ಔಷಧಿ ಪೂರೈಸಲು ಆಹ್ವಾನಿಸಿದ್ದ ಟೆಂಡರ್ ದಾಖಲೆಗಳ ಮಾರಾಟ: ಆರೋಪ

Update: 2019-05-22 17:30 GMT

ಬೆಂಗಳೂರು, ಮೇ 22: ರಾಜ್ಯ ವ್ಯಾಪ್ತಿಯ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸಮಯಕ್ಕೆ ಔಷಧಿಗಳು ದೊರೆಯದೆ ರೋಗಿಗಳು ಸಂಕಟಕ್ಕೆ ಸಿಲುಕಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಗಿಸ್ಟಿಕ್ ಆ್ಯಂಡ್ ವೇರ್‌ಹೌಸಿಂಗ್ ಸೊಸೈಟಿಯಲ್ಲಿ (ಕೆಡಿಎಲ್‌ಡಬ್ಲುಎಸ್) ಔಷಧಿ ಪೂರೈಸಲು ಇತ್ತೀಚಿಗೆ ಆಹ್ವಾನಿಸಿದ್ದ ಟೆಂಡರ್ ದಾಖಲೆಗಳನ್ನು ಅಧಿಕಾರಿಗಳು ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಬಿಡ್‌ದಾರರು ಇ-ಪೋರ್ಟ್‌ನಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಟೆಂಡರ್ ಅಂಗೀಕಾರ ಪ್ರಾಧಿಕಾರ ಪ್ರಕ್ರಿಯೆ ನಡೆಯುವ ಮುನ್ನವೇ ಅಧಿಕಾರಿಗಳು ಹಣದಾಸೆಗೆ ಟೆಂಡರ್‌ನಲ್ಲಿ ಭಾಗವಹಿಸಿರುವ ಪ್ರತಿ ಬಿಡ್‌ದಾರರಿಗೆ ಮಾರಾಟ ಮಾಡಿರುವ ಸಂಬಂಧ ಕೆಡಿಎಲ್‌ಡಬ್ಲುಎಸ್‌ನ ಅಪರ ನಿರ್ದೇಶಕರು ಈಗಾಗಲೇ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಕೆಳ ಹಂತದ ಅಧಿಕಾರಿಗಳಿಗೂ ನೋಟಿಸ್ ಜಾರಿಗೊಳಿಸಿ, ಉತ್ತರಿಸಿದ್ದಾರೆಂದು ಹೇಳಲಾಗುತ್ತಿದೆ.

ಏನಿದು ಸಂಸ್ಥೆ?: ಸರಕಾರಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ವೈದ್ಯಕೀಯ ಮಹಾವಿಶ್ವವಿದ್ಯಾಲಯ ಕೇಂದ್ರ, ಸಮುದಾಯ ಆರೋಗ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೆಡಿಎಲ್‌ಡಬ್ಲುಎಸ್ ಸಕಾಲದಲ್ಲಿ ಔಷಧಿ ಪೂರೈಸುವ ಸಂಸ್ಥೆಯಾಗಿದೆ. ಆದರೆ, ಕೆಲವೊಂದು ಔಷಧಿಗಳು ಸಕಾಲದಲ್ಲಿ ಲಭ್ಯವಾಗದೇ ರೋಗಿಗಳು ತೊಂದರೆ ಪಡುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧಿ ಖರೀದಿಗೆ ಅನುದಾನ ಬಿಡುಗಡೆ ಮಾಡಿದೆ. ಆದರೆ, ಕಾಲ ಕಾಲಕ್ಕೆ ಟಂಡರ್ ಪ್ರಕ್ರಿಯೆ ಮುಗಿಸಿ ಶೀಘ್ರ ಔಷಧಿ ಸರಬರಾಜು ಮಾಡಲು ಕೆಡಿಎಲ್‌ಡಬ್ಲುಎಸ್ ಸಂಸ್ಥೆ ವಿಫಲವಾಗಿರುವುದರಿಂದ ಮುಂದಿನ ದಿನದಲ್ಲಿ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಮಾರಾಟವಾಯಿತೇ ಟೆಂಡರ್?: ಬಹಿರಂಗ ಟೆಂಡರ್ ಬದಲು ಕ್ಲೋಸಿಂಗ್ ಟೆಂಡರ್ ಆಹ್ವಾನಿಸಿ ಪ್ರಕ್ರಿಯೆ ನಡೆಸಿರುವ ಕೆಡಿಎಲ್‌ಡಬ್ಲುಎಸ್‌ನ ಕೆಲ ಅಧಿಕಾರಿಗಳು ಬಿಡ್‌ದಾರರು ಸಲ್ಲಿಸಿರುವ ಗೌಪ್ಯ ದಾಖಲೆಗಳನ್ನು ಟೆಂಡರ್‌ನಲ್ಲಿ ಭಾಗವಹಿಸಿದ ಪ್ರತಿ ಬಿಡ್‌ದಾರರಿಗೆ ಕನಿಷ್ಠ 2 ಲಕ್ಷ ರೂ.ಗಳಿಗೆ ಪೆನ್ ಡ್ರೈವ್ ಮತ್ತು ಸಿಡಿಯಲ್ಲಿ ದಾಖಲೆಗಳನ್ನು ಹಾಕಿ ಮಾರಾಟ ಮಾಡಿದ್ದು, ಟೆಂಡರ್ ಅಂಗೀಕಾರ ಪ್ರಾಧಿಕಾರ ನಡೆಯುವ ಮುನ್ನವೇ ಗೌಪ್ಯ ಮಾಹಿತಿಗಳು ಸೋರಿಕೆಯಾಗಿರುವುದು ಕೆಟಿಪಿಪಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎನ್ನಲಾಗಿದೆ.

ಪ್ರತಿ ವರ್ಷ ಬ್ಯಾಂಡೇಜ್ ಬಟ್ಟೆ, ಕಾಟನ್, ಗ್ಲೂಕೋಸ್ ಬಾಟಲ್, ಚುಚ್ಚುಮದ್ದು ಸೇರಿ ವಿವಿಧ ಔಷಧಿಗಳನ್ನು ಪೂರೈಸುವ ಸಲುವಾಗಿ ಆಂದಾಜು 300 ಕೋಟಿ ರೂ. ಮೌಲ್ಯದ ವಿವಿಧ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಬಹಿರಂಗ ಟೆಂಡರ್ ಬದಲು ಕ್ಲೋಸಿಂಗ್ ಟೆಂಡರ್ ನಡೆಸಲಾಗಿದೆ. ಟೆಂಡರ್‌ಗೆ ಸಂಬಂಧಪಟ್ಟ ಬಿಡ್‌ದಾರರು ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ (ಇ-ಪೋರ್ಟ್‌ಲ್) ಸಲ್ಲಿಸಿದ ನಂತರ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸರಿಯಾಗಿ ದಾಖಲೆಗಳನ್ನು ಸಲ್ಲಿಸಿದವರಿಗೆ ಫೈನಾನ್ಸಿಯಲ್ ಬಿಡ್ ತೆರೆಯಲಾಗುತ್ತದೆ. ಆನಂತರ, ಕಡಿಮೆ ಮೊತ್ತ ನಮೂದಿಸಿರುವ ಬಿಡ್‌ದಾರರಿಗೆ ನಿಯಮಾನುಸಾರ ಔಷಧಿಗಳನ್ನು ಪೂರೈಸಲು ಟೆಂಡರ್ ನೀಡಲಾಗುತ್ತದೆ. ಆದರೆ, ಟೆಂಡರ್ ಪ್ರಕ್ರಿಯೆ ನಡೆಯುವ ಮುನ್ನವೇ ಅಧಿಕಾರಿಗಳ ತಮ್ಮ ಕರ್ತವ್ಯ ಲೋಪವೆಸಗಿ ಹಣಕ್ಕೆ ದಾಖಲೆಗಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಟೆಂಡರ್ ನಿಯಮಾನುಸಾರ ಬಿಡ್‌ದಾರರು 2015ರಿಂದ 2018ರವರೆಗೆ ಮಾರಾಟ ತೆರಿಗೆ ಸಲ್ಲಿಸಿರುವ ಬಗ್ಗೆ ಸೇಲ್ಸ್ ಟ್ಯಾಕ್ಸ್ ಕ್ಲಿಯರೆನ್ಸ್ ಸಲ್ಲಿಸಬೇಕೆಂಬ ನಿಯಮವಿದೆ. ಸದರಿ ಬಿಡ್‌ದಾರರು ನೆರೆ ರಾಜ್ಯಗಳಲ್ಲಿ ಔಷಧಿ ಪೂರೈಸುವ ವ್ಯವಹಾರ ನಡೆಸುತ್ತಿದ್ದು, ಅಲ್ಲಿನ ಇಲಾಖೆಗೆ ಸಲ್ಲಿಸಿರುವ ಸೇಲ್ಸ್ ಟ್ಯಾಕ್ಸ್ ಕ್ಲಿಯರೆನ್ ಅನ್ನು ರಾಜ್ಯದ ಕೆಡಿಎಲ್‌ಡಬ್ಲುಎಸ್ ಸಂಸ್ಥೆಗೂ ಸಲ್ಲಿಸುತ್ತಿದ್ದಾರೆ.

ಕಾರ್ಯನಿರ್ವಹಣೆ ಪ್ರಮಾಣ ಪತ್ರ ಸೇರಿ ಇನ್ನಿತರ ಮಾಹಿತಿಯ ದಾಖಲೆಗಳನ್ನು ಸಲ್ಲಿಸಿಲ್ಲ. ಇಷ್ಟೆಲ್ಲಾ ನ್ಯೂನತೆ ಇದ್ದರೂ ಅಧಿಕಾರಿಗಳು ಬಿಡ್‌ದಾರರ ಬಿಡ್ ಅನ್ನು ಫಲಾಪೇಕ್ಷೆಯಿಂದ ಮಾನ್ಯ ವಾಡಿರುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News