ಬೈಕ್ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಲು ನಿರ್ಧಾರ!

Update: 2019-05-23 19:25 GMT

ಬೆಂಗಳೂರು, ಮೇ 23: ಅಪಘಾತವಾದ ಸಂದರ್ಭದಲ್ಲಿ ತ್ವರಿತವಾಗಿ ಸೇವೆ ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಆರಂಭ ಮಾಡಿದ್ದ ಬೈಕ್ ಆ್ಯಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲು ಇಲಾಖೆ ಮುಂದಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಸೇವೆ ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆಯು 2015ರಲ್ಲಿ ಬೈಕ್ ಆ್ಯಂಬುಲೆನ್ಸ್‌ಗಳು ರಸ್ತೆಗಿಳಿದಿದ್ದವು. ಈ ಸೇವೆಯ ಮೂಲಕ ಸಂಚಾರ ದಟ್ಟಣೆ ಮಧ್ಯೆ ಶೀಘ್ರವಾಗಿ ವೈದ್ಯಕೀಯ ಸೇವೆ ಸಿಗಲಿ ಎಂಬ ಉದ್ದೇಶದಿಂದ ಆರಂಭ ಮಾಡಲಾಗಿತ್ತು.

ಆರೋಗ್ಯ ಇಲಾಖೆಯಿಂದ ಅಪಘಾತ ಪ್ರಕರಣಗಳು ತಪ್ಪಿಸಲು ಕ್ರಮ ಕೈಗೊಂಡರೂ 2017 ರಲ್ಲಿ 5,064 ಹಾಗೂ 2018 ರಲ್ಲಿ 4,611 ರಸ್ತೆ ಅಪಘಾತಗಳು ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆಯೂ ಅಧಿಕವಾಗಿದೆ. ಕಳೆದ ವರ್ಷ 1,337 ಬೈಕ್ ಹಾಗೂ 1,473 ಕಾರು ಅಪಘಾತ ಪ್ರಕರಣಗಳು ನಡೆದಿದ್ದು, ಅದರಲ್ಲಿ 684 ಮಂದಿ ಮೃತಪಟ್ಟಿದ್ದಾರೆ. ಅಪಘಾತವಾದಾಗ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡುತ್ತಾರೆ. ನಗರದ ಟ್ರಾಫಿಕ್‌ನಲ್ಲಿ ನುಸುಳಿಕೊಂಡು ಬರುವಷ್ಟರಲ್ಲಿ ಗಾಯಗೊಂಡವರು ಮೃತಪಡುತ್ತಾರೆ.

ರಸ್ತೆ ಅಪಘಾತದಲ್ಲಿ ಸಣ್ಣ ಗಾಯವಾದವರು ಬೈಕ್ ಆ್ಯಂಬುಲೆನ್ಸ್ ಬಗ್ಗೆ ಸಣ್ಣ ಮಾಹಿತಿಯಿಲ್ಲದೆ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಬೈಕ್ ಆ್ಯಂಬುಲೆನ್ಸ್ ಸೇವೆಗೆ ಹಿನ್ನಡೆಯಾಗಿದೆ. ಅದೇ ರೀತಿ ಸಂಚಾರ ದಟ್ಟಣೆಯ ಪ್ರದೇಶದಲ್ಲಿ ಬೇಗನೆ ಸ್ಥಳಕ್ಕೆ ತಲುಪುವುದು ಕಷ್ಟವಾಗುತ್ತಿದೆ. ಆದುದರಿಂದಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೇ ಈ ಸೇವೆ ನಿಲ್ಲಿಸಲು ಇಲಾಖೆ ಸಿದ್ಧತೆ ನಡೆಸಿದೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ಸೇವೆ ಯಶಸ್ವಿಯಾದ್ದರಿಂದ, ಅಧಿಕ ಸಂಚಾರ ದಟ್ಟಣೆಯಿರುವ ಪ್ರದೇಶದಲ್ಲಿ ಶೀಘ್ರ ಸೇವೆ ನೀಡಲು ಸಹಕಾರಿ ಎಂಬ ಉದ್ದೇಶದಿಂದ ಇದನ್ನು ಪರಿಚಯಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸಿಬ್ಬಂದಿ ರಜಾ ಇದ್ದರೆ ಸೇವೆ ವ್ಯತ್ಯಯವಾಗುತ್ತದೆ. ಹೀಗಾಗಿ, ಹಂತಹಂತವಾಗಿ ಸೇವೆ ಸ್ಥಗಿತ ಮಾಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿ ಬೈಕ್ ಆ್ಯಂಬುಲೆನ್ಸ್‌ಗೆ ಒಬ್ಬ ಬೈಕ್ ಸವಾರ ಇದ್ದಾರೆ. ಒಬ್ಬ ಬೈಕ್ ಚಾಲಕ ರಜೆ ಪಡೆದರೆ ಅಂದು ಅದು ಸೇವೆ ಇರುವುದಿಲ್ಲ. ಇದೇ ರೀತಿಯಲ್ಲಿ ಪ್ರತಿದಿನ ಹತ್ತಾರು ಜನರು ರಜೆ ಪಡೆಯುತ್ತಾರೆ. ಆಗ ಗಾಯಗೊಂಡವರಿಗೆ ಶೀಘ್ರವಾಗಿ ಚಿಕಿತ್ಸೆ ಮಾಡಲು ಕಷ್ಟವಾಗುತ್ತಿದೆ. ಅಲ್ಲದೆ, ನರ್ಸಿಂಗ್ ಕೋರ್ಸ್ ಮಾಡಿದವರನ್ನು ಅಷ್ಟೇ ಬೈಕ್ ಚಾಲಕರಾಗಿ ನೇಮಿಸಿಕೊಳ್ಳಬೇಕು. ಆದರೆ, ನರ್ಸಿಂಗ್ ಮಾಡಿದವರು ಈ ಸೇವೆಗೆ ಮುಂದಾಗುತ್ತಿಲ್ಲ. ಆದುದರಿಂದಾಗಿ, ಇದು ಹಿಂದುಳಿಯಲು ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News