ ಎದುರಿಸಲು ಸರಕಾರ ರೂಪಿಸಿದ ಕ್ರಿಯಾ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಅಷ್ಟಿಷ್ಟು ಪರಿಹಾರ ಕಾರ್ಯ ನಡೆದರೂ ಪರಿಣಾಮಕಾರಿಯಾಗಿರಲಿಲ್ಲ.

ಈ ಬಾರಿ ಬರಗಾಲದ ತೀವ್ರತೆ ಎಷ್ಟಿದೆ ಅಂದರೆ ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದಾಗಿ ರಾಜ್ಯದ 126 ತಾಲೂಕುಗಳ ಸುಮಾರು ಎರಡು ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ದನಕರುಗಳನ್ನು ಸಾಕಲಾಗದೆ ರೈತರು ತಮ್ಮ ಸುಮಾರು ಹತ್ತು ಸಾವಿರ ಜಾನುವಾರುಗಳನ್ನು ಗೋಶಾಲೆಗಳಿಗೆ ದಬ್ಬಿದ್ದಾರೆ.

 ಇಂತಹ ಸನ್ನಿವೇಶದಲ್ಲಿ ಲೋಕಸಭಾ ಚುನಾವಣೆ ಬಂದುದರಿಂದ ಆಳುವ ಮತ್ತು ಪ್ರತಿಪಕ್ಷಗಳ ರಾಜಕಾರಣಿಗಳು ಸುಡು ಬಿಸಿಲಲ್ಲೇ ಬರ ಪೀಡಿತ ಪ್ರದೇಶಗಳಲ್ಲಿ ಪ್ರಚಾರ ಪ್ರವಾಸ ಮಾಡಿದರೂ ಜನರ ಸಂಕಷ್ಟಗಳಿಗೆ ಕಿವಿಯಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ. ಆಗ ಅದು ಅವರ ಆದ್ಯತೆಯೂ ಆಗಿರಲಿಲ್ಲ. ಅಧಿಕಾರಿಗಳೂ ಕೂಡ ಚುನಾವಣಾ ಪ್ರಕ್ರಿಯೆ ಯಲ್ಲಿ ತೊಡಗಿದ್ದರಿಂದ ಬರ ಪರಿಹಾರ ಕಾರ್ಯ ನಿರೀಕ್ಷಿತ ವೇಗವನ್ನು ಪಡೆಯಲಿಲ್ಲ.

ಈ ಬಾರಿಯ ಬರಗಾಲ ಅತ್ಯಂತ ತೀವ್ರವಾಗಿದೆ. ಮೈ ಸುಡುವ ಬಿಸಿಲಿನ ಜೊತೆ ಕುಡಿಯುವ ನೀರಿಗಾಗಿ ಜನ ಬಾಯಿ ಬಾಯಿ ಬಿಡುತ್ತಿದ್ದಾರೆ. ಉತ್ತರ ಕರ್ನಾಟಕ ಮಾತ್ರವಲ್ಲ, ಸಾಮಾನ್ಯವಾಗಿ ಎಂತಹ ಬೇಸಿಗೆಯಲ್ಲೂ ನೀರಿನ ಅಭಾವ ಅನುಭವಿಸದ ಕರಾವಳಿ ಮತ್ತು ಮಲೆನಾಡಿನಲ್ಲೂ ಈ ಬಾರಿ ನೀರಿನ ಬರ ಉಂಟಾಗಿದೆ. ಧರ್ಮಸ್ಥಳದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾದುದರಿಂದ ಸದ್ಯಕ್ಕೆ ಯಾತ್ರಿಕರು ಧರ್ಮಸ್ಥಳಕ್ಕೆ ಬರಬಾರದೆಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ.

ಇನ್ನೊಂದೆಡೆ ರಾಜ್ಯದ ಸುಮಾರು ನೂರು ತಾಲೂಕುಗಳಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಹಾವೇರಿ, ಧಾರವಾಡ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲ ಪರಿಸ್ಥಿತಿ ಆತಂಕಕಾರಿಯಾಗಿದೆ.

ಈಗ ಚುನಾವಣೆ ಮುಗಿದಿದೆ. ನಾಳೆ ಫಲಿತಾಂಶ ಬರಲಿದೆ. ಏನೇ ರಾಜಕೀಯ ಬೆಳವಣಿಗೆಯಾಗಲಿ, ಕೇಂದ್ರದಲ್ಲಿ ಯಾವುದೇ ಸರಕಾರ ಬರಲಿ, ಕರ್ನಾಟಕದ ಬರ ಪರಿಹಾರ ಕಾರ್ಯಗಳಿಗೆ ತೊಂದರೆಯಾಗಬಾರದು. ಜನಪ್ರತಿನಿಧಿಗಳು ವಿರಮಿಸುವ ಕಾಲ ಇದಲ್ಲ. ಜನರ ನೋವು ಸಂಕಟಗಳಿಗೆ ಸ್ಪಂದಿಸಬೇಕು. ಬರ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ನೆರವು ಹರಿದು ಬರಬೇಕು.

ತೀವ್ರ ಬರಗಾಲದಿಂದಾಗಿ ಬಿಸಿಲಿನ ಝಳಕ್ಕೆ ಬೆಳೆಗಳು ಒಣಗುತ್ತಿವೆ. ಎರಡು, ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಜಿಲ್ಲೆಗಳಲ್ಲಿ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳು ನೀರಿಲ್ಲದೆ ಬಾಡಿ ಹೋಗುತ್ತಿವೆ. ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಮಾವು, ದಾಳಿಂಬೆ, ಪಪ್ಪಾಯಿ, ಮೆಣಸಿನಕಾಯಿ, ಟೊಮ್ಯಾಟೊ ಸೇರಿದಂತೆ ತೋಟಗಾರಿಕೆ ಬೆಳೆಗಳ ಇಳುವರಿ ಕುಂಠಿತಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿಯನ್ನು ಉಳಿಸಿಕೊಳ್ಳಲು ಬೆಳೆಗಾರರು ಪರದಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 6,000 ಎಕರೆ ಅಡಿಕೆ ಕೃಷಿ ನಾಶವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನೀರಿಲ್ಲದೆ ಕಬ್ಬು ಒಣಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಂಠಿ, ಅಡಿಕೆ, ಕಾಳು ಮೆಣಸು, ತೆಂಗು ಇದೇ ಸ್ಥಿತಿಯನ್ನು ಎದುರಿಸುತ್ತಿವೆ. ದಕ್ಷಿಣ ಕನ್ನಡದಲ್ಲಿ ಅಡಿಕೆ, ತೆಂಗು ಬೆಳೆಯ ಮೇಲೆ ಜಲಕ್ಷಾಮ ದುಷ್ಪರಿಣಾಮಗಳನ್ನು ಉಂಟು ಮಾಡಿದೆ. ಒಟ್ಟಾರೆ ರಾಜ್ಯದ ಬರ ಪರಿಸ್ಥಿತಿ ಕಳವಳಕಾರಿಯಾಗಿದೆ.

ಇಂದಿನ ಬರ ಪರಿಸ್ಥಿತಿಗೆ ಸರಕಾರ ಮಾತ್ರ ಕಾರಣವಲ್ಲ. ಅಂತರ್ಜಲ ಪಾತಾಳಕ್ಕೆ ಹೋಗಲು ನಮ್ಮ ಸ್ವಯಂಕೃತ ಅಪರಾಧವೂ ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ನಿರ್ಮಿಸುವುದು, ಮನೆಗೊಂದು ಕೊಳವೆ ಬಾವಿ ಕೊರೆಯುವುದು ಇವೆಲ್ಲ ಕೂಡ ಇಂದಿನ ಸ್ಥಿತಿಗೆ ಕಾರಣ ಎಂಬುದನ್ನು ಮರೆಯಬಾರದು.

ನಮ್ಮನ್ನು ಆಳುವ ಸರಕಾರಗಳೂ ಕೂಡ ಭೂ ಮಾಫಿಯಾ, ಟಿಂಬರ್ ಮಾಫಿಯಾಗೆ ಮಣಿಯಬಾರದು, ಮರ ಉಳಿಸಿ, ಕಾಡು ಬೆಳೆಸಿ ಎಂಬುದು ಬರೀ ಘೋಷಣೆ ಆಗಬಾರದು.

   ಲೋಕಸಭಾ ಚುನಾವಣೆ ನಂತರ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ಕರೆದು ಬರ ಪರಿಹಾರ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದ್ದರೂ ಪರಿಹಾರ ಕಾರ್ಯ ವೇಗವಾಗಿ ನಡೆದಿಲ್ಲ. ಈ ನಿಟ್ಟಿನಲ್ಲಿ ಸರಕಾರ ತಕ್ಷಣ ಬರ ಪರಿಹಾರ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಲಿ.

ಬರ ಪರಿಹಾರ ಕಾರ್ಯದಲ್ಲಿ ಪಕ್ಷ ರಾಜಕಾರಣ ಅಡ್ಡಿಯಾಗಬಾರದು. ಕರ್ನಾಟಕದಲ್ಲಿ ತಮ್ಮ ಸರಕಾರವಿಲ್ಲ ಎಂದು ಕೇಂದ್ರದ ಬಿಜೆಪಿ ಸರಕಾರ ಅನುದಾನ ಒದಗಿಸುವಲ್ಲಿ ಪಕ್ಷಪಾತ ನೀತಿ ಅನುಸರಿಸಬಾರದು. ಅದೇ ರೀತಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ಸಮ್ಮಿಶ್ರ ಸರಕಾರ ವಿಳಂಬ ಮಾಡಬಾರದು. ಪರಸ್ಪರ ಸಹಕರಿಸಿ ಜನತೆಯನ್ನು ಬರದ ಬವಣೆಯಿಂದ ಪಾರು ಮಾಡಬೇಕು

 ಕಳೆದ ವರ್ಷ ಕೇರಳದಲ್ಲಿ ಭೂಕುಸಿತ, ನೆರೆ ಹಾವಳಿ ಉಂಟಾದಾಗ ಕೇಂದ್ರದ ಮೋದಿ ಸರಕಾರ ಸಕಾರಾತ್ಮಕವಾಗಿ ವರ್ತಿಸಲಿಲ್ಲ. ಕೇರಳದಲ್ಲಿ ಎಡರಂಗ ಸರಕಾರವಿದೆ ಎಂದು ತಾರತಮ್ಯ ತೋರಿಸಿತು. ಕೇರಳ ಸರಕಾರ ಕೇಳಿದಷ್ಟು ನೆರವನ್ನು ಕೊಡಲಿಲ್ಲ. ವಿದೇಶದಲ್ಲಿರುವ ಕೇರಳೀಯರು ಮತ್ತು ಅಲ್ಲಿನ ಸ್ವಯಂ ಸೇವಾ ಸಂಸ್ಥೆಗಳು ನೆರವು ನೀಡಲು ಮುಂದೆ ಬಂದರೂ ಆ ನೆರವನ್ನು ಪಡೆಯಲು ಕೇಂದ್ರ ಅನುಮತಿ ನೀಡಲಿಲ್ಲ. ನೈಸರ್ಗಿಕ ಪ್ರಕೋಪದ ಸಂದರ್ಭಗಳಲ್ಲಿ ಹೀಗಾಗಬಾರದು.

ನಾಳೆ ಚುನಾವಣಾ ಫಲಿತಾಂಶ ಬಂದ ನಂತರವಾದರೂ ಬರ ಪರಿಹಾರ ಕಾರ್ಯಗಳು ಚುರುಕಾಗಿ ನಡೆಯಲಿ. ನೀತಿ ಸಂಹಿತೆಯ ಕಡಿವಾಣವೂ ಇರುವುದಿಲ್ಲ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ ಕರ್ನಾಟಕದ ಜನರನ್ನು ಮುಖ್ಯವಾಗಿ ರೈತಾಪಿ ಜನರನ್ನು ಬರದ ಬವಣೆಯಿಂದ ಪಾರು ಮಾಡಲು ಕಾರ್ಯೋನ್ಮುಖವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News